ಹಾಸನ ಜಿಲ್ಲೆಯ ರಾಜಕಾರಣದಲ್ಲಿ ತಮ್ಮನ್ನು ಬಿಟ್ಟು ಬೇರೆ ಯಾರೂ ಇಲ್ಲ ಎನ್ನುವಂತಿದ್ದ ದೇವೇಗೌಡರ ಕುಟುಂಬಕ್ಕೆ ಸಿಡಿಲು ಬಡಿದಿದೆ. ಹೆಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳು ವೈರಲ್ ಆದ ಬಳಿಕ ಎಸ್ಐಟಿ ತನಿಖೆ ಶುರುವಾಗಿದೆ. ಈ ನಡುವೆ ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ ತೀರ್ಪು ನೀಡುವ ಸಾಧ್ಯತೆ ಇದೆ. ಇದರ ನಡುವೆ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೈಸೂರಿನ ಕೆ.ಆರ್ ನಗರದಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ.
ಮಹಿಳೆಯನ್ನು ಕಿಡ್ನ್ಯಾಪ್ ಮಾಡಿಸಿದ್ರಾ ರೇವಣ್ಣ..?
ಮಗ ಪ್ರಜ್ವಲ್ ರೇವಣ್ಣ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ವಿಡಿಯೋದಲ್ಲಿರುವ ಮಹಿಳೆಯರನ್ನು ಸಂಪರ್ಕಿಸಿ ದೂರು ನೀಡದಂತೆ ತಡೆಯುವ ಯತ್ನ ನಡೆದಿದೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪುತ್ರ 20 ವರ್ಷದ ರಾಜು ಎಂಬಾತ ತನ್ನ ತಾಯಿ ನಾಪತ್ತೆಯಾಗಿದ್ದಾರೆ. ಹೆಚ್.ಡಿ ರೇವಣ್ಣ ಕರೆದುಕೊಂಡು ಬರಲು ತಿಳಿಸಿದ್ದಾರೆ ಎಂದು ಸತೀಶ್ ಬಾಬಣ್ಣ ಎಂಬುವರು ನನ್ನ ತಾಯಿಯನ್ನು ಕರೆದುಕೊಂಡು ಹೋದರು. ಆದರೆ ಇಲ್ಲೀವರೆಗೂ ಎಲ್ಲಿದ್ದಾರೆ ಎನ್ನುವುದೇ ತಿಳಿದಿಲ್ಲ. ಅದರ ಜೊತೆಗೆ ನನ್ನ ತಾಯಿಯ ವಿಡಿಯೋಗಳು ವೈರಲ್ ಆಗಿರುವ ಸಂಗತಿಯೂ ಗೊತ್ತಾಯ್ತು. ನನ್ನ ತಾಯಿ ಎಲ್ಲಿದ್ದಾರೆ ಎಂದು ಪತ್ತೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ಮಹಿಳೆ ಯಾರು..? ರೇವಣ್ಣ ಕಿಡ್ನ್ಯಾಪ್ ಮಾಡಿಸಿದ್ಯಾಕೆ..?
ಮಹಿಳೆ 2015 ರಿಂದ 6 ವರ್ಷಗಳ ಕಾಲ ಹೊಳೆನರಸೀಪುರದ ಹೆಚ್.ಡಿ ರೇವಣ್ಣ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಕಳೆದ ಮೂರು ವರ್ಷದ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಬಿಟ್ಟು ಊರಿನಲ್ಲೇ ಕೂಲಿ ನಾಲಿ ಮಾಡಿಕೊಂಡು ಇದ್ದರಂತೆ. ಲೋಕಸಭಾ ಚುನಾವಣೆಗೆ ಮೂರ್ನಾಲ್ಕು ದಿನ ಇದ್ದಾಗ ಅಂದರೆ ಏಪ್ರಿಲ್ 22 ರಂದು ಭವಾನಿ ಅಕ್ಕ ಕರೆಯುತ್ತಿದ್ದಾರೆ ಎಂದು ಹೇಳಿ ಮಹಿಳೆಯನ್ನು ಕರೆದುಕೊಂಡು ಹೋಗಿದ್ದ ಸತೀಶ್ ಬಾಬಣ್ಣ, ಚುನಾವಣಾ ದಿನ ಬೆಳಗ್ಗೆ ವಾಪಸ್ ಕರೆದುಕೊಂಡು ಬಂದು ಬಿಟ್ಟಿದ್ದರಂತೆ. ಈ ವೇಳೆ ಪೊಲೀಸಿನವರು ಬಂದರೆ ಏನೂ ಹೇಳಬೇಡಿ, ಪೊಲೀಸರಿಗೆ ಸಿಗಲೇಬೇಡಿ ಎಂದು ಹೇಳಿದ್ದರಂತೆ. ಅದಾಗಿಯೂ ಮತ್ತೆ ಏಪ್ರಿಲ್ 29ರ ರಾತ್ರಿ 9 ಗಂಟೆಗೆ ಬಂದ ಸತೀಶ್ ಬಾಬಣ್ಣ, ನಿಮ್ಮ ತಾಯಿ ವಿರುದ್ಧ ದೂರು ದಾಖಲಾಗಿದೆ. ರೇವಣ್ಣ ಸಾಹೇಬರು ಕರೆದುಕೊಂಡು ಬರುವುದಕ್ಕೆ ತಿಳಿಸಿದ್ದಾರೆ ಎಂದು ಹೇಳಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋದರು. ಇಲ್ಲೀವರೆಗೂ ತಾಯಿ ಸಂಪರ್ಕ ಸಿಕ್ಕಿಲ್ಲ, ಈ ನಡುವೆ ಮೇ 1ರಂದು ನಮ್ಮೂರಿನ ಸ್ನೇಹಿತರು, ನಿಮ್ಮ ತಾಯಿ ವಿಡಿಯೋ ವೈರಲ್ ಆಗಿದೆ ಎಂದು ತಿಳಿಸಿದ್ರು, ನನ್ನ ಭಾವಂದಿರು ಕೂಡ ವಿಡಿಯೋ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಎಂದಿದ್ದಾರೆ.
ಮಗನ ರಕ್ಷಣೆಗಾಗಿ ಅಖಾಡಕ್ಕೆ ಇಳಿದ್ರಾ ಭವಾನಿ, ರೇವಣ್ಣ..?
ಚುನಾವಣೆಗೂ ಮುನ್ನ ಮೂರ್ನಾಲ್ಕು ದಿನಗಳು ಬಾಕಿ ಇದ್ದಾಗ ದೂರು ದಾಖಲಾಗಬಾರದು ಅನ್ನೋ ಕಾರಣಕ್ಕೆ ಮಹಿಳೆಯನ್ನು ಕರೆದುಕೊಂಡು ಹೋಗಿ ಇರಿಸಿಕೊಂಡು ದೂರು ನೀಡದಂತೆ ಮನವೊಲಿಕೆ ಮಾಡುವ ಕಸರತ್ತನ್ನು ಭವಾನಿ ರೇವಣ್ಣ ಮಾಡಿದ್ದಾರೆ ಎನ್ನುವುದು ಈ ಹೇಳಿಕೆಯನ್ನು ಗಮನಿಸಿದಾಗ ತಿಳಿಯುತ್ತದೆ. ಇನ್ನು ಚುನಾವಣೆ ಮುಗಿದ ಬಳಿಕ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡುವ ನಿರ್ಧಾರ ಮಾಡಿತ್ತು. ಯಾವಾಗ ಎಸ್ಐಟಿ ರಚನೆ ಆಯ್ತು, ಆಗ ಮಹಿಳೆಯರನ್ನು ಸಂಪರ್ಕ ಮಾಡಿ ಹೇಳಿಕೆ ಪಡೆಯುವ ಕೆಲಸಕ್ಕೆ ಮುಂದಾಗಿತ್ತು. ಅದನ್ನು ಅರಿತ ಮಾಜಿ ಸಚಿವ ಹೆಚ್.ಡಿ ರೇವಣ್ಣ ತನ್ನ ಹಿಂಬಾಲಕರ ಮೂಲಕ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿಸಿದ್ದಾರೆ ಎನ್ನುವುದು ದೂರಿನಲ್ಲಿರುವ ಪ್ರಮುಖಾಂಶ. ಆದರೆ ಮಹಿಳೆ ಎಲ್ಲಿದ್ದಾರೆ..? ಕರೆದುಕೊಂಡು ಹೋದ ಸತೀಶ್ ಬಾಬಣ್ಣ ಎಂಬಾತ ಯಾರ ಬಳಿಗೆ ಬಿಟ್ಟು ಬಂದ ಅನ್ನೋದು ತನಿಖೆಯಲ್ಲಿ ಗೊತ್ತಾಗಬೇಕಿದೆ. ಒಂದು ಸುಳ್ಳನ್ನು ಮುಚ್ಚಿಡಲು ನೂರು ಸುಳ್ಳು ಹೇಳುವಂತೆ ಮಾಡಿದ ತಪ್ಪನ್ನು ಮುಚ್ಚಿಹಾಕಲು ನೂರು ತಪ್ಪುಗಳನ್ನು ಮಾಡಲು ಮುಂದಾದ್ರಾ..? ಅನ್ನೋದು ತನಿಖೆಯಲ್ಲಿ ಗೊತ್ತಾಗಬೇಕಿದೆ.
ಕೃಷ್ಣಮಣಿ