ನವದೆಹಲಿ: ಭಯೋತ್ಪಾದಕ ಸಂಘಟನೆ `ಸಿಖ್ಸ್ ಫಾರ್ ಜಸ್ಟೀಸ್’ನಿಂದ ದೇಣಿಗೆ ಪಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸಂಕಷ್ಟ ಶುರುವಾದಂತಾಗಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ (VK Saxena) ಕೇಜ್ರಿವಾಲ್ (Arvind Kejriwal) ವಿರುದ್ಧ ಎನ್‍ಐಎ (NIA) ತನಿಖೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಕುರಿತು ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ರಾಜಭವನದ ಮೂಲಗಳು ಹೇಳಿವೆ.

ಸಕ್ಸೆನಾ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಕೇಜ್ರಿವಾಲ್ ನೇತೃತ್ವದ ಎಎಪಿಯು ದೇವೇಂದ್ರ ಪಾಲ್ ಭುಲ್ಲರ್ ಬಿಡುಗಡೆಗೆ ಅನುಕೂಲವಾಗುವಂತೆ ಉಗ್ರ ಖಲಿಸ್ತಾನಿ ಗುಂಪುಗಳಿಂದ ದೇಣಿಗೆ ಪಡೆದಿರುವ ಕುರಿತು ಆರೋಪ ಕೇಳಿ ಬಂದಿದ್ದು, ದೂರುದಾರರು ಕಳುಹಿಸಿರುವ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆ ಒಳಪಡಿಸುವುದು ಹಾಗೂ ಈ ಪ್ರಕರಣದ ತನಿಖೆ ಎನ್‍ಐಎಗೆ ವಹಿಸುವ ಅಗತ್ಯವಿದೆ ಎಂದು ಸಕ್ಸೇನಾ ಅಭಿಪ್ರಾಯ ಪಟ್ಟಿದ್ದಾರೆ.
ಆದರೆ, ಇದಕ್ಕೆ ಆಪ್ ಕಿಡಿಕಾರಿದ್ದು, ಇದು ಬಿಜೆಪಿಯ ಪಿತೂರಿ ಎಂದು ಆರೋಪಿಸಿದೆ. ಈಗಾಗಲೇ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ.
			
                                
                                
                                