ಚುನಾವಣೆಗಳು ಬಂಡವಾಳದ ಸಂತೆಯಾದಾಗ ವ್ಯಕ್ತಿ ಮತ್ತು ವ್ಯಕ್ತಿತ್ವ ನಿಮಿತ್ತ ಮಾತ್ರ ಆಗುತ್ತದೆ
ನಾ ದಿವಾಕರ
ಭಾರತದ ಪ್ರಜಾಪ್ರಭುತ್ವವು ಚುನಾವಣೆಗಳ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದರೂ, ದಿನದಿಂದ ದಿನಕ್ಕೆ ಈ
ಚುನಾವಣೆಗಳೂ ಸಹ ಬಂಡವಾಳದ ಕೂಡಿಕೆ, ಹೂಡಿಕೆ, ಕ್ರೋಢೀಕರಣ ಮತ್ತು ಹಂಚಿಕೆಯ ಪ್ರಕ್ರಿಯೆಗೆ ಸಿಲುಕಿ, ಪ್ರಜಾಸತ್ತಾತ್ಮಕ ಮೌಲ್ಯಗಳು
ಹಂತಹಂತವಾಗಿ ಶಿಥಿಲವಾಗುತ್ತಲೇ ಇವೆ. ಭಾರತದ ಅಧಿಕಾರ ರಾಜಕಾರಣದ ಕೇಂದ್ರಗಳನ್ನು ಕಾರ್ಪೋರೇಟ್ ಮಾರುಕಟ್ಟೆ ಹೇಗೆ
ನಿರ್ದೇಶಿಸುತ್ತದೆ ಎನ್ನುವುದನ್ನು ಚುನಾವಣಾ ಬಾಂಡ್ ಹಗರಣ ಸ್ಪಷ್ಟವಾಗಿ ಹೊರಗೆಡಹಿದೆ. ಆಡಳಿತ ನೀತಿಗಳ ಮೇಲೆ ಪ್ರಭಾವ ಬೀರುವ
ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಬಯಸುವ ಕಾರ್ಪೋರೇಟ್ ಮಾರುಕಟ್ಟೆಗೆ , ಈ ನೀತಿಗಳ ನಿರೂಪಕರು ಯಾರಾಗಬೇಕು ಎಂಬ
ಆಲೋಚನೆ ಇರುವುದು ಸ್ವಾಭಾವಿಕ. ಮಾರುಕಟ್ಟೆಯ ಈ ವ್ಯಾವಹಾರಿಕ ಲೆಕ್ಕಾಚಾರಗಳೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನೂ
ಪ್ರಭಾವಿಸುವುದು ವಾಸ್ತವ.

ಒಂದು ದಶಕದ ಮುನ್ನ ಚುನಾವಣಾ ಅಭ್ಯರ್ಥಿ ಆಯ್ಕೆಯ ಸಮೀಕರಣಗಳು ಪಕ್ಷ ನಿಷ್ಠೆ, ತಾತ್ವಿಕ ಬದ್ಧತೆ ಮತ್ತು ಜನಪ್ರಿಯತೆಯಲ್ಲಿ
ಹೆಚ್ಚು ಕಾಣುತ್ತಿದ್ದವು. ಪಕ್ಷಕ್ಕೆ ದುಡಿದವರಷ್ಟೇ ಪ್ರಾಮುಖ್ಯತೆಯನ್ನು, ಸೈದ್ಧಾಂತಿಕ ನೆಲೆಯಲ್ಲಿ ಪಕ್ಷದ ಜನಪ್ರಿಯತೆಗೆ ನೆರವಾಗುವ
ಕೂಗುಮಾರಿಗಳಿಗೂ, ಪ್ರಚೋದಕರಿಗೂ, ಜನಸಾಮಾನ್ಯರ ನಡುವೆ ಉನ್ಮಾದ ಸೃಷ್ಟಿಸುವವರಿಗೂ ನೀಡುವ ಪ್ರವೃತ್ತಿಯೂ 1990ರ ನಂತರದ
ರಾಜಕಾರಣದಲ್ಲಿ ಹೆಚ್ಚಾಗಿತ್ತು. ಬಿಜೆಪಿ ಅನುಸರಿಸುತ್ತಿದ್ದ ಮಾರ್ಗವೇ ಇದು. ಆದರೆ ಈ ಬಾರಿ ಬಿಜೆಪಿಗೆ ಗೆಲುವು ಅನಿವಾರ್ಯವಾಗಿದ್ದು,
ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರ ವಹಿಸಲಾಗಿದೆ. ರಾಜಕೀಯದ ಸೋಂಕು ಇಲ್ಲದ ವ್ಯಕ್ತಿಗಳನ್ನೂ ಕಣಕ್ಕಿಳಿಸುವ ಮೂಲಕ ಬಿಜೆಪಿ ಅಂತಹ
ವ್ಯಕ್ತಿಗಳ ವರ್ಚಸ್ಸು, ವ್ಯಕ್ತಿತ್ವ ಹಾಗೂ ಸಾಮಾಜಿಕ ಸ್ಥಾನಮಾನಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಮತ್ತೊಂದೆಡೆ ಕೆಲವು
ಕೂಗುಮಾರಿಗಳನ್ನು ಮೂಲೆಗುಂಪು ಮಾಡಲಾಗಿದೆ.
ಅಧಿಕಾರ ವಲಯದ ಆಮಿಷಗಳು
ಚುನಾವಣೆಗಳ ಗೆಲುವು ಮತ್ತು ಅಧಿಕಾರ ಗಳಿಕೆಯೇ ಮುಖ್ಯ ಗುರಿಯಾಗುವುದರಿಂದ, ಗೆಲ್ಲುವ ಕುದುರೆಗಾಗಿ ಹಪಹಪಿಸುವುದು ಎಲ್ಲ
ಪಕ್ಷಗಳಲ್ಲೂ ಕಾಣಬಹುದಾದ ರಾಜಕೀಯ ಲಕ್ಷಣ. ಹೀಗಾಗಿ ಮುಖ್ಯವಾಹಿನಿ ಪಕ್ಷಗಳಲ್ಲಿ ಪಕ್ಷಕ್ಕಾಗಿ ಅಹರ್ನಿಶಿ ದುಡಿದ ನಿಷ್ಠಾವಂತ
ಕಾರ್ಯಕರ್ತರು ಮತ್ತು ನಾಯಕರು ಕಡೆಗಣಿಸಲ್ಪಡುತ್ತಾರೆ. ಹೊಸ ಮುಂಚೂಣಿ ನಾಯಕರು ಹುಟ್ಟಿಕೊಳ್ಳುತ್ತಾರೆ, ಆಡಳಿತ ನಡೆಸಲು ಅನುಭವ
ಬೇಕಾಗುತ್ತದೆ ಆದರೆ ರಾಜಕೀಯ ಮಾಡಲು ಅದರ ಅಗತ್ಯತೆ ಇರುವುದಿಲ್ಲ. ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ಪಕ್ಷಗಳ ಹಂಬಲವನ್ನು
ಪೂರೈಸುವ ನಿಟ್ಟಿನಲ್ಲಿ ಸಮಾಜದ ಪ್ರತಿಷ್ಠಿತರು ತಮ್ಮ ಸಾರ್ವಜನಿಕ ವರ್ಚಸ್ಸು-ವ್ಯಕ್ತಿತ್ವಗಳನ್ನೂ ಬದಿಗೊತ್ತಿ ರಾಜಕಾರಣಕ್ಕೆ
ಪ್ರವೇಶಿಸುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಈ ಬಾರಿಯೂ ಕರ್ನಾಟಕದ ಚುನಾವಣೆಗಳಲ್ಲಿ ಈ ಬೆಳವಣಿಗೆಯನ್ನು ಕಾಣಬಹುದು.
ಇಲ್ಲಿ ಕಾರ್ಪೋರೇಟ್ ಮಾರುಕಟ್ಟೆಯು ತನ್ನ ನಿಯಂತ್ರಣದಲ್ಲಿರುವ ವಿದ್ಯುನ್ಮಾನ-ಮುದ್ರಣ ಮಾಧ್ಯಮಗಳ ಮೂಲಕ, ನಿತ್ಯ
ಸಮಾಜದ ಹೊರಗಿನ ವ್ಯಕ್ತಿಗಳನ್ನು ರಾಜಕೀಯ ಚುನಾವಣಾ ಕಣಗಳಲ್ಲಿ ತಂದು ನಿಲ್ಲಿಸಲು ಯಶಸ್ವಿಯಾಗುತ್ತದೆ. ತಮ್ಮ ವೃತ್ತಿ ಬದುಕಿನಲ್ಲಿ,
ವ್ಯಕ್ತಿಗತ ನೆಲೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ ಮೂಲಕ ಜನಾನುರಾಗಿಗಳಾಗಿರುವ ಪ್ರತಿಷ್ಠಿತರು ಈ ಚುನಾವಣಾ
ರಾಜಕಾರಣದ ಪ್ರತಿನಿಧಿಗಳಾಗಿ ಜನತೆಯ ಮಧ್ಯೆ ನಿಲ್ಲುತ್ತಾರೆ. ವ್ಯಕ್ತಿ, ವ್ಯಕ್ತಿತ್ವ ಮತ್ತು ಹಲವು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ
ಗಳಿಸಿಕೊಂಡ ವರ್ಚಸ್ಸು ಇವೆಲ್ಲವೂ ಇದೇ ಜನತೆ ನಡುವೆ ಅಸ್ತಿತ್ವವನ್ನು ಕಾಪಾಡಿಕೊಂಡು, ತಳಮಟ್ಟದ ಸಮಾಜದಲ್ಲಿ ಸಾಮಾನ್ಯರು
ಎದುರಿಸುವ ನಿತ್ಯ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ಅವಕಾಶವನ್ನು ಅಧಿಕಾರ ರಾಜಕಾರಣ ಕಸಿದುಕೊಂಡುಬಿಡುತ್ತದೆ. ಪಕ್ಷ ರಾಜಕಾರಣ
ಮೂಲತಃ ವಿಭಜಕ ಪ್ರವೃತ್ತಿಯನ್ನು ಪೋಷಿಸುವುದರಿಂದ, ಈ ಹಾದಿಯಲ್ಲಿ ನಾಯಕತ್ವ ವಹಿಸಿಕೊಳ್ಳುವ ವ್ಯಕ್ತಿಗಳೂ ಜನಸಾಮಾನ್ಯರ ನಡುವೆ
ʼತಮ್ಮವರನ್ನುʼ ಗುರುತಿಸಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ.

ಈ ರೀತಿಯಲ್ಲಿ ಚುನಾವಣೆಗಳ ಸಮಯದಲ್ಲಿ ರಾಜಕೀಯ ಪ್ರವೇಶಿಸುವ ವೃತ್ತಿಪರರ ದೊಡ್ಡ ಚರಿತ್ರೆಯೇ ನಮ್ಮ ಮುಂದಿದೆ.
ಹಾಗೆಯೇ ಖ್ಯಾತನಾಮರನ್ನು ರಾಜಕೀಯಕ್ಕೆ ಎಳೆದು ತರುವ ಪ್ರವೃತ್ತಿಗೂ ಭಾರತದ ಪ್ರಜಾಪ್ರಭುತ್ವ ಸಾಕ್ಷಿಯಾಗಿದೆ. ಡಾ. ರಾಜಕುಮಾರ್,
ರಜನೀಕಾಂತ್ ಮುಂತಾದವರು ಈ ಆಯಸ್ಕಾಂತೀಯ ಸೆಳೆತದಿಂದ ತಪ್ಪಿಸಿಕೊಂಡಿದ್ದು ಒಂದು ಅಪವಾದ ಮಾತ್ರ. ಹಲವಾರು ಸಿನಿಮಾ ನಟರು
ತಮ್ಮ ರಜತಪರದೆಯ ಜನಪ್ರಿಯತೆಯನ್ನು ಸಮಾಜದ ತಳಪಾಯದಲ್ಲಿ ಗುರುತಿಸಲು ಹೋಗಿ ಎಡವಿ ಮುಗ್ಗರಿಸಿರುವುದನ್ನೂ ಕಂಡಿದ್ದೇವೆ. ಈ
ನಡುವೆಯೂ, ಸಾಂಸ್ಕೃತಿಕ ವಲಯದಲ್ಲಿ, ಸೇವಾ ವಲಯದಲ್ಲಿ ಸಕ್ರಿಯರಾಗಿದ್ದುಕೊಂಡು ಜನಸಾಮಾನ್ಯರ ನಡುವೆ ಒಂದು Iconic ಸ್ಥಾನ
ಗಳಿಸಿರುವ ವ್ಯಕ್ತಿಗಳಿಗೆ ತಮ್ಮ ವ್ಯಕ್ತಿತ್ವ ಮತ್ತು ವರ್ಚಸ್ಸನ್ನು ಮತ್ತಷ್ಟು ವಿಸ್ತರಿಸುವ ಆಕಾಂಕ್ಷೆ ಇದ್ದರೂ ತಪ್ಪೇನಿಲ್ಲ. ಆದರೆ ಈ ವ್ಯಕ್ತಿ
ಕೇಂದ್ರಿತ ವರ್ಚಸ್ಸು ತನ್ನ ಮೂಲ ಅಂತಃಸತ್ವವನ್ನು ಉಳಿಸಿಕೊಳ್ಳುವುದೋ ಅಥವಾ ಅದು ಅಧಿಕಾರದ ಅಂಗಳದಲ್ಲಿ ಲೀನವಾಗುವುದೋ
ಎಂಬುದು ಮೂರ್ತ ಪ್ರಶ್ನೆ.
ಬಂಡವಾಳ-ಮಾರುಕಟ್ಟೆಯ ಆವರಣದಲ್ಲಿ
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಜನಸೇವೆ ಅಥವಾ ಸಮಾಜ ಸೇವೆ ಎನ್ನುವುದು ತನ್ನ ಮಾನವಿಕ ಮುಖವಾಡವನ್ನು ಕಳಚಿಕೊಂಡು,
ಮೌಲಿಕ ನೆಲೆಯಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ. ಸಮಾಜದ ಅಭಿವೃದ್ಧಿಯ ಹಾದಿಯಲ್ಲಿ ನಿಕೃಷ್ಟರಾಗಿ ಕಡೆಗಣಿಸಲ್ಪಡುವ ಅಪಾರ
ಜನಸ್ತೋಮವನ್ನು ತಲುಪಲು ನೂರಾರು ಮಾರ್ಗಗಳನ್ನು ಆಧುನಿಕ ತಂತ್ರಜ್ಞಾನ ಸೃಷ್ಟಿಸಿದೆ. ಆದರೆ ಈ ಸಾಮಾನ್ಯ ಜನತೆಯ ದೈನಂದಿನ
ಬದುಕಿಗೆ ಸ್ಪಂದಿಸಲು ಅಥವಾ ಅವರ ತಲ್ಲಣಗಳಿಗೆ ಮುಖಾಮುಖಿಯಾಗಲು ಇರುವ ಅವಕಾಶಗಳನ್ನು ಇದೇ ಮಾರುಕಟ್ಟೆಯೇ
ಆಕ್ರಮಿಸಿಕೊಳ್ಳುತ್ತದೆ. ಭೌತಿಕವಾಗಿ ಅನುಸಂಧಾನಕ್ಕೊಳಗಾಗಬೇಕಾದ ಜಟಿಲ ಸಿಕ್ಕುಗಳಿಗೆ ಆಧುನಿಕ ತಂತ್ರಜ್ಞಾನವು ಸೋಷಿಯಲ್ ಮೀಡಿಯಾಗಳ

ಮೂಲಕ ಮೌಖಿಕವಾಗಿ ಪರಿಹಾರೋಪಾಯಗಳನ್ನು ಸೂಚಿಸಲು ಹಲವು ವೇದಿಕೆಗಳನ್ನು ಸೃಷ್ಟಿಸುತ್ತದೆ. ಈ ವೇದಿಕೆಗಳೇ ರಾಜಕೀಯ ಪಕ್ಷಗಳಿಗೆ
ವಾಟ್ಸಾಪ್, ಇನ್ಸ್‌ಟಾಗ್ರಾಂ, ಫೇಸ್‌ಬುಕ್ ಮುಂತಾದ ಸಂಪರ್ಕ ಸಾಧನಗಳಾಗಿ ಪರಿಣಮಿಸುತ್ತವೆ.
ಆದರೆ ಈ ಭೌತಿಕ ವಿಭಜನೆ ಮತ್ತು ತಾತ್ವಿಕ ವಿಘಟನೆಯೇ ಬಂಡವಾಳ ಮತ್ತು ಮಾರುಕಟ್ಟೆಯ ಪ್ರಾಬಲ್ಯವನ್ನು ಮತ್ತಷ್ಟು
ಬಲಪಡಿಸುವ ಅಸ್ತ್ರಗಳಾಗಿದ್ದು, ಆಳ್ವಿಕೆಯನ್ನು ವಹಿಸಿಕೊಳ್ಳುವ ರಾಜಕೀಯ ಪಕ್ಷಗಳ ಆಡಳಿತ ನೀತಿಗಳನ್ನೂ ನಿರ್ದೇಶಿಸಲಾರಂಭಿಸುತ್ತವೆ. ಇಲ್ಲಿ
ಸಾರ್ವಜನಿಕ ಬದುಕಿನಲ್ಲಿ ಜೀವನದುದ್ದಕ್ಕೂ ಸೇವೆ ಎಂದೇ ಭಾವಿಸುತ್ತಾ ಬಂದಿರುವ ಕ್ಷೇತ್ರಕಾರ್ಯಗಳು ರಾಜಕೀಯ ಸ್ವರೂಪ ಪಡೆದುಕೊಂಡು,
ಮಾರುಕಟ್ಟೆಯನ್ನು ಬೆಳೆಸುವ ಒಂದು ಕಚ್ಚಾವಸ್ತುವಾಗಿ ಪರಿವರ್ತನೆ ಹೊಂದುತ್ತವೆ. ಕಾರ್ಪೋರೇಟ್ ಅಂಗಳದಲ್ಲಿ ನಿಂತು ಮಾನವೀಯ
ಮುಖವಾಡವನ್ನು ತೊಡುವುದು ಅಸಾಧ್ಯವಾಗುವುದರಿಂದ, ಸೇವಾ ಕ್ಷೇತ್ರದಿಂದ ಉಗಮಿಸಿದ ರಾಜಕೀಯ ನಾಯಕರೂ, ಅಂತಿಮವಾಗಿ ತಮ್ಮ
ವ್ಯಕ್ತಿತ್ವವನ್ನು ಬದಿಗೊತ್ತಿ ಅಧಿಕಾರ ರಾಜಕಾರಣದ ಒಂದು ಭಾಗವಾಗಿ ಪರ್ಯವಸಾನ ಹೊಂದುತ್ತಾರೆ. ಇತಿಹಾಸ ಚಕ್ರದಲ್ಲಿ
ನಿರೂಪಿತವಾಗಿರುವ ಸತ್ಯ ಇದು.
ಭಾರತದ ಚುನಾವಣಾ ರಾಜಕೀಯ ಮತ್ತು ಅಧಿಕಾರ ರಾಜಕಾರಣದ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ರೀತಿಯಾಗಿ ತಮ್ಮ
ವೃತ್ತಿಪರ ನಿಸ್ವಾರ್ಥತೆಯನ್ನು ಜನಸಾಮಾನ್ಯರ ನಡುವೆ ಮತ್ತಷ್ಟು ಪ್ರಭಾವಶಾಲಿಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ರಾಜಕೀಯ
ಪ್ರವೇಶಿಸಿದ ಅನೇಕ ವೃತಿಪರರು ಅಂತಿಮವಾಗಿ, ಪ್ರಚಲಿತ ರಾಜಕೀಯ ವ್ಯವಸ್ಥೆಯಲ್ಲಿ ಲೀನವಾಗುತ್ತಾ ತಮ್ಮ ಮೂಲ ತಾತ್ವಿಕ ನೆಲೆಗಳನ್ನೂ
ಕಳೆದುಕೊಂಡಿರುವುದು ಢಾಳಾಗಿ ಕಾಣುತ್ತದೆ. ಪ್ರಾಮಾಣಿಕತೆಗೆ ಹೆಸರಾದ ಉನ್ನತ ಐಎಎಸ್-ಐಪಿಎಸ್ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು,
ಸೇನೆಯಲ್ಲಿದ್ದು ದೇಶಸೇವೆ ಸಲ್ಲಿಸಿರುವ ಯೋಧರು, ಉನ್ನತ ಸೇನಾಧಿಕಾರಿಗಳು ವರ್ತಮಾನದ ಭಾರತದ ಅಧಿಕಾರ ರಾಜಕಾರಣದ ಎಲ್ಲ
ಅವಲಕ್ಷಣಗಳನ್ನೂ ಪ್ರತಿನಿಧಿಸುವ ಜನಪ್ರತಿನಿಧಿಗಳಾಗಿ ರೂಪುಗೊಂಡಿದ್ದಾರೆ.
ಇದಕ್ಕೆ ಕಾರಣವೆಂದರೆ, ನವ ಉದಾರವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆಯು ತನ್ನ ಬಂಡವಾಳ-ಮಾರುಕಟ್ಟೆ ವಿಸ್ತರಣೆಗೆ
ಪೂರಕವಾದ ಆಳ್ವಿಕೆಯನ್ನು ಬಯಸುತ್ತದೆ. ಪ್ರಾಮಾಣಿಕತೆ, ಪಾರದರ್ಶಕತೆ, ಸೈದ್ಧಾಂತಿಕ ಬದ್ಧತೆ, ಪ್ರಜಾನಿಷ್ಠೆ ಇವೆಲ್ಲವನ್ನೂ
ಕ್ಲೀಷೆಗಳನ್ನಾಗಿಸುವ ಮೂಲಕ ಅಧಿಕಾರ ರಾಜಕಾರಣದಲ್ಲಿ ತನ್ನ ಬಾಹುಗಳನ್ನು ಚಾಚುವುದರ ಮೂಲಕ, ಕಾರ್ಪೋರೇಟ್ ಮಾರುಕಟ್ಟೆಯು
ಚುನಾವಣಾ ಕಣವನ್ನು ಅಕ್ಷರಃ ರಣಭೂಮಿಯಾಗಿ ಪರಿವರ್ತಿಸುತ್ತದೆ. ವಿದ್ಯುನ್ಮಾನ-ಮುದ್ರಣ-ಸಾಮಾಜಿಕ ಮಾಧ್ಯಮಗಳಲ್ಲಿ
ಬಳಕೆಯಾಗುತ್ತಿರುವ ಚುನಾವಣಾ ಪರಿಭಾಷೆ ಇದನ್ನೇ ಸೂಚಿಸುತ್ತದೆ. ಈ ಭಾಷಾ ಬಳಕೆಯಲ್ಲಿ ಕಳೆದುಹೋಗುವ ಸೌಜನ್ಯ, ಸಭ್ಯತೆ ಮತ್ತು
ಘನತೆ, ಜನಸಾಮಾನ್ಯರ ಗಮನಕ್ಕೂ ಬಾರದೆ ಹೋಗುತ್ತದೆ. ಈ ಪ್ರಕ್ರಿಯೆಯ ನಡುವೆಯೇ ವ್ಯಕ್ತಿ, ವ್ಯಕ್ತಿತ್ವ ಮತ್ತು ವ್ಯಕ್ತಿಗತ ವರ್ಚಸ್ಸು
ಇವೆಲ್ಲವೂ ಚುನಾವಣಾ ಮಾರುಕಟ್ಟೆಯ ಸರಕುಗಳಾಗಿ, ಅಂತಿಮವಾಗಿ ಅಧಿಕಾರ ರಾಜಕಾರಣದಲ್ಲಿ ಅಸ್ತಿತ್ವ ಪಡೆದುಕೊಳ್ಳುತ್ತದೆ.
ಅಧಿಕಾರ ವಲಯದ ಸರಕುಗಳು
ಓರ್ವ ವೈದ್ಯರಾಗಿ, ವ್ಯಕ್ತಿಗತ ನೆಲೆಯಲ್ಲಿ ಅತ್ಯುನ್ನತ ವೃತ್ತಿಪರತೆ, ಕರ್ತವ್ಯನಿಷ್ಠೆ ಹಾಗೂ ವೃತ್ತಿಧರ್ಮವನ್ನು ಪಾಲಿಸುವ ಮೂಲಕ
ಉಳಿಸಿದ ಪ್ರತಿಯೊಂದು ಜೀವವೂ, ಯಶಸ್ವಿಯಾಗಿ ನಡೆಸಿದ ಪ್ರತಿಯೊಂದು ಹೃದಯ ಶಸ್ತ್ರ ಚಿಕಿತ್ಸೆಯೂ ಬಿಜೆಪಿಯ ಪಾಲಿಗೆ ರಾಜಕೀಯವಾಗಿ
ಬಂಡವಾಳವಾಗಿ ಪರಿಣಮಿಸುತ್ತದೆ. ದೇವರಲ್ಲಿ ವೈದ್ಯನನ್ನು, ವೈದ್ಯನಲ್ಲಿ ದೇವರನ್ನೂ ಕಾಣುವ ಭಾರತದಂತಹ ಸಾಂಪ್ರದಾಯಿಕ
ಸಮಾಜದಲ್ಲಿ ಈ ಅಂಶಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ. ಇದೇ ಪ್ರಮೇಯವನ್ನು ರಾಜಕೀಯ ಪ್ರವೇಶಿಸುವ ಪೊಲೀಸ್-ಐಎಎಸ್
ಅಧಿಕಾರಿಗಳಿಗೂ, ನಿವೃತ್ತ ನ್ಯಾಯಮೂರ್ತಿಗಳಿಗೂ ಅನ್ವಯಿಸಬಹುದು. ನ್ಯಾಯಮೂರ್ತಿಗಳು ನೀಡಿದಂತಹ ಕ್ರಾಂತಿಕಾರಿ ಜನಪರ ತೀರ್ಪುಗಳು,
ಪೊಲೀಸ್ ಅಧಿಕಾರಿಗಳು ದುಷ್ಟರನ್ನು ಸದೆಬಡಿದ ಪ್ರಸಂಗಗಳು, ಸೇನಾಧಿಕಾರಿಗಳು ಶತ್ರು ರಾಷ್ಟ್ರಗಳ ವಿರುದ್ಧ ನಡೆಸಿದ ಹೋರಾಟಗಳು
ಇವೆಲ್ಲವೂ ಚುನಾವಣಾ ರಾಜಕಾರಣದಲ್ಲಿ ಬಳಕೆಯಾಗುವ ಸರಕುಗಳಾಗಿಬಿಡುತ್ತವೆ. ಈ ಸಾಧನೆಗಳ ಹಿಂದಿನ ವ್ಯಕ್ತಿತ್ವ ಮತ್ತು ವರ್ಚಸ್ಸು
ಅಧಿಕಾರ ರಾಜಕಾರಣದಲ್ಲಿ ಕರಿಗಹೋಗುತ್ತದೆ.
ಪ್ರಸ್ತುತ ಚುನಾವಣೆಯನ್ನೇ ಗಮನಿಸಿದಾಗ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ನೂರು ವರ್ಷಗಳ ಹಿಂದೆ ಕೈಗೊಂಡ
ಸಮಾಜಮುಖಿ ಕಾರ್ಯಗಳು, ಜನಪರ ಯೋಜನೆಗಳು ವರ್ತಮಾನ ರಾಜಕಾರಣಕ್ಕೆ ಪ್ರಚಾರದ ಸರಕುಗಳಾಗಿ ಬಳಕೆಯಾಗುತ್ತಿವೆ. ವರ್ತಮಾನದ
ಪ್ರಜಾಪ್ರಭುತ್ವದ ಆಳ್ವಿಕೆ ಮಾಡಲಾಗದ ಕೆಲಸಗಳನ್ನು ರಾಜಪ್ರಭುತ್ವದಲ್ಲಿ ಗುರುತಿಸಬಹುದೆಂದರೆ ಅದು ಆ ಮಹನೀಯರಿಗೆ ಸಲ್ಲಬೇಕಾದ
ಗೌರವ. ಆದರೆ ಇಲ್ಲಿ ನಾಗರಿಕರೂ ಮರೆಯುವುದೇನೆಂದರೆ, ನಾಲ್ವಡಿ ಒಡೆಯರ್ ಅವರು ಸ್ಥಾಪಿಸಿದ ವಿಶ್ವವಿದ್ಯಾಲಯ, ಬ್ಯಾಂಕುಗಳು
ಇವೆಲ್ಲವೂ ಇಂದು ಕಾರ್ಪೋರೇಟ್ ಮಾರುಕಟ್ಟೆಯ ಪಾಲಾಗುತ್ತಿದೆ. ಮೈಸೂರು ಬ್ಯಾಂಕ್ ಇಂದು ವಿಸ್ಮೃತಿಯ ಕಣಜ ಸೇರಿದೆ. ಮುಂದಿನ
ದಿನಗಳಲ್ಲಿ ಮಾನಸಗಂಗೋತ್ರಿ ಕಾರ್ಪೋರೇಟ್ ನಿಯಂತ್ರಣಕ್ಕೊಳಪಡುತ್ತದೆ. ಕೆ.ಆರ್.ಎಸ್ ಅಣೆಕಟ್ಟು ನಿರ್ವಹಣೆಯೂ ಇದೇ ಹಾದಿ ಹಿಡಿದರೆ
ಅಚ್ಚರಿ ಪಡಬೇಕಿಲ್ಲ. ಸ್ವತಂತ್ರ ಭಾರತದ ಹೆಮ್ಮೆಯ ಸಂಕೇತವಾದ ದೆಹಲಿಯ ಕೆಂಪುಕೋಟೆ ಈಗಾಗಲೇ ಕಾರ್ಪೋರೇಟ್ ನಿರ್ವಹಣೆಗೆ
ಒಳಪಟ್ಟಿದೆ. ಇದು ನಾಲ್ವಡಿಯವರ ಉದಾತ್ತ ಧ್ಯೇಯಗಳಿಗೆ ನ್ಯಾಯಸಲ್ಲಿಸಿದಂತಾಗುವುದೇ ?
ಈ ಪ್ರಶ್ನೆ ರಾಜಕೀಯ ವಲಯದಲ್ಲಿ ನಗಣ್ಯವಾಗಿಬಿಡುತ್ತದೆ. ಏಕೆಂದರೆ ಅಧಿಕಾರ ರಾಜಕಾರಣದಲ್ಲಿ ಆಳ್ವಿಕೆ ಮತ್ತು ನೀತಿ ನಿರೂಪಣೆಯ
ವಾರಸುದಾರಿಗೆ ವಹಿಸಿಕೊಳ್ಳುವ ಜನಪ್ರತಿನಿಧಿಗಳಿಗೆ, ರಾಜಕೀಯ ಪಕ್ಷಗಳಿಗೆ ವ್ಯಕ್ತಿ, ವ್ಯಕ್ತಿತ್ವ ಮತ್ತು ಅದರ ಹಿಂದಿನ ವರ್ಚಸ್ಸು ಎಲ್ಲವೂ
ಬಳಕೆಯ ಅಸ್ತ್ರಗಳಾಗಿ ಪರಿಣಮಿಸುತ್ತವೆ. ಈ ರೀತಿಯ ರಾಜಕೀಕರಣಕ್ಕೊಳಗಾಗುವ ವ್ಯಕ್ತಿಗಳು ತಮ್ಮ ಪೂರ್ವಾಶ್ರಮದ ನೈತಿಕತೆ, ಪ್ರಾಮಾಣಿಕತೆ
ಮತ್ತು ನಿಸ್ಪೃಹತೆಯನ್ನು ಉಳಿಸಿಕೊಳ್ಳುವುದು ಸಾಧ್ಯವೇ ? ಒಂದು ಕಾಲದಲ್ಲಿ ಸಾಧ್ಯವಿತ್ತೇನೋ ! ಆದರೆ ಪ್ರಸ್ತುತ ನವ ಉದಾರವಾದ
ನಿಯಂತ್ರಿತ, ಕಾರ್ಪೋರೇಟೀಕರಣಗೊಂಡ ರಾಜಕೀಯದಲ್ಲಿ ಇದು ಅಸಾಧ್ಯ. ಏಕೆಂದರೆ ಇಡೀ ರಾಜಕೀಯ ವ್ಯವಸ್ಥೆಯೇ ತನ್ನ ನೈತಿಕ ನೆಲೆಯನ್ನು
ಕಳೆದುಕೊಂಡಿದೆ. ಉದಾತ್ತ ಚಿಂತನೆಯನ್ನು ಮೈಗೂಡಿಸಿಕೊಂಡು ಜನಸೇವಕರಾಗಿರುವವರು, ಮಹಿಳೆಯನ್ನು ಅಪಮಾನಿಸುವ,
ದ್ವೇಷಾಸೂಯೆಗಳನ್ನು ಹರಡುವ, ಅಸ್ಮಿತೆಗಳ ಗೋಡೆಗಳನ್ನು ಕಟ್ಟುವ ರಾಜಕೀಯ ನಾಯಕರೊಡನೆ ವೇದಿಕೆ ಮತ್ತು ಅಧಿಕಾರ ಎರಡನ್ನೂ
ಹಂಚಿಕೊಳ್ಳಬೇಕಾಗುತ್ತದೆ.
ವರ್ತಮಾನ ಭಾರತದ ರಾಜಕಾರಣವನ್ನು ನಿರ್ದೇಶಿಸುತ್ತಿರುವ ಬಂಡವಾಳಶಾಹಿ ಶಕ್ತಿಗಳು ಹಾಗೂ ಆಳ್ವಿಕೆಯ ನಿರೂಪಣೆಯಲ್ಲಿ ಪ್ರಧಾನ
ಪಾತ್ರ ವಹಿಸುವ ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳು, ಇಡೀ ವ್ಯವಸ್ಥೆಯನ್ನೇ ಆವರಿಸಿವೆ. ಸಂವಿಧಾನಾತ್ಮಕ ಚುನಾವಣೆಗಳ ಮೂಲಕ ದೇಶದ
ಸಾಮಾನ್ಯ ಜನತೆ ಮತದಾನದ ಮೂಲಕ ಆಯ್ಕೆ ಮಾಡುವ ಪಕ್ಷ ಅಥವಾ ಮೈತ್ರಿಕೂಟ ಅಂತಿಮವಾಗಿ ಈ ಶಕ್ತಿಗಳ ಹಿತಾಸಕ್ತಿಗಾಗಿಯೇ ಆಡಳಿತ
ನೀತಿಗಳನ್ನು ರೂಪಿಸುತ್ತವೆ. ಅಲ್ಲಿ ಶ್ರೀಸಾಮಾನ್ಯನಿಗೆ ಹೆಜ್ಜೆಯೂರಲೂ ಅವಕಾಶ ಇರುವುದಿಲ್ಲ. ತನ್ನ ಪಾಲಿಗೆ ಒದಗಿಬರಬಹುದಾದ
ಅನುಕೂಲತೆಗಳಿಗಾಗಿ ತಳಸಮಾಜದ ಜನತೆ ಇದೇ ಆಳ್ವಿಕೆಯತ್ತ ಅಸಹಾಯಕತೆಯಿಂದ ನೋಡುತ್ತಾ ಬದುಕು ಸವೆಸಬೇಕಾಗುತ್ತದೆ. ಈ ಸಮಾಜ
ಎದುರಿಸುವ ಬಡತನ, ಹಸಿವು, ದಾರಿದ್ರ್ಯ, ನಿರುದ್ಯೋಗ ಮತ್ತು ಇವುಗಳಿಂದ ಉಂಟಾಗುವ ತಲ್ಲಣ, ಆತಂಕ, ಹತಾಶೆಗಳನ್ನು ಪರಿಹರಿಸುವ
ಚಿಕಿತ್ಸಕ ಗುಣ, ರಾಜಕೀಯ ಪ್ರವೇಶಿಸಿ ರೂಪಾಂತರ ಹೊಂದಿದ ಉದಾತ್ತ/ಉನ್ನತ/ಪ್ರಖ್ಯಾತ/ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಉಳಿಯುತ್ತದೆಯೇ ?
ಒಂದು ಆರೋಗ್ಯಕರ ಸಮಾಜವನ್ನು ಕಾಡಬೇಕಾದ ಮೂರ್ತ ಪ್ರಶ್ನೆ ಇದು.












