-ಕೃಷ್ಣಮಣಿ
ಬೆಂಗಳೂರಿನ ಜನ ಹಣದ ಹಿಂದೆ ಬಿದ್ದು ಎಲ್ಲವನ್ನೂ ಮರೆತುಬಿಡುತ್ತಾರೆ.. ಸಂಬಂಧಗಳಿಗೂ ಬೆಲೆ ಕೊಡದ ಜನ ಕಾಲದ ಜೊತೆಗೆ ಓಡುತ್ತಾರೆ. ಹುಟ್ಟೂರುಗಳಲ್ಲಿ ಹೆತ್ತವರಿದ್ದರೂ ವರ್ಷಕ್ಕೆ ಒಂದೆರಡು ಬಾರಿ ಅಷ್ಟೇ ಭೇಟಿ ನೀಡುವ ಬೆಂಗಳೂರಿನ ಜನರಿಗೆ ಕೇವಲ ಕಾಯಕ ಹಾಗೂ ಬರುವ ಸಂಬಳ ಅಷ್ಟೇ ಮುಖ್ಯ. ಇನ್ನೆಲ್ಲವೂ ಬೆಂಗಳೂರಿಗರಿಗೆ ನಗಣ್ಯ. ಆದರೆ ಯಾವಾಗ ಬುಡಕ್ಕೆ ಬೆಂಕಿ ಬೀಳುತ್ತದೆ ಆಗ ಎದ್ದು ನಿಲ್ಲುವ ಜಾಯಮಾನ ರೂಢಿಸಿಕೊಂಡಿದ್ದಾರೆ. ಇದೀಗ ಬೆಂಗಳೂರಿನ ಜನರ ಬುಡಕ್ಕೆ ಬೆಂಕಿ ಬಿದ್ದಿದೆ. ಈಗ ಬೆಂಗಳೂರಿಗರು ತಮಗೆ ಬಂದಿರುವ ಸಂಕಷ್ಟಗಳ ಬಗ್ಗೆ ಸರ್ಕಾರದ ವಿರುದ್ಧ ಸೆಟೆದು ನಿಲ್ಲುತ್ತಿದ್ದಾರೆ. ನಮ್ಮ ಕಷ್ಟವನ್ನು ಬಗೆಹರಿಸಿ ಎಂದು ಮನವಿ ಮಾಡುತ್ತಿದ್ದಾರೆ.
ಮಳೆಯಿಲ್ಲದೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕುಸಿತಗೊಂಡಿತ್ತು. ಮಂಡ್ಯ ಜಿಲ್ಲೆಯಲ್ಲಿರುವ KRS ಡ್ಯಾಂ ಕಳೆದ ಬಾರಿ ಸಂಪೂರ್ಣವಾಗಿ ತುಂಬಿರಲಿಲ್ಲ. ಆದರೂ ಅನಿವಾರ್ಯವಾಗಿ ಸುಪ್ರೀಂಕೋರ್ಟ್ ನಿಗದಿ ಮಾಡಿರುವ ನೀರಿನ ಪ್ರಮಾಣವನ್ನು ತಮಿಳುನಾಡಿಗೆ ಬಿಡುಗಡೆ ಮಾಡಲೇಬೇಕಾಯ್ತು. ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ, ಮಂಡ್ಯ, ಮೈಸೂರು, ರಾಮನಗರ ಭಾಗದ ರೈತರು ಪ್ರತಿಭಟನೆ ಆಯೋಜನೆ ಮಾಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಒತ್ತಡ ಹೇರುವ ಪ್ರಯತ್ನ ಮಾಡಿದರು, ಕರ್ನಾಟಕ ಬಂದ್ಗೂ ಕರೆ ನೀಡಿದ್ದರು. ಆದರೆ ಬೆಂಗಳೂರಿಗರು ಮಾತ್ರ ಕ್ಯಾರೇ ಎನ್ನಲಿಲ್ಲ. ಅನ್ನದಾತರ ಹೋರಾಟಕ್ಕೆ ಸಾಥ್ ನೀಡುವ ಗೋಜಿಗೆ ಹೋಗಲಿಲ್ಲ. ಕೆಲಸ ಮಾಡಿ ಸಂಬಳ ಎಣಿಸುವುದರಲ್ಲೇ ಬ್ಯುಸಿಯಾಗಿದ್ದರು.
ಕಾವೇರಿ ನದಿಯಲ್ಲಿ ನೀರಿಲ್ಲ, ಕೆಆರ್ಎಸ್ ಡ್ಯಾಂ ಖಾಲಿ ಖಾಲಿ. ಹೀಗಿದ್ದರೂ ತಮಿಳುನಾಡಿಗೆ ನೀರು ಬಿಡಬೇಕಾಯ್ತು. ಉತ್ತಮ ಮಳೆಯಾದಾಗ ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಮಳೆಯ ಪ್ರಮಾಣ ಕುಂಠಿತವಾದಾಗ ನೀರು ಬಿಡುವುದು ಸಾಧ್ಯವಿಲ್ಲ. ಸಂಕಷ್ಟ ಸೂತ್ರದ ಅಡಿಯಲ್ಲಿ ಮತ್ತೊಂದು ತೀರ್ಪು ನೀಡಬೇಕು. ಮಳೆ ಬಂದಾಗ ಸಂಪೂರ್ಣ ಪ್ರಮಾಣದ ನೀರನ್ನು ಬಿಡುವುದಕ್ಕೆ ಅಡ್ಡಿಯಿಲ್ಲ. ಮಳೆ ಬಾರದೆ ಬರಗಾಲ ಇದ್ದ ವರ್ಷದಲ್ಲಿ ನೀರನ್ನು ಎಷ್ಟು ಬಿಡಬೇಕು ಎಂದು ಸಂಕಷ್ಟ ಸೂತ್ರ ಮಾಡಬೇಕು ಎಂದು ಕೂಗು ಎದ್ದಿತ್ತು. ಆ ಕೂಗಿದೆ ಬೆಂಗಳೂರು ದನಿಗೂಡಿಸಬೇಕಿತ್ತು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜಲಶಕ್ತಿ ಸಚಿವರು ಸಭೆ ಮಾಡಿ ಸಂಕಷ್ಟ ಕಾಲದಲ್ಲಿ ಎಷ್ಟು ನೀರು ಬಿಡಬೇಕು ಎನ್ನುವುದನ್ನು ನಾಲ್ಕೂ ರಾಜ್ಯಗಳ ಸಮ್ಮುಖದಲ್ಲಿ ಇತ್ಯರ್ಥ ಮಾಡಲು ಅವಕಾಶವಿತ್ತು. ಆದರೆ ಬೆಂಗಳೂರಿಗರು ಆಗ ಬ್ಯುಸಿಯಾಗಿದ್ದರು.
ಬೆಂಗಳೂರಿನ ಬಹುತೇಕ ಭಾಗಗಳಿಗೆ ಬೋರ್ವೆಲ್ ನೀರು ಬಿಟ್ಟರೂ ಕಾವೇರಿಯಿಂದ ನೀರನ್ನು ಪೂರೈಕೆ ಮಾಡಲಾಗುತ್ತದೆ. ಮಳೆ ನೀರನ್ನು ನಾವು ಅತಿ ಹೆಚ್ಚು ಬಳಕೆ ಮಾಡುತ್ತೇವೆ. ಮಳೆ ಬಾರದೆ ಬರಗಾಲದ ಪರಿಸ್ಥಿತಿ ಎದುರಾದಾಗ ಅಂತರ್ಜಲ ಪ್ರಮಾಣ ಕುಸಿತವಾಗಿ ಬೋರ್ವೆಲ್ಗಳು ಬತ್ತಿ ಹೋಗುತ್ತವೆ. ಇದನ್ನು ಅರ್ಥ ಮಾಡಿಕೊಳ್ಳದ ಬೆಂಗಳೂರು ಜನ, ಬಾಯಿಗೆ ಬಂದಂತೆ ಮಾತನಾಡಿದರು. ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಗೆ ಪಾದಯಾತ್ರೆ ಮಾಡಿದಾಗ ರಾಜಕೀಯವಾಗಿ ನೋಡಿ ಸುಮ್ಮನಾದರು. ಈಗ ನೀರಿನ ಬವಣೆ ಶುರುವಾಗಿದೆ. ಕೆಆರ್ಎಸ್ ಡ್ಯಾಂನಲ್ಲಿ ನೀರಿಲ್ಲ. ಬೋರ್ವೆಲ್ಗಳಲ್ಲಿ ಅಂತರ್ಜಲ ಕುಸಿತವಾಗಿ ಬೋರ್ವೆಲ್ಗಳಲ್ಲಿ ನೀರು ಬರ್ತಿಲ್ಲ. ಸರ್ಕಾರಕ್ಕೆ ನೀರು ಬೇಕು ನೀರು ಬೇಕು ಎಂದು ಆಗ್ರಹ ಮಾಡಿದರೆ ಎಲ್ಲಿಂದ ತರಲು ಸಾಧ್ಯ..? ಯಾವುದೇ ಒಂದು ಹೋರಾಟ ನಡೆಯುವಾಗ ನಮಗೆ ಸಂಬಂಧಿಸಿಲ್ಲ ಅಂತಾ ಮೌನವಾಗಿ ಇರುವ ಬದಲು ಬೆಂಬಲಿಸಿದ್ದರೆ..! ಸಂಕಷ್ಟ ಸೂತ್ರ ಜಾರಿ ಆಗಿದ್ದರೆ..! ತಮಿಳುನಾಡಿಗೆ ಬಿಡುವ ನೀರಿನಲ್ಲಿ ಕನಿಷ್ಟ 10 TMC ಕಡಿಮೆ ಆಗಿದ್ದರೆ..! ಬೆಂಗಳೂರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.. ಅಲ್ಲವೇ..? ಯೋಚಿಸಿ..