ಲೋಕಸಭಾ ಚುನಾವಣೆಗೂ (MP Election) ಮುನ್ನ ಪ್ರಬಲ ಆಗಬೇಕಿದ್ದ ಕಾಂಗ್ರೆಸ್ (congress) ಪಕ್ಷ ದುರ್ಬಲ ಆಗುತ್ತಲೇ ಸಾಗಿದೆ. ಮಹಾರಾಷ್ಟ್ರದಲ್ಲಿ (Maharashtra) ಕಾಂಗ್ರೆಸ್ ನಾಯಕರು ಬಿಜೆಪಿ (bjp) ಸೇರಿದ ಬಳಿಕ ಇದೀಗ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುವುದು ಬಹುತೇಕ ಖಚಿತ ಆಗುತ್ತಿದೆ. ಶನಿವಾರ ಸಂಜೆ ಅಮಿತ್ ಶಾ (Amit shah) ಭೇಟಿ ಮಾಡಿರುವ ಮಾಜಿ ಸಿಎಂ ಕಮಲ್ನಾಥ್ (Kamalnath) ಹಾಗೂ ಪುತ್ರ ನಕುಲ್ ನಾಥ್ ಇಂದು ಬಿಜೆಪಿ ಸೇರಲಿದ್ದಾರೆ ಎನ್ನಲಾಗ್ತಿದೆ. ದೆಹಲಿಯಲ್ಲಿ ಮಾತನಾಡಿರುವ ಕಮಲ್ನಾಥ್ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನಿಮಗೆ ಮಾಹಿತಿ ಕೊಡುತ್ತೇವೆ ಎನ್ನುವ ಮೂಲಕ ಬಿಜೆಪಿ ಕಡೆಗೆ ಹೊರಟಿರುವ ವಿಚಾರವನ್ನು ಖಚಿತ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ ಕಮಲ್ನಾಥ್ ಸಿಎಂ ಆಗಿ ಅಧಿಕಾರ ಹಿಡಿದಿದ್ದರು. ಆ ಬಳಿಕ ಕಮಲೊ್ನಾಥ್ ಸರ್ಕಾರವನ್ನು ಉರುಳಿಸಿದ್ದ ಬಿಜೆಪಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಸಿಎಂ ಆಗಿಸಿತ್ತು. ಅಂದು ಜ್ಯೋತಿರಾಧಿತ್ಯ ಸಿಂಧಿಯಾ ತನ್ನ ಬೆಂಬಲಿಗ ಶಾಸಕರ ಜೊತೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷವನ್ನು ಸೇರಿದ್ದರು. ಇದೀಗ ಅದೇ ಬಿಜೆಪಿ ಪಕ್ಷಕ್ಕೆ ಕಮಲ್ನಾಥ್ ಧಾವಿಸುತ್ತಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಮಧ್ಯಪ್ರದೇಶದಲ್ಲಿ ಮತ್ತೊಂದು ಅಘಾತ ಎನ್ನುವಂತಾಗಿದೆ.

ಕಮಲ್ನಾಥ್ ಕಾಂಗ್ರೆಸ್ ಬಿಡ್ತಿರೋದ್ಯಾಕೆ..?
ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ನಾಥ್, ಕಾಂಗ್ರೆಸ್ ಬಿಟ್ಟು ಕಮಲ ಹಿಡೀತಾರೆ ಅನ್ನೋದು ಖಚಿತ ಆಗುತ್ತಿದೆ. ಆದರೆ ಈ ನಿರ್ಧಾರದ ಹಿಂದಿನ ಕಾರಣ ಏನು ಎನ್ನುವುದು ಎಲ್ಲರೊಳಗಿನ ಪ್ರಶ್ನೆ. ಮಧ್ಯಪ್ರದೇಶದಿಂದ ರಾಜ್ಯಸಭಾ ಅಭ್ಯರ್ಥಿ ಆಕಾಂಕ್ಷಿ ಆಗಿದ್ದ ಕಮಲ್ ನಾಥ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನಾಯಕರು ಪರಿಗಣಿಸಿಲ್ಲ ಎನ್ನುವುದು ಕಮಲ್ನಾಥ್ ಕಣ್ಣು ಕೆಂಪಾಗುವಂತೆ ಮಾಡಿದೆ. ಅಷ್ಟೇ ಅಲ್ಲದೆ ಅಭ್ಯರ್ಥಿ ಆಯ್ಕೆಯಲ್ಲೂ ತಮ್ಮ ಜೊತೆ ಸಮಾಲೋಚಿಸಿಲ್ಲ. ಗ್ವಾಲಿಯರ್ ಕ್ಷೇತ್ರದ ಅಶೋಕ್ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದು, ಜೊತೆಗೆ ಮುಂಬರುವ ಚುನಾವಣೆಯಲ್ಲಿ ಕಮಲ್ನಾಥ್ ಪುತ್ರ ನಕುಲ್ ನಾಥ್ಗೂ ಛಿಂದ್ವಾರ ಟಿಕೆಟ್ ಡೌಟ್ ಹಿನ್ನೆಲೆಯಲ್ಲಿ ಸಿಡಿದೆದ್ದಿದ್ದಾರೆ ಎನ್ನಲಾಗ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಮೊಳಗಿದ ಜೈ ಶ್ರೀರಾಮ್!!
ಪುತ್ರ ನಕುಲ್ ಜೊತೆಗೂಡಿ ದೆಹಲಿಗೆ ಬಂದಿರುವ ಕಮಲ್ನಾಥ್ ಬಿಜೆಪಿ ಸೇರಲಿದ್ದಾರೆ ಎನ್ನುವ ಚರ್ಚೆಗಳು ಶುರುವಾಗುತ್ತಿದ್ದಂತೆ, ಮಧ್ಯಪ್ರದೇಶದಲ್ಲಿ ಬೆಂಬಲಿಗರು ಜೈಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಮಲ್ನಾಥ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇನ್ನು ನಕುಲ್ ನಾಥ್ ಕೂಡ ತನ್ನ ಎಕ್ಸ್ (Twitter) ಖಾತೆಯಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ತೆಗೆದು ಹಾಕಿದ್ದಾರೆ. ಇನ್ನು ಕಮಲ್ನಾಥ್ ಜೊತೆಯಲ್ಲಿ ಮಾಜಿ ಸಚಿವ ಹಾಗು ಸೋನ್‌ಕುಚ್‌ನ ಮಾಜಿ ಶಾಸಕ ಮತ್ತು ದೇವಾಸ್‌ನ ಮಾಜಿ ಸಂಸದ ಸಜ್ಜನ್ ಸಿಂಗ್ ವರ್ಮಾ ಕೂಡ ಎಕ್ಸ್ ಪ್ರೊಫೈಲ್‌ನಿಂದ ಕಾಂಗ್ರೆಸ್ ಪಕ್ಷದ ಚಿಹ್ನೆ ತೆಗೆದುಹಾಕಿದ್ದಾರೆ. ಕಮಲ್ ನಾಥ್ ಆಪ್ತ ಸಂಜಯ್ ಶುಕ್ಲಾ ಮತ್ತು ದೇಪಾಲ್‌ಪುರದ ಮಾಜಿ ಶಾಸಕ ವಿಶಾಲ್ ಪಟೇಲ್ ಕೂಡ ಬಿಜೆಪಿ ಸೇರುವ ಸಾಧ್ಯತೆಯಿದೆ.
ರಾಹುಲ್ ಎಂಟ್ರಿಗೂ ಮುನ್ನವೇ ಕಾಂಗ್ರೆಸ್ಗೆ ಮುಜುಗರ!!
ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದ ಕಮಲ್ ನಾಥ್, ಇದೀಗ ಕಾಂಗ್ರೆಸ್ ಸೇರುವುದಕ್ಕೆ ಮಾತುಕತೆ ನಡೆಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ರಾಹುಲ್ ನ್ಯಾಯ್ ಯಾತ್ರೆ ಮಧ್ಯಪ್ರದೇಶ ಪ್ರವೇಶ ಮಾಡಲಿದೆ. ರಾಹುಲ್ ಗಾಂಧಿ ಪಾದಯಾತ್ರೆ ಮಧ್ಯಪ್ರದೇಶಕ್ಕೆ ಎಂಟ್ರಿ ಆಗುವ ಮುನ್ನವೇ ಕಮಲ್ ನಾಥ್ ಕಮಲ ಹಿಡಿಯುವುದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರಲಿದೆ ಎನ್ನಲಾಗ್ತಿದೆ. ಇಂದು ದೆಹಲಿಯಲ್ಲಿ ಕಮಲ್ನಾಥ್ ಬಿಜೆಪಿ ಸೇರ್ಪಡೆ ಆಗುವ ಸಾಧ್ಯತೆಯಿದೆ. ಇತ್ತೀಚಿಗಷ್ಟೇ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌಹಾಣ್ ಬಿಜೆಪಿ ಸೇರಿದ್ರು. ಇದೀಗ ಮಧ್ಯಪ್ರದೇಶದಲ್ಲೂ ಕಮಲ್ನಾಥ್ ಪಕ್ಷಾಂತರ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ಸಂಕಷ್ಟದ ದಿನಗಳು ಎನ್ನುವಂತಾಗಿದೆ.
ಕೃಷ್ಣಮಣಿ
#madhyapradesh #congress #political #mpelection #national #kamalnath