ಕೊಪ್ಪಳ: ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ಸಂದರ್ಭದಲ್ಲಿ ತಾಯಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಕುಷ್ಟಗಿ ತಾಲೂಕಿನ ತಾವರೇಗಾರ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಲಕ್ಷ್ಮೀ (20) ಸಾವನ್ನಪ್ಪಿದ ಗರ್ಭಿಣಿ. ತಾಯಿ ಮತ್ತು ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆಗೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ತಾಲೂಕಿನ ವಿಠಲಾಪುರ ಗ್ರಾಮದ ಲಕ್ಷ್ಮಿ ಎಂಬುವರಿಗೆ ಸೋಮವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಕುಟುಂಬಸ್ಥರು ತಾವರಗೇರಾ ಗ್ರಾಮದಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಆದರೆ, ಮಂಗಳವಾರ ಸಂಜೆ ಮಹಿಳೆ ಸಾವನ್ನಪ್ಪಿದ್ದಾರೆ. ಹೊಟ್ಟೆಯಲ್ಲಿದ್ದ ಶಿಶು ಕೂಡ ಮೃತಪಟ್ಟಿದೆ. ಗರ್ಭಿಣಿ ಮತ್ತು ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ, ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ, ಮನವೊಲಿಸುವ ಯತ್ನ ಮಾಡಿದ್ದಾರೆ.





