ಟೆಹ್ರಾನ್: ಹೆಲಿಕಾಪ್ಟರ್ ಪತನಗೊಂಡ ಪರಿಣಾಮ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ದುರ್ಮರಣ ಹೊಂದಿದ್ದಾರೆ. ಅಲ್ಲದೇ, ಹೆಲಿಕಾಪ್ಟರ್ ನಲ್ಲಿದ್ದ ಇನ್ನುಳಿದವರೂ ಸಾವನ್ನಪ್ಪಿದ್ದಾರೆ ಎಂದು ಇರಾನ್ (Iran) ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆಯಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್, ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮಾಲೆಕ್ ರಹಮತಿ, ತಬ್ರಿಜ್ನ ಇಮಾಮ್ ಮೊಹಮ್ಮದ್ ಅಲಿ ಅಲೆಹಶೆಮ್, ಪೈಲಟ್, ಕೋ ಪೈಲಟ್, ಸಿಬ್ಬಂದಿ ಮುಖ್ಯಸ್ಥ, ಭದ್ರತಾ ಮುಖ್ಯಸ್ಥ ಹಾಗೂ ಗನ್ ಮ್ಯಾನ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇರಾನ್ನ ವಾಯುವ್ಯ ಪರ್ವತ ಪ್ರದೇಶದ ಜೋಲ್ಫಾದಲ್ಲಿ ಇಬ್ರಾಹಿಂ ರೈಸಿ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಸ್ಥಳವನ್ನು ಮಾನವ ರಹಿತ ಎಂದು ಗುರುತಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪರ್ವತ ಶ್ರೇಣಿಗಳ ನಡುವೆ ಇಬ್ರಾಹಿಂ ರೈಸಿ ಹಾಗೂ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪ್ಯರಿತ್ಯದಿಂದ ಭಾನುವಾರ ಸಂಜೆ (ಮೆ 19) ಪತನಗೊಂಡಿತ್ತು. ಆನಂತರ ಅದು ಸಂಪರ್ಕ ಕಳೆದುಕೊಂಡಿತ್ತು.
ಇಬ್ರಾಹಿಂ ರೈಸಿ ಮತ್ತು ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಗಡಿಭಾಗದಲ್ಲಿ ಕ್ವಿಜ್ ಖಲಾಸಿ ಅಣೆಕಟ್ಟನ್ನು ಉದ್ಘಾಟಿಸಿ ಇರಾನಿನ ನಗರ ತಬ್ರಿಜ್ಗೆ ಮರಳಿ ಬರುತ್ತಿರುವಾಗ ಈ ದುರ್ಘಟನೆ ನಡೆದಿದೆ.