ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಸರ್ಕಾರಿ ಅಧಿಕಾರಿಯಿಂದಲೇ ಲಕ್ಷ ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ. ಸಿಐಡಿ ಸೆಕ್ಷನ್ ಸೂಪರಿಂಟೆಂಡೆಂಟ್ ಸೇರಿದಂತೆ ಇಬ್ಬರನ್ನು ವಿಜಯನಗರ ಪೊಲೀಸರು ಬಂಧನ ಮಾಡಿದ್ದಾರೆ.
ಬೆಂಗಳೂರಿನ ಸಿಐಡಿ ಘಟಕದಲ್ಲಿ ಸೆಕ್ಷನ್ ಸೂಪರಿಂಟೆಂಡೆಂಟ್ ಆಗಿದ್ದ ಅನಿತಾ. ಬಿ.ಎಸ್, ರಾಮಚಂದ್ರ ಭಟ್ ಎಂಬುವರನ್ನು ಬಂಧನ ಮಾಡಲಾಗಿದೆ. ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಸುನಿಲ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ.
2021ರಲ್ಲಿ ಸ್ನೇಹಿತರೊಬ್ಬರ ಮೂಲಕ ಸುನಿಲ್ಗೆ ಪರಿಚಯವಾಗಿದ್ದ ರಾಮಚಂದ್ರ ಭಟ್ ಎಂಬುವರು, ಸುನೀಲ್ಗೆ ಅನಿತಾರನ್ನ ಪರಿಚಯಿಸಿದ್ದ. ಈ ವೇಳೆ KPSC ಮೂಲಕ PWD ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ಕೊಡಿಸುವುದಾಗಿ ನಂಬಿಸಿದ್ದರು.
ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ 40 ಲಕ್ಷ ರೂಪಾಯಿ ಹಣ ಪಡೆದಿದ್ದ ಅನಿತಾ, ಸುನಿಲ್ಗೆ ಯಾವುದೇ ಸರ್ಕಾರಿ ಕೆಲಸ ಕೊಡಿಸದೆ, ಹಣವನ್ನೂ ವಾಪಸ್ ನೀಡದ ಆರೋಪಿಗಳು ವಂಚನೆ ಮಾಡಿದ್ದರು.
ಸರ್ಕಾರಿ ಹುದ್ದೆಯನ್ನೂ ಕೊಡಿಸದೆ, ಕೊಟ್ಟ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದರು. ಈ ಬಗ್ಗೆ ವಿಜಯನಗರ ಠಾಣೆಗೆ ಸುನಿಲ್ ದೂರು ನೀಡಿದ್ದರು. ಸುನೀಲ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನ ಮಾಡಲಾಗಿದೆ.