-ಕೃಷ್ಣಮಣಿ
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ (Loksabha Election) ಮಂಡ್ಯದಿಂದ (Mandya) ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ (Nikhil KumarSwamy) ಸೋಲುಂಡಿದ್ದರು. ಇದೀಗ ಸತ್ಯ ಹೊರಬಿದ್ದಿದೆ. ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ (siddaramaiah) ಮಾತನಾಡುತ್ತಿದ್ದಂತೆ ಅವರ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumarswamy) ಆಕ್ರೋಶ ಹೊರಹಾಕಿದ್ದಾರೆ.
ನಮ್ಮಿಂದ ಸುಮಲತಾ (sumalatha) ಗೆದ್ದಿದ್ದಾರೆ ಎಂದಿದ್ದ ಸಿಎಂ ಸಿದ್ದರಾಮಯ್ಯ ಮಾತಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸುಳ್ಳುರಾಮಯ್ಯ ಬಿರುದಾಂಕಿತರಾದ ನೀವು, ಕೊನೆಗೂ ಸತ್ಯ ಕಕ್ಕಿದ್ದೀರಿ. ಸುಳ್ಳು ರಾಮಯ್ಯ ಎಂಬ ಕುಖ್ಯಾತಿಯಿಂದ ಹೊರ ಬರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೀರಿ ಎಂದು ಛೇಡಿಸಿದ್ದಾರೆ.
ಯಾವಾಗಲೂ ಸತ್ಯ ಗಂಟಲಲ್ಲಿ ಸಿಕ್ಕಿಕೊಂಡ ಬಿಸಿ ತುಪ್ಪದಂತೆ. ಅದನ್ನು ಕಕ್ಕಲೇಬೇಕು. 2019ರಲ್ಲಿ ಮಂಡ್ಯದಿಂದ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ಸೇ ಕಾರಣ ಎಂದು ಸ್ವತಃ ನೀವೇ ಒಪ್ಪಿಕೊಂಡಿದ್ದೀರಿ. ನಿಮ್ಮದೇ ಮಾತುಗಳಲ್ಲಿ ಹೇಳುವುದಾದರೆ ಸುಮಲತಾ ಬಿಜೆಪಿಯಿಂದ ಗೆದ್ದಿಲ್ಲ. ಅವರು ಕಾಂಗ್ರೆಸ್ಸಿನಿಂದ ಗೆದ್ದಿದ್ದು, ಇದು ನಂಬಿಕೆ ದ್ರೋಹವಲ್ಲವೇ..? ನಿಮ್ಮ ಗೋಮುಖ ವ್ಯಾಘ್ರತನ ತಿಳಿಯಲು ಇಷ್ಟು ಸಾಕು ಎಂದು ಟೀಕಿಸಿದ್ದಾರೆ.
ಅಂದು ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಅವರ ಜೊತೆಯಲ್ಲೇ ಪ್ರಚಾರದ ಸೋಗಿನ ನಾಟವಾಡಿ, ಮಾಧ್ಯಮಗಳ ಮುಂದೆ ಗೆಲ್ಲಿಸುತ್ತೇವೆ ಎಂದು ಫೋಸು ಕೊಟ್ಟು, ನಿಖಿಲ್ ಸುತ್ತ ಶಕುನಿವ್ಯೂಹವನ್ನೇ ರಚಿಸಿದ ಕಲಿಯುಗ ಶಕುನಿ ನೀವಲ್ಲದೇ ಮತ್ಯಾರು..? ಎಂದು ಸಿಎಂ ಸಿದ್ದರಾಮಯ್ಯರನ್ನು ಶಕುನಿ ಎಂದು ಕಿಡಿ ಕಾರಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಕಳ್ಳಬೆಕ್ಕು ಕದ್ದು ಹಾಲು ಕುಡಿದರೆ ಗೊತ್ತಾಗದೇ..? ಬೂದಿ ಮುಚ್ಚಿದ ಕೆಂಡ ತಣ್ಣಗಿರಲು ಸಾಧ್ಯವೇ..? ಕುದಿಯುವ ಕುಲುಮೆಯಂತಿರುವ ನಿಮ್ಮ ಉದರ ಹುರಿಗೆ ತಂಪೆನ್ನುವುದುಂಟೆ..? ಎಂದು ಟೀಕಿಸಿದ್ದಾರೆ.
5 ವರ್ಷಗಳ ನಂತರವಾದರೂ ಸತ್ಯ ಕಕ್ಕಿದ್ದೀರಿ ಹಾಗೂ ನಂಬಿದವನ ಮನೆ ನಾಶವಾಗಲಿ ಎನ್ನುವ ನಿಮ್ಮ ಹೇಯತನ ಬಯಲಾಗಿದೆ. ಸತ್ಯಮೇಯ ಜಯತೆ. ಇದಿಷ್ಟೇ ನನ್ನ ಕಳಕಳಿ ಮತ್ತು ನಂಬಿಕೆ ಎನ್ನುವ ಮೂಲಕ ಕಳೆದ ಬಾರಿ ಮೈತ್ರಿ ಸರ್ಕಾರದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಜನರ ಎದುರು ಬಯಲು ಮಾಡಿದ್ದಾರೆ. ಬೆಳಗ್ಗೆ ಮಂಡ್ಯದಲ್ಲಿ ನಡೆದಿದ್ದ ಗ್ಯಾರಂಟಿ ಸಮಾವೇಶದಲ್ಲಿ ಸುಮಲತಾ ಬಿಜೆಪಿಯಿಂದ ಗೆದ್ದಿಲ್ಲ, ಕಾಂಗ್ರೆಸ್ ವೋಟ್‌ನಿಂದ ಸುಮಲತಾ ಗೆದ್ದಿದ್ದರು ಎಂದು ಸಿಎಂ ಹೇಳಿದ್ದರು.
#karntaka #bengaluru #siddaramaiah #hdkumarswamy #sumalathaambreesh #nikhilkumarswamy #mandya #congress #jds #bjp #loksabhaelection













