ಲಂಡನ್: ಮಾರುಕಟ್ಟೆ ವಿಸ್ತರಣೆ ದೃಷ್ಟಿಯಿಂದ ಕರ್ನಾಟಕ ಮತ್ತು ಟೋಕಿಯೊ ಮೂಲದ ಸ್ಟಾರ್ಟ್ಅಪ್ಗಳನ್ನು ಪರಸ್ಪರ ಉತ್ತೇಜಿಸಲು ಟೋಕಿಯೊದಲ್ಲಿ ‘ಟೋಕಿಯೊ ಲಭ್ಯತಾ’ ಸಹಯೋಗ ತಂಡಗಳನ್ನು ರಚಿಸುವ ಕುರಿತು ಲಂಡನ್ ನಗರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಗ್ಲೋಬಲ್ ಪ್ರಮೋಷನ್ ಸ್ಟ್ರಾಟಜಿ ನಿರ್ದೇಶಕರಾದ ಶ್ರೀಮತಿ ಕಿಯೊಕೊ ಹಷಿಬಾ ನಡುವೆ ಫಲಪ್ರದ ಚರ್ಚೆಗಳು ನಡೆದವು.
ಲಂಡನ್ ನಗರದಲ್ಲಿ ನಡೆಯುತ್ತಿರುವ ಟೆಕ್ ವೀಕ್ನಲ್ಲಿ ಶೃಂಗಶಭೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ತೆರಳಿರುವ ತಂಡದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೊನಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಶರತ್ ಬಚ್ಚೇಗೌಡ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಏಕ್ರೂಪ್ ಕೌರ್ ಮತ್ತು ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಟೋಕಿಯೋ ಇನ್ನೋವೇಶನ್ ಬೇಸ್ ಸಹಯೋಗದೊಂದಿಗೆ ಕ್ಯುರೇಟಿಂಗ್ ಎ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಕಾರ್ಯಕ್ರಮದ ಸಂಬಂಧ ಮಾರುಕಟ್ಟೆ ಪ್ರವೇಶ ಕುರಿತಂತೆ ಮಾತುಕತೆ ನಡೆಯಿತು. ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಶೃಂಗಸಭೆ 2024 ಸೇರಿದಂತೆ ಟೆಕ್ ಈವೆಂಟ್ಗಳಲ್ಲಿ ಭಾಗವಹಿಸುವಂತೆ ಸಚಿವ ಪ್ರಿಯಂಕ್ ಖರ್ಗೆ ಆಹ್ವಾನ ನೀಡಿದರು.
ಸಚಿವ ಪ್ರಿಯಾಂಕ್ ಖರ್ಗೆ, ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹಾಗೂ ತಂಡ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಇನ್ನಿತರ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ರಾಜ್ಯದ ಸ್ಟಾರ್ಟ್ಆಪ್ ಮಾರುಕಟ್ಟೆ ವಿಸ್ತರಣೆ ಕುರಿತಂತೆ ಚರ್ಚಾಸಭೆಗಳಲ್ಲಿ ಪಾಲ್ಗೊಂಡರು.