ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.
ಪರಿಣಾಮ 19ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೇಂದ್ರ ಗಾಜಾದ ಅಲ್-ಬುರೆಜಿ ಮತ್ತು ಅಲ್ ಮಘಾಝಿ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆದಿದೆ. ಹಮಾಸ್ ಉಗ್ರರು ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿ ಸುಮಾರು 1,200 ಜನರ ಸಾವಿಗೆ ಕಾರಣರಾಗಿದ್ದರು. ಅಲ್ಲದೇ, ಆ ವೇಳೆ ಸುಮಾರು 250ಕ್ಕೂ ಅಧಿಕ ಜನರನ್ನು ಅಪಹರಿಸಿದ್ದರು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಇಸ್ರೇಲ್ ಕೂಡ ಹಲವರನ್ನು ಬಲಿ ಪಡೆದಿದೆ.
ಮೇ 29ರಂದು ದಾಳಿ ನಡೆಸಿತ್ತು ಇಸ್ರೇಲ್ ವಾಯು ದಾಳಿಗೆ ಗಾಜಾದ ರಫಾದಲ್ಲಿನ ನಿರಾಶ್ರಿತರ ಶಿಬಿರದಲ್ಲಿದ್ದ ಕನಿಷ್ಠ 45 ಜನ ಸಾವನ್ನಪ್ಪಿದ್ದರು. ಟೆಲ್ ಅವಿವ್ ಪ್ರದೇಶದ ಮೇಲೆ ಹಮಾಸ್ ಉಗ್ರರು ರಾಕೆಟ್‌ಗಳ ದಾಳಿ ನಡೆಸಿದ ಬೆನ್ನಲ್ಲೇ ಭಾನುವಾರ ತಡರಾತ್ರಿ ರಫಾ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿತ್ತು. ಕೂಡಲೇ ಕಾರ್ಯಾಚರಣೆ ನಿಲ್ಲಿಸಬೇಕೆಂದು ಇಸ್ರೇಲ್‌ಗೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ಸೂಚಿಸಿತ್ತು. ಆದರೂ ಇಸ್ರೇಲಿ ಪಡೆಗಳು ಆಕ್ರಮಣವನ್ನು ಮತ್ತಷ್ಟು ಹೆಚ್ಚಿಸಿದೆ.