ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವ ರಾಮೇಶ್ವರಂ ಕೆಫೆ(Rameshwaram Cafe) ಸ್ಫೋಟ(Blast) ಪ್ರಕರಣದ ಆರೋಪಿಯ ಬಂಧನಕ್ಕೆ ಪೊಲೀಸರು ವ್ಯಾಪಕ ಬಲೆ ಬೀಸಿದ್ದರೂ, ಈವರೆಗೂ ಆರೋಪಿಯ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ಬಂಧನಕ್ಕೆ ಸಾರ್ವಜನಿಕರ ನೆರವು ಪಡೆಯಲು ಮುಂದಾಗಿರುವ ಪೊಲೀಸರು(Police) ಆರೋಪಿಯ ಬಂಧನಕ್ಕೆ ಸಹಕಾರಿಯಾಗುವ ಸುಳಿವು ನೀಡಿದವರಿಗೆ NIA (ರಾಷ್ಟ್ರೀಯ ತನಿಖಾ ದಳ) 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ.

ಪ್ರಕರಣದ ತನಿಖೆ ಆರಂಭಿಸಿರುವ NIA ಅಧಿಕಾರಿಗಳು ಇಂದು ಆರೋಪಿಯ ಫೋಟೋ(Photo) ಬಿಡುಗಡೆಗೊಳಿಸಿದ್ದು, ಆರೋಪಿಯ ಕುರಿತು ಯಾವುದೇ ಸುಳಿವಿದ್ದಲ್ಲಿ ಹಂಚಿಕೊಳ್ಳುವಂತೆ ಹಾಗೂ ಮಾಹಿತಿ ನೀಡಿದವರ ವಿವರಗಳನ್ನ ಗೌಪ್ಯವಾಗಿರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾಂಬ್ ಸ್ಫೋಟ(Bomb Blast) ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳ ತಂಡ 5 ಮಾರ್ಚ್ 2024ರಂದು ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ತನಿಖೆ ಆರಂಭಿಸಿತ್ತು. ಎನ್ ಐಎ ಎಸ್.ಪಿ ನೇತೃತ್ವದ ಮೂವರು ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದು, ಕೆಫೆ(Cafe) ಸಿಬ್ಬಂದಿಯಿಂದ ಘಟನಾ ದಿನದ ವಿವರ ಪಡೆದುಕೊಂಡಿದ್ದರು. ಈ ತನಿಖೆ ಇನ್ನು ಮುಂದುವರಿದಿದ್ದು, ಈಗ ಆರೋಪಿ ಸುಳಿವು ನೀಡಿದವರಿಗೆ ಎನ್ ಐಎ 10 ಲಕ್ಷ ನಗದು ಬಹುಮಾನ ಘೋಷಿಸಿದೆ.

ಸಂಪರ್ಕಿಸಬೇಕಿರುವ ವಿವರ: Tel:- 080-29510900, 8904241100, Mail: info.blr.nia.gov.in
ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು CCB ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಬ್ಯಾಗ್ ಸಮೇತ ಕೆಫೆಗೆ ಆಗಮಿಸಿ, ಬಳಿಕ ಒಬ್ಬನೇ ತೆರಳುತ್ತಿರುವುದು ಪತ್ತೆಯಾಗಿದೆ. ಈತನ ಚಹರೆಯನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ವೈಟ್ ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಭಾರೀ ಸ್ಫೋಟ ಸಂಭವಿಸಿತ್ತು. 9 ಮಂದಿ ಗ್ರಾಹಕರು ಗಾಯಗೊಂಡಿದ್ದರು. ಸ್ಪೋಟದ ತೀವ್ರತೆ ಕಡಿಮೆ ಇದ್ದ ಕಾರಣದಿಂದಾಗಿ ದೊಡ್ಡ ಹಾನಿ ಸಂಭವಿಸಿರಲಿಲ್ಲ. ಆದರೆ ರಾಜ್ಯ ರಾಜಧಾರನಿಯಲ್ಲಿ ನಡೆದ ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
#RameshwaramCafe #BombBlast #BangalorePolice #Karnataka #NIApolice