ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಗ್ಯಾರಂಟಿಗಳ (Guarantee) ಜೊತೆಗೆ ಅಭಿವೃದ್ಧಿ ಕೆಲಸಗಳೂ ನಿಂತಿಲ್ಲ. ಮುಂದೆಯೂ ನಿಲ್ಲುವುದಿಲ್ಲ ಎಂದು ಹೇಳಿದರು.
ನಾವು ಅಧಿಕಾರಕ್ಕೆ ಬಂದ 9 ತಿಂಗಳ ಒಳಗೆ 5 ಗ್ಯಾರಂಟಿಗಳನ್ನ ಜಾರಿ ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗಿದೆ. ಜೂನ್ ತಿಂಗಳಿನಿಂದ 2024ರ ಏಪ್ರಿಲ್ ವರೆಗೆ 201 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, 4,857.95 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ (AnnaBhagya Scheme) 4.10 ಕೋಟಿ ಫಲಾನುಭವಿಗಳು ಉಪಯೋಗ ಪಡೆದುಕೊಂಡಿದ್ದು, 5,754.06 ಕೋಟಿ ರೂ. ವೆಚ್ಚ, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ವಿದ್ಯುತ್ ನೀಡಲಾಗುತ್ತಿದ್ದು, 1.60 ಕೋಟಿ ಫಲಾನುಭವಿಗಳು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಇದಕ್ಕೆ 7,436 ಕೋಟಿ ರೂ. ವೆಚ್ಚ ತಗುಲಿದೆ. ಗೃಹಲಕ್ಷ್ಮೀ ಯೋಜನೆ 1.20 ಕೋಟಿ ಫಲಾನುಭವಿಗಳಿಗೆ ತಲುಪಿದ್ದು, 23,290.40 ಕೋಟಿ ರೂ. ವೆಚ್ಚ ಆಗಿದೆ. ಇನ್ನೂ ಯುವನಿಧಿ ಯೋಜನೆಯಿಂದ 1.57 ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. 5 ಗ್ಯಾರಂಟಿಗಳಿಗೆ 36 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಗ್ಯಾರಂಟಿಗಳ ಹೊರತಾಗಿಯೂ ನೀರಾವರಿಗೆ 16,388 ಕೋಟಿ ರೂ. ಇಟ್ಟಿದ್ವಿ, 18,195 ಕೋಟಿ ರೂ. ಖರ್ಚು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಗೆ 9,727 ಕೋಟಿ ರೂ. ಇಟ್ಟಿದ್ವಿ, 9,641 ಕೋಟಿ ರೂ. ಖರ್ಚು ಮಾಡಿದ್ದೀವಿ. ಹೀಗಿದ್ದರೂ ಸರ್ಕಾರ ಪಾಪರ್ ಆಗ್ಬಿಟ್ಟಿದೆ, ಅಭಿವೃದ್ಧಿ ಆಗ್ತಿಲ್ಲ ಅಂತಾರೆ ಯಡಿಯೂರಪ್ಪ ಎಂದು ಆರೋಪಿಸಿದರು.