
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪದ ಯಲಳ್ಳಿ ಗ್ರಾಮಕ್ಕೆ ಚಿರತೆಯೊಂದು ಏಕಾಏಕಿ ನುಗ್ಗಿದೆ. ನಂಜನಗೂಡು ತಾಲೂಕಿನ ಹಳ್ಳಿಯೊಂದಕ್ಕೆ ಚಿರತೆ ನುಗ್ಗಿದ ಬಳಿಕ ಗ್ರಾಮಸ್ಥರು ಚಿರತೆ ಕಂಡು ಭಯಭೀತರಾಗಿದ್ದಾರೆ. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 4 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಪಾಳುಬಿದ್ದ ಮನೆಯಲ್ಲಿ ಸೇರಿಕೊಂಡಿದ್ದ ಚಿರತೆಯನ್ನು ಸೆರೆ ಹಿಡಿದಿದ್ದಾರೆ.

ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಗೂ ವೇಳೆ ಯುವಕನೊಬ್ಬ ಚಿರತೆ ಜೊತೆಗೆ ಸೆಲ್ಫಿ ತೆಗೆಯುವ ದುಸ್ಸಾಹಸ ಮಾಡಲು ಮುಂದಾಗಿದ್ದಾನೆ. ಅರವಳಿಕೆ ಚುಚ್ಚು ಮದ್ದು ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯುತ್ತಿದ್ದ ವೇಳೆ ಚಿರತೆ ಜೊತೆ ಸೆಲ್ಫಿ ತೆಗೆಯಲು ಹೋಗಿದ್ದ ಯುವಕ ಜಯಶಂಕರ್ ಎಂಬಾತನ ಮೇಲೆ ಚಿರತೆ ದಾಳಿ ಮಾಡಿದೆ. ಗಾಯಾಳು ಜಯಶಂಕರ್‌ನನ್ನು ಮೈಸೂರಿನ ಕೆ.ಆರ್ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗ್ತಿದೆ. ಅಂತಿಮವಾಗಿ ಚಿರತೆ ಸೆರೆಯಾಗಿದ್ರಿಂದ ಗ್ರಾಮದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
