ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಇಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಇಲ್ಲಿಯ ಜೆ.ಪಿ.ನಗರದಲ್ಲಿನ ಜಂಬೂ ಸವಾರಿ ದಿನ್ನೆ ಮತಗಟ್ಟೆಗೆ ಮತದಾನ ಮಾಡಲು ಬಂದಿದ್ದ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನವಾಗಿತ್ತು. ಈ ವೇಳೆ ಮತಗಟ್ಟೆಗೆ ಮತದಾನ ಮಾಡಲು ಬಂದ ವೈದ್ಯ ಜೀವ ಉಳಿಸಿರುವ ಘಟನೆ ನಡೆದಿದೆ.
ಬೆಳಿಗ್ಗೆ 11 ಗಂಟೆ ಹೊತ್ತಿಗೆ ಮಹಿಳೆಯು ಮತದಾನ ಮಾಡಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಹಿಳೆಗೆ ಹೃದಯ ಸ್ತಂಭನವಾಗಿದೆ. ಅದೇ ಸಂದರ್ಭದಲ್ಲಿ ಮತ ಗಟ್ಟೆಗೆ ಮತದಾನ ಮಾಡಲು ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಆಗಮಿಸಿದ್ದರು. ಕೂಡಲೇ ಅವರು ಮಹಿಳೆಯ ಜೀವ ಉಳಿಸಿದ್ದಾರೆ.
ಮಹಿಳೆಯ ನಾಡಿಮಿಡಿತ ತುಂಬಾ ಕಡಿಮೆ ಇದೆ ಅಂತಾ ಅನಿಸಿತು. ಅವರು ಕಣ್ಣುಗಳನ್ನು ಮೇಲಕ್ಕೆತ್ತಿ ಧಿಡೀರನೆ ಕುಸಿದರು. ಅವರ ದೇಹದಲ್ಲಿ ಚಲನೆ ಇರಲಿಲ್ಲ. ಅವರು ಉಸಿರುಗಟ್ಟುತ್ತಿದ್ದರು. ಕೂಡಲೇ ಸಿಪಿಆರ್ ಮಾಡಿದೆ. ಸ್ವಲ್ಪ ಗುಣಮುಖರಾದರು. ಅವರ ಸ್ಥಿತಿ ಸುಧಾರಿಸಿತು. ಬಳಿಕ ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದರು. ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ.