ಕೊಡಗು: ಸಣ್ಣಪುಟ್ಟ ಕಾರಣಗಳಿಗೆ ಇತ್ತೀಚೆಗೆ ಮದುವೆ ಮುರಿದು ಬೀಳುತ್ತಿರುವುದು ಸಾಮಾನ್ಯವಾಗುತ್ತಿದೆ. ಆದರೆ, ಇಲ್ಲೊಂದು ಮದುವೆಯಲ್ಲಿ ಸಿಹಿ ಮಾಡಿಲ್ಲ ಎಂಬ ಕಾರಣಕ್ಕೆ ಮದುವೆಯೊಂದು ಮುರಿದು ಬಿದ್ದಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಗ್ರಾಮದಲ್ಲಿ ನಡೆದಿದೆ. ನಿವೃತ್ತ ಸೈನಿಕ ಮಂಜುನಾಥ್ ಪುತ್ರಿ ಕೃತಿಕ ವಿವಾಹ ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಹರ್ಷಿತ್ ಜೊತೆ ನಿಶ್ಚಯವಾಗಿತ್ತು. ಈ ಮದುವೆ ಸೋಮವಾರ ಪೇಟೆಯ ಜಾನಕಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ಎರಡೂ ಕಡೆಯವರು ಮದುವೆಗೆ ಬಂದಿದ್ದರು. ಆದರೆ, ವಧುವಿನ ಕಡೆಯವರು ಸರಿಯಾಗಿ ಉಪಚಾರ ಮಾಡಿಲ್ಲ ಎಂದು ವರನ ಕಡೆಯವರು ಜಗಳ ತೆಗೆದಿದ್ದಾರೆ. ನಿಶ್ಚಿತಾರ್ಥ ಸಂದರ್ಭದಲ್ಲಿ ಕೂಡ ಗಲಾಟೆ ನಡೆದಿತ್ತು. ಗಂಡು ಹೆಣ್ಣು ಪರಸ್ಪರ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ ಇದೇ ಸಂದರ್ಭ ಮದುವೆ ಊಟಕ್ಕೆ ಸಿಹಿ ಮಾಡಿಲ್ಲವೆಂದು ವರನ ಕಡೆಯವರು ಗಲಾಟೆ ಮಾಡಿಕೊಂಡಿದ್ದಾರೆ. ಆಗ ಜಗಳ ವಿಕೋಪಕ್ಕೆ ತೆರಳಿದೆ. ಆಗ ವರ ಉಂಗುರವನ್ನು ಮರಳಿ ಕೊಡುವಂತೆ ಕೇಳಿದ್ದಾನೆ. ಆಗ ಕೋಪಗೊಂಡ ವಧು ಉಂಗುರ ಬಿಚ್ಚಿದ್ದಾರೆ. ಹೀಗಾಗಿ ಮದುವೆ ಮುರಿದು ಬಿದ್ದಿದೆ.
ವರನ ಕಡೆಯವರು 100 ಗ್ರಾಂ ಚಿನ್ನ ಕೇಳಿದ್ದರು. 60 ಗ್ರಾಂ ಚಿನ್ನ ನೀಡಲಾಗಿತ್ತು. ಅಲ್ಲದೆ ದಂಪತಿ ವಾಸ ಮಾಡಲು ಮನೆ ಬೊಗ್ಯಕ್ಕೆ ಹಾಕಲು 10 ಲಕ್ಷ ರೂ ಕೇಳುದ್ದರಂತೆ. ಆದರೆ ಆ ಹಣ ನೀಡಲು ಆಗಿರಲಿಲ್ಲ. ಈ ಎಲ್ಲಾ ಕಾರಣದಿಂದ ಮದುವೆ ಮುರಿದಿದ್ದಾರೆ ಎಂದು ದೂರು ದಾಖಲಾಗಿದೆ.