ದಿವಂಗತ ನಟ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗಿತ್ತು. ಐಪಿಎಲ್ ಕ್ರಿಕೆಟ್ ಗೆಲ್ಲದಿರುವುದಕ್ಕೆ ಅಶ್ವಿನಿ ಅವರನ್ನು ಕರೆಸಿ, ಅನ್ ಬಾಕ್ಸಿಂಗ್ ಮಾಡಿಸಿದ್ದು ಕಾರಣ ಎಂದು ಗಜಪಡೆ ಅನ್ನೋ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ನಟ ದರ್ಶನ್ ಅಭಿಮಾನಿಗಳು ಪೋಸ್ಟ್ ಹಾಕಿದ್ದರ ಬಗ್ಗೆ ಭಾರೀ ಟೀಕೆಗಳು ಕೇಳಿಬಂದಿದ್ದವು. ಆ ಬಳಿಕ ಅಪ್ಪು ಅಭಿಮಾನಿಗಳು ಕಮಿಷನರ್ ಕಚೇರಿಗೂ ದೂರು ನೀಡಿದ್ದರು. ಆ ಬಳಿಕ ಸೈಬರ್ ಕ್ರೈಂ ಡಿಪಾರ್ಟ್‌ಮೆಂಟ್‌ಗೆ ದೂರು ವರ್ಗವಾಗಿತ್ತು.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದವರನ್ನು ಪತ್ತೆ ಮಾಡಿ ಬಂಧನ ಮಾಡುವಂತೆ ಪೊಲೀಸ್ ಕಮಿಷನರ್‌ಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ. ಪ್ರಕರಣ ಸಂಬಂಧ ಈವರೆಗೂ ತೆಗೆದುಕೊಂಡ ಕ್ರಮದ ಬಗ್ಗೆ ವರದಿ ನೀಡುವಂತೆಯೂ ಸೂಚಿಸಿದೆ. ಕೃತ್ಯ ಎಸಗಿದವರನ್ನ ಪತ್ತೆ ಹಚ್ಚಿ, ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕಮಿಷನರ್‌ಗೆ ಸೂಚನೆ ಕೊಟ್ಟಿದ್ದಾರೆ.

ಅಶ್ವಿನಿ ಪುನೀತ್ ರಾಜ್ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದು, ಹೆಣ್ಣು ಮಕ್ಕಳ ತುಚ್ಛೀಕರಣವನ್ನು ನಮ್ಮ ಸರ್ಕಾರ ಖಂಡಿತ ಸಹಿಸೋದಿಲ್ಲ. ಇದಕ್ಕೆ ಕಾರಣಕರ್ತರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ‘X’ ಪೋಸ್ಟ್‌ನಲ್ಲಿ ತಿಳಿಸಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪೋಸ್ಟ್ ಹಾಕಿದ್ದ ವಿಚಾರದ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದರು. ಪುನೀತ್ ರಾಜ್‌ಕುಮಾರ್ ಫೈನಲ್ ಮಾಡಿದ್ದ ಕೊನೆಯ ಚಿತ್ರ ರಿಲೀಸ್ ಬಗ್ಗೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಪಿ ಅರ್ ಕೆ ಪ್ರೊಡಕ್ಷನ್‌ನಲ್ಲಿ ಮೂಡಿ ಬಂದಿರುವ O2 ರಿಲೀಸ್‌ಗೆ ರೆಡಿಯಾಗಿದೆ ಎಂದಿದ್ದರು. ಮಧ್ಯದಲ್ಲಿ ಪೋಸ್ಟ್ ಬಗ್ಗೆ ಕೇಳಿದಾಗ ಒಂದು ಕ್ಷಣ ಮೌನವಾಗಿ, ರಿಯಾಕ್ಟ್ ಮಾಡಿದ್ದ ಅಶ್ವಿನಿ ಪುನೀತ್ ರಾಜ್‍ಕುಮಾರ್, ಎಲ್ಲವನ್ನೂ ಹೇಗೋ ನಿಭಾಯಿಸಿಕೊಂಡು ಹೋಗ್ತಿದ್ದೀನಿ. ತುಂಬಾ ಕಷ್ಟ ಆಗ್ತಿದೆ, ಆದ್ರು ನಿಭಾಯಿಸಿಕೊಂಡು ಹೊಗ್ತಿದ್ದೀನಿ ಎಂದಿದ್ದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಅನ್ನೋ ಕಾರಣಕ್ಕೆ ಬಾಯಿಗೆ ಬಂದಂತೆ ಬೇರೆಯವರ ಬಗ್ಗೆ ಮಾತನಾಡುವಂತಿಲ್ಲ. ಅದರಲ್ಲು ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದರೆ ಖಂಡಿತ ಕಾನೂನು ಪ್ರಕಾರ ಕ್ರಮ ಆಗಲಿದೆ. ಈ ಪೋಸ್ಟ್ ಹಾಕಿದವರು ಯಾರೇ ಆದರು ನಕಲಿ ಐಡಿಯಿಂದ ಪೋಸ್ಟ್ ಹಾಕಿರುವ ಸಾಧ್ಯತೆಯಿದೆ. ಆದರೆ ಬೇರೆ ದೇಶದಲ್ಲಿ ಕುಳಿತು ಬಾಂಬ್ ಬೆದರಿಕೆ ರೀತಿ ಐಪಿ ಅಡ್ರೆಸ್ ಬದಲಿಸಿ ಪೋಸ್ಟ್ ಮಾಡಿರುವುದಿಲ್ಲ. ಯಾರೋ ಇಲ್ಲೇ ಎಲ್ಲೋ ಪುಟ್ಟ ಹಳ್ಳಿಯಲ್ಲಿ, ನಗರದಲ್ಲೋ ವಾಸ ಮಾಡುವ ಅಂಧ ಅಭಿಮಾನಿಗಳು ಈ ರೀತಿ ಪೋಸ್ಟ್ ಹಾಕಿದ್ದು, ಶೀಘ್ರದಲ್ಲೇ ಬಂಧನ ಆಗುವ ಸಾಧ್ಯತೆ ಇದೆ ಎನ್ನುತ್ತಿವೆ ಪೊಲೀಸ್ ಮೂಲಗಳು.