ನವದೆಹಲಿ (NewDelhi): ಲೋಕಸಭಾ ಚುನಾವಣೆ (Loksabha Election) ಹೊತ್ತಿನಲ್ಲಿ ಕೇಂದ್ರ ಸರ್ಕಾರ (Central Government) ಜನತೆಗೆ ಸಿಹಿ ಸುದ್ದಿ ನೀಡಿದೆ.
ಉಜ್ವಲ ಯೋಜನೆಯಡಿ (Ujjwala Yojana) ಬಡ ಮಹಿಳೆಯರಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್ ಗೆ ನೀಡುತ್ತಿದ್ದ 300 ರೂ. ಸಬ್ಸಿಡಿಯನ್ನು ಮುಂದಿನ ಆರ್ಥಿಕ ವರ್ಷದವರೆಗೆ ವಿಸ್ತರಿಸುವುದಾಗಿ ಪ್ರಕಟಿಸಿದೆ.
ಈ ಕ್ರಮದಿಂದ ಸುಮಾರು 10 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ ವಾರ್ಷಿಕ 12,000 ಕೋಟಿ ರೂ. ವೆಚ್ಚವಾಗಲಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಉಜ್ವಲ ಯೋಜನೆಯಡಿ ಪ್ರತಿ ಸಿಲಿಂಡರ್‌ಗೆ 300 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದ್ದು, ಇದು ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ. ಆದರೆ ಈ ಸಬ್ಸಿಡಿಯನ್ನು 2024-25 ರವರೆಗೆ ವಿಸ್ತರಿಸಲು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ(CCEA) ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ, ಪ್ರತಿ ವರ್ಷಕ್ಕೆ 12 ಸಿಲಿಂಡರ್ ಗಳಿಗೆ ನೀಡಲಾಗುತ್ತಿದ್ದ 200 ರೂ. ಸಬ್ಸಿಡಿಯನ್ನು 300 ರೂ.ಗೆ ಹೆಚ್ಚಿಸಿತ್ತು. ಇದರಿಂದ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ 600 ರೂ.ಗೆ ಲಭ್ಯವಾಗುತ್ತಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಬಂಪರ್ ಗಿಫ್ಟ್ ನೀಡಿದೆ.
#newdelhi #ujjwalasubsidy #lpgcylinder #CentralGovernment #Modigovt