ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ತಯಾರಿ ಬಗ್ಗೆ ಕೇಳಿದಾಗ, ನಾವು ಕೇವಲ ಇಂದು ಚುನಾವಣೆ ತಯಾರಿ ಮಾಡುತ್ತಿಲ್ಲ. ಸುರೇಶ್ ಅವರು ಗೆದ್ದ ಮೊದಲ ದಿನದಿಂದ ಪ್ರತಿ ನಿತ್ಯ ಕೆಲಸ ಮಾಡಿಕೊಂಡೆ ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ದೇಹವನ್ನು ಅವರ ತವರೂರಿಗೆ ತರಲು ಬಿಜೆಪಿ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ. ಆದರೆ ಡಿ.ಕೆ. ಸುರೇಶ್ ಅವರು ಕೋವಿಡ್ ಕಷ್ಟಕಾಲದಲ್ಲಿ ರೈತರಿಂದ ಹಣ್ಣು ತರಕಾರಿ ಖರೀದಿ ಮಾಡಿ ಜನರಿಗೆ ಉಚಿತವಾಗಿ ಹಂಚಿದರು. ಜನರಿಗೆ ಮೆಡಿಕಲ್ ಕಿಟ್ ನೀಡಿ ಸಹಾಯ ಮಾಡಿದರು. ಸರ್ಕಾರ ಶವಗಳನ್ನು ಜೆಸಿಬಿಯಲ್ಲಿ ಎಸೆಯುತ್ತಿರುವಾಗ, ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವರ ಮನೆಯವರು ಮುಂದೆ ಬಾರದಿದ್ದಾಗ ಡಿ.ಕೆ ಸುರೇಶ್ ಪಿಪಿಇ ಕಿಟ್ ಧರಿಸಿ ಶವಗಳ ಅಂತ್ಯ ಸಂಸ್ಕಾರ ಮಾಡಿದರು ಅಂತ ಸಹೋದರನ ಬಗ್ಗೆ ಡಿಕೆ ಶಿವಕುಮಾರ್ ಹಾಡಿ ಹೊಗಳಿದ್ದಾರೆ.
ಎಲ್ಲಾ ನಾಯಕರು ಮನೆಯಿಂದ ಆಚೆ ಬರಲು ಹಿಂಜರಿದಾಗ, ಸುರೇಶ್ ಕೋವಿಡ್ ಆಸ್ಪತ್ರೆಗಳಿಗೆ ಹೋಗಿ, ಸೊಂಕಿತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಇದೆಲ್ಲವೂ ಇತಿಹಾಸ. ಅಂತಹ ಕಷ್ಟ ಕಾಲದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕ್ಷೇತ್ರದ ಜನರಿಗಾಗಿ ಶ್ರಮಿಸಿದ್ದಾರೆ. ಇದ್ಯಾವುದೂ ಚುನಾವಣೆ ಸಮಯದಲ್ಲಿ ಮಾಡಿದ ಕೆಲಸವಲ್ಲ. ಸುರೇಶ್ ಅವರು ಪ್ರತಿ ಹಳ್ಳಿ, ಹಳ್ಳಿ ಸುತ್ತಾಡಿ ಪಂಚಾಯ್ತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ. ಹೀಗಾಗಿ ನಾವು ಈ ಬಾರಿಯ ಚುನಾವಣೆಯಲ್ಲಿ ನಾವು ವಿಶೇಷವಾದ ತಯಾರಿ ಮಾಡುವ ಅಗತ್ಯವಿಲ್ಲ. ನಮ್ಮ ಪರವಾಗಿ ಜನರು, ಕಾರ್ಯಕರ್ತರು ಇದ್ದಾರೆ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ