ಬೆಂಗಳೂರು: ಮದ್ಯ ಸೇವಿಸಿದ್ದ ಕಿಡಿಗೇಡಿಗಳು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
ನಗರದ ತಲಘಟ್ಟಪುರ ಠಾಣೆಯಲ್ಲಿಯಲ್ಲಿನ ಆವಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮದ್ಯ ಸೇವಿಸಿ ಬಾಲಾಜಿ, ಯೋಗಿ ಸೇರಿದಂತೆ ಮೂವರು ಕುಡುಕರು ತಮ್ಮ ಪಾಡಿಗೆ ತಾವು ರಸ್ತೆಯಲ್ಲಿ ಆಟವಾಡುತ್ತಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳೀಯರು ಮಹಿಳೆಯರನ್ನು ರಕ್ಷಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಾನುವಾರ ಸಂಜೆ 6 ಗಂಟೆ ವೇಳೆ ಮಹಿಳೆ ಹಾಗೂ ಯುವತಿಯೊಬ್ಬರು ತಮ್ಮ ಮನೆಯ ರಸ್ತೆಯಲ್ಲಿ ಮಕ್ಕಳೊಂದಿಗೆ ವಾಲಿಬಾಲ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪಾನಮತ್ತರಾಗಿದ್ದ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಮಹಿಳೆಯರು ಪ್ರಶ್ನಿಸಿದ್ದಾರೆ. ಆಗ ಕುಡುಕರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಮಹಿಳೆ ಹಾಗೂ 21 ವರ್ಷದ ಯುವತಿ ಗಾಯಗೊಂಡಿದ್ದಾರೆ. ಸ್ಥಳೀಯರು ಹೆಚ್ಚಾಗಿ ಜಮಾಯಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.