
ಪಕ್ಷಕ್ಕೆ ಮುಜುಗರ ತಪ್ಪಿಸಲು ಬಿ.ನಾಗೇಂದ್ರ ರಾಜೀನಾಮೆ : ಡಿಸಿಎಂ ಡಿಕೆಶಿ
“ಪಕ್ಷಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಲು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಚಿವ ನಾಗೇಂದ್ರ ಅವರು ನನ್ನ ಬಳಿ ಚರ್ಚೆ ನಡೆಸಿದ್ದರು. ರಾಜೀನಾಮೆ ನೀಡಿ ಎಂದು ನಾವು ಹೇಳಿರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಹೀಗೆ ಹೇಳಿದರು.”ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಸಿಬಿಐ ಸೇರಿದಂತೆ ಯಾವುದೇ ರೀತಿಯ ತನಿಖೆಗೆ ನೀಡಿ ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಸಚಿವ ನಾಗೇಂದ್ರ ಅವರು ನನ್ನ ಬಳಿ ಚರ್ಚೆ ನಡೆಸುವ ವೇಳೆ ಹೇಳಿದರು. ಯಾವುದೇ ಸಚಿವರಿಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲು ಧೈರ್ಯ ಬರುವುದಿಲ್ಲ” ಎಂದರು.
“ಬುಧವಾರ ಸಂಜೆ ಅವರ ಬಳಿ ವಾಸ್ತವಾಂಶ ಏನಾಗಿದೆ ಎಂದು ತಿಳಿದುಕೊಂಡೆವು. ಸಿಎಂ ಅವರು ರಾಜೀನಾಮೆಗೆ ಸೂಚನೆ ನೀಡಿದ್ದಾರೆ ಎನ್ನುವ ಮಾಧ್ಯಮಗಳ ವರದಿ ಸುಳ್ಳು. ಪಕ್ಷಕ್ಕೆ ಮುಜುಗರವಾಗುವುದು ಬೇಡ ಎನ್ನುವುದು ನಾಗೇಂದ್ರ ಅವರ ಅಭಿಲಾಷೆ. ಆದ ಕಾರಣ ರಾಜೀನಾಮೆ ತೀರ್ಮಾನ ಮಾಡುತ್ತೇನೆ ಎಂದು ನಮ್ಮ ಜತೆ ಹೇಳಿದ್ದರು” ಎಂದು ತಿಳಿಸಿದರು.
ಸೋತೆ ಎಂದು ಮನೆಯಲ್ಲಿ ಕುಳಿತುಕೊಳ್ಳುವವನು ನಾನಲ್ಲ
ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಅವರನ್ನು ಚುನಾವಣೆಗೆ ನಿಲ್ಲಿಸುವ ಆಲೋಚನೆ ಇದೆಯೇ ಎಂದಾಗ “ನಿಮಗೆ (ಮಾಧ್ಯಮದವರಿಗೆ) ಇರಬಹುದು. ಈಗಾಗಿರುವ ಸೋಲಿನಿಂದ ನಾವು ಚೇತರಿಸಿಕೊಳ್ಳಬೇಕು. ಸೋತೆ ಎಂದು ಮನೆಯಲ್ಲಿ ಕುಳಿತುಕೊಳ್ಳುವವನು ನಾನಲ್ಲ. ನನ್ನನ್ನು ನಂಬಿರುವ ಜನ, ಕಾರ್ಯರ್ತರಿಗೆ ಶಕ್ತಿ ತುಂಬಲು ಕೆಲಸ ಮಾಡುತ್ತೇನೆ. ನನ್ನ ದೇಹದ ಕೊನೆಯ ರಕ್ತದ ಹನಿ ಇರುವ ತನಕ ನಂಬಿರುವ ಕಾರ್ಯಕರ್ತರ ರಕ್ಷಣೆ ಮಾಡಲು ತಂತ್ರ, ಪ್ರತಿತಂತ್ರ ಏನು ಮಾಡಬೇಕೋ ಎಲ್ಲವೂ ಗೊತ್ತಿದೆ. ದೊಡ್ಡ, ದೊಡ್ಡ ನಾಯಕರು ಸೋತಿದ್ದಾರೆ. ಇದು ನನ್ನ ವೈಯಕ್ತಿಕ ಸೋಲು” ಎಂದು ಹೇಳಿದರು.


