
ಬೀದರ್: ಮೊಬೈಲ್ ಚಾರ್ಜ್(While Mobile Charging) ಹಾಕುವಾಗ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಮಂಜುನಾಥ್ ನಗರದ ಪಿಜಿಯಲ್ಲಿ (Manjunath Nagar PG) ಬೀದರ್ ಮೂಲದ 24 ವರ್ಷದ ವಾಸವಿದ್ದ ವಿದ್ಯಾರ್ಥಿ ಶ್ರೀನಿವಾಸ್ (Shrinivas) ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದಾನೆ.
ಬೀದರ್ ನಿಂದ ಬೆಂಗಳೂರಿಗೆ ಬಂದು ಸಾಫ್ಟ್ ವೇರ್ ಕೋರ್ಸ್ ಮಾಡುತ್ತಿದ್ದ ಶ್ರೀನಿವಾಸ್ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ರೂಮ್ ನಲ್ಲಿ ಮೊಬೈಲ್ ಚಾರ್ಜ್ ಹಾಕುವಾಗ ಚಾರ್ಜಿಂಗ್ ವೈರ್ ಅಥವಾ ಸ್ವಿಚ್ ಬೋರ್ಡ್ ನಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಾರ್ಜರ್ ವೈರ್ ಕೂಡ ಸ್ವಲ್ಪ ಡ್ಯಾಮೇಜ್ ಆಗಿತ್ತು ಎಂದು ಹೇಳಲಾಗಿದ್ದು, ಕರೆಂಟ್ ಶಾಕ್ ತಗುಲಿ ಅಂಗಾತ ಬಿದ್ದಿದ್ದ ಶ್ರೀನಿವಾಸ್ ನನ್ನು ಊಟಕ್ಕೆ ಕರೆಯಲು ಬಂದ ಪಕ್ಕದ ಬೆಡ್ ವಿದ್ಯಾರ್ಥಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಸವೇಶ್ವರ ನಗರ ಪೊಲೀಸರಿಗೆ ಪಿಜಿ ಸಿಬ್ಬಂದಿ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಬಂದು ಮೃತದೇಹವನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

