ಮಂಡ್ಯ ಅಂದ್ರೆ ಇಂಡಿಯಾ ಅನ್ನೋ ಮಾತಿದೆ. ಮಂಡ್ಯದ ರಾಜಕೀಯ ಇಡೀ ರಾಜ್ಯವೇ ತಿರುಗಿ ನೋಡುವಂತೆ ನಡೆಯುತ್ತದೆ. ಈ ಬಾರಿಯೂ ಕೂಡ ಮಂಡ್ಯ ಜನರು ಮತದಾನ ಮಾಡುವಲ್ಲಿ ಮಾದರಿಯಾಗಿದ್ದಾರೆ. ರಾಜ್ಯದಲ್ಲಿ ಶೇಕಡವಾರು ಮತದಾನ 69.23 ರಷ್ಟು ಆಗಿದೆ. ಕಳೆದ ಬಾರಿ 2019ರಲ್ಲಿ ಶೇಕಡ 70.4 ರಷ್ಟು ಮತದಾನ ಆಗಿತ್ತು. ಈ ಬಾರಿ ಕಳೆದ ಬಾರಿಗಿಂತಲೂ ಕಡಿಮೆ ಮತದಾನ ಆಗಿದೆ ಅನ್ನೋದು ದುರ್ದೈವದ ಸಂಗತಿ.
ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರದ ಮತದಾನ ಅಂಕಿ ಆಂಶ ನೋಡುವುದಾದರೆ 2019 ರಲ್ಲಿ ಶೇಕಡ 80.5 ರಷ್ಟು ಮತದಾನ ಆಗಿದ್ರೆ ಈ ಬಾರಿ 81.48 ರಷ್ಟು ಮತದಾನ ಮಾಡುವ ಮೂಲಕ ಇಡೀ 14 ಲೋಕಸಭಾ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದೆ. ಕೋಲಾರದಲ್ಲಿ 2019 ರಲ್ಲಿ ಶೇಕಡ 77.2 ರಷ್ಟು ಮತದಾನ ಆಗಿತ್ತು. ಈ ಬಾರಿ ಶೇಕಡ 78.07ರಷ್ಟು ಮತದಾನ ಆಗಿದೆ. ತುಮಕೂರಿನಲ್ಲಿ 2019 ಶೇಕಡ 77.4 ರಷ್ಟು ಮತದಾನ ಆಗಿತ್ತು, ಈ ಬಾರಿ ಶೇಕಡ 77.70 ಅಷ್ಟು ಮತದಾನ ಆಗಿದೆ.
ಹಾಸನದಲ್ಲಿ ಕಳೆದ ಬಾರಿ 2019ರಲ್ಲಿ ಶೇಕಡ 77.3ರಷ್ಟು ಮತದಾನ ಆಗಿತ್ತು. ಈ ಬಾರಿ ಶೇಕಡ 77.51ರಷ್ಟು ಮತದಾನ ಆಗಿದೆ. ದಕ್ಷಿಣ ಕನ್ನಡದಲ್ಲಿ 2019ರಲ್ಲಿ ಶೇಕಡ 77.9ರಷ್ಟು ಮತದಾನ ಆಗಿತ್ತು. ಈ ಬಾರಿ ಶೇಕಡ 77.43ರಷ್ಟು ಮತದಾನ ಆಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಳೆದ ಬಾರಿ 2019ರಲ್ಲಿ
76.7ರಷ್ಟು ಮತದಾನ ಆಗಿತ್ತು. ಈ ಬಾರಿ ಶೇಕಡ 76.82 ರಷ್ಟು ಮತದಾನ ಆಗಿದೆ. ಚಾಮರಾಜನಗರದಲ್ಲಿ 2019ರಲ್ಲಿ ಶೇಕಡ 75.3ರಷ್ಟು ಮತದಾನ ಆಗಿತ್ತು. ಈ ಬಾರಿ ಶೇಕಡ 76.59 ರಷ್ಟು ಮತದಾನ ಆಗಿದೆ.
ಉಡುಪಿ-ಚಿಕ್ಕಮಗಳೂರಲ್ಲಿ 2019 ಶೇ. 76.1ರಷ್ಟು ಮತ ಚಲಾವಣೆ ಆಗಿದ್ರೆ ಈ ಬಾರಿ ಶೇ. 76.06 ರಷ್ಟು ಮತದಾನ ಆಗಿದೆ. ಕೋಟೆನಾಡು ಚಿತ್ರದುರ್ಗದಲ್ಲಿ 2019ರಲ್ಲಿ ಶೇ. 70.8 ರಷ್ಟು ಮತದಾನ ಆಗಿದ್ರೆ, ಈ ಬಾರಿ ಶೇ. 73.11ರಷ್ಟು ಮತದಾನ ಆಗಿದೆ. ಇನ್ನು ಮೈಸೂರು-ಕೊಡಗು ಕ್ಷೇತ್ರದಲ್ಲಿ 2019ರಲ್ಲಿ ಶೇ. 69.5ರಷ್ಟು ಮತ ಚಲಾವಣೆ ಆಗಿತ್ತು. ಈ ಬಾರಿ ಶೇ. 70.45 ರಷ್ಟು ಮತ ಚಲಾವಣೆ ಆಗಿದೆ.
ಕಳೆಪೆ ಸಾಧನೆ ಮಾಡಿದ ನಮ್ಮ ಬೆಂಗಳೂರು!
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 2019ರಲ್ಲಿ ಶೇ.64.9 ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇ. 67.29ರಷ್ಟು ಮತದಾನ ಆಗುವ ಮೂಲಕ ಬಿಜೆಪಿ – ಕಾಂಗ್ರೆಸ್ ಅಭ್ಯರ್ಥಿಗಳ ಎದೆಯಲ್ಲಿ ತಳಮಳ ಸೃಷ್ಟಿಸಿದೆ. ಶೇಕಡವಾರು ಹೆಚ್ಚಾದ ಮತಗಳು ಯಾರ ಪಾಲು ಅನ್ನೋದ್ರ ಮೇಲೆ ಭವಿಷ್ಯ ನಿರ್ಧಾರ ಆಗುವ ಸಾಧ್ಯತೆಯಿದೆ. ಇನ್ನುಳಿದಂತೆ ಬೆಂಗಳೂರು ಉತ್ತರ 2019ರಲ್ಲಿ ಶೇ. 54.7 ರಷ್ಟು, ಈಗ ಶೇ. 54.42ರಷ್ಟು. ಬೆಂಗಳೂರು ದಕ್ಷಿಣ 2019ರಲ್ಲಿ ಶೇ. 53.7ರಷ್ಟು ಈ ಬಾರಿ ಶೇ.53.15 ರಷ್ಟು. ಬೆಂಗಳೂರು ಕೇಂದ್ರ 2019ರಲ್ಲಿ ಶೇ. 54.3ರಷ್ಟು ಈ ಬಾರಿ ಶೇ. 52.81 ರಷ್ಟು ಮತದಾನ ಆಗಿದೆ. ಮಂಡ್ಯ ಜನರು ಮತದಾನದ ಮಹತ್ವ ಏನು ಎನ್ನುವುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡುವ ರೀತಿಯಲ್ಲಿ ಮಾದರಿಯಾಗಿ ನಿಂತಿದ್ದಾರೆ.
ಕೃಷ್ಣಮಣಿ