ಜೈಪುರ: 17ನೇ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಮತ್ತೊಮ್ಮೆ ಮುಂಬೈ ಹೀನಾಯ ಸೋಲು ಕಂಡಿದೆ.
ರಾಜಸ್ಥಾನ್ ಪರ ಸಂದೀಪ್ ಶರ್ಮಾ ಬೆಂಕಿ ಬೌಲಿಂಗ್, ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದಾಗಿ ರಾಜಸ್ಥಾನ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ನಿಗದಿತ ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡವು ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ 183 ರನ್ ಸಿಡಿಸಿ ಗೆಲುವಿನ ದಡ ಸೇರಿತು.
ಗುರಿ ಬೆನ್ನಟ್ಟಿದ ರಾಜಸ್ಥಾನ್ ಪರ ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ 74 ರನ್ ಗಳ ಜೊತೆಯಾಟವಾಡಿ ಆರಂಭಿಕ ಮುನ್ನಡೆ ನೀಡಿದರು. ಬಟ್ಲರ್ 35 ರನ್(25 ಎಸೆತ, 6 ಬೌಂಡರಿ) ಸಿಡಿಸಿ ಔಟ್ ಆದರು. ಆನಂತರ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಮುರಿಯದ ಎರಡನೇ ವಿಕೆಟ್ ಗೆ 65 ಎಸೆತಗಳಲ್ಲಿ 109 ರನ್ ಗಳಿಸಿ ಗೆಲುವಿನ ನಗೆ ಬೀರುವಂತೆ ಮಾಡಿದರು.
ರಾಜಸ್ಥಾನ್ ತಂಡ ಬ್ಯಾಟಿಂಗ್ ಮಾಡುವ ವೇಳೆ ಮಳೆಯ ಸಮಸ್ಯೆ ಕೂಡ ಕಾಡಿತು. ಆದರೂ ರಾಜಸ್ಥಾನ್ ತಂಡ ಒಂದೇ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಯಶಸ್ವಿ ಜೈಸ್ವಾಲ್ ಔಟಾಗದೇ 104 ರನ್(60 ಎಸೆತ, 9 ಬೌಂಡರಿ, 7 ಸಿಕ್ಸರ್) ಸಿಡಿಸಿದರು. ಜೈಸ್ವಾಲ್ ಗೆ ಉತ್ತಮ ಸಾಥ್ ನೀಡಿದ ಸ್ಯಾಮ್ಸನ್ ಅಜೇಯ 38 ರನ್ (28 ಎಸೆತ, 2 ಬೌಂಡರಿ, 2 ಸಿಕ್ಸರ್) ಗಳಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈನ ಬ್ಯಾಟ್ಸಮನ್ ಗಳು ಬೇಗ ಬೇಗನೆ ವಿಕೆಟ್ ಒಪ್ಪಿಸಿದರು. 52 ರನ್‌ಗಳಿರುಷ್ಟವರಲ್ಲಿ ಪ್ರಮಖ 4 ವಿಕೆಟ್ ಉರುಳಿದ್ದವು. ಆದರೆ, ವಡೇರಾ ಮತ್ತು ತಿಲಕ್ ವರ್ಮಾ 5ನೇ ವಿಕೆಟಿಗೆ 52 ಎಸೆತಗಳಲ್ಲಿ 99 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ನಂತರ ಮತ್ತೆ ಮುಂಬೈ ತಂಡ ನಾಟಕೀಯ ಕುಸಿತ ಕಂಡಿತು. ಕೊನೆಯಲ್ಲಿ 28 ರನ್ ಗಳಿಸುವಷ್ಟರಲ್ಲಿ ಕೊನೆಯ 5 ವಿಕೆಟ್ ಕಳೆದುಕೊಂಡಿತು. ಪರಿಣಾಮವಾಗಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ರಾಯಲ್ಸ್ ಪರ ಸಂದೀಪ್ ಶರ್ಮಾ 18 ರನ್ ನೀಡಿ 5 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದರು.