ನವದೆಹಲಿ: ಬಿಜೆಪಿ ಹಾಗೂ ಯುಪಿಎ ನಡುವಿನ ಕಾಳಗ ತೀವ್ರಗೊಂಡಿರುವುದರ ನಡುವೆಯೇ ಯುಪಿಎ ಸರ್ಕಾರದ ಹತ್ತು ವರ್ಷಗಳ ಅಧಿಕಾರದ ವಿರುದ್ಧ ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ‘ಶ್ವೇತಪತ್ರ’ಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ಹತ್ತು ವರ್ಷಗಳ ಅಧಿಕಾರದ ಕುರಿತು ‘ಕಪ್ಪು ಪತ್ರ’ ಹೊರತರಲು ಸಿದ್ದತೆ ನಡೆಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡಿಸುವಾಗ, ಯುಪಿಎ ಆಡಳಿತ ಮತ್ತು ಎನ್‌ಡಿಎ ಅವಧಿಯಲ್ಲಿ 2014ರ ಮೊದಲು ಮತ್ತು ನಂತರದ ಭಾರತೀಯ ಆರ್ಥಿಕತೆಯ ಸ್ಥಿತಿಯನ್ನು ಹೋಲಿಸುವ ‘ಶ್ವೇತಪತ್ರ’ವನ್ನು ತಮ್ಮ ಸರ್ಕಾರ ಮಂಡಿಸಲಿದೆ ಎಂದು ಹೇಳಿದ್ದಾರೆ.

ಗಮನಾರ್ಹವೆಂದರೆ, ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಸದನದ ಕೊನೆಯ ಅಧಿವೇಶನ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಾತನಾಡಿದ್ದಾರೆ. ದ್ವಿಸದನದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ದೇಶದ ಆರ್ಥಿಕ ಸ್ಥಿತಿಯ ಎಷ್ಟು ಕಳಪೆಯಾಗಿತ್ತು ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದಾಗ ಎಷ್ಟು ಬದಲಾವಣೆ ಆಗಿದೆ ಎಂದು ತಾನು ಶ್ವೇತಪತ್ರವನ್ನು ಮಂಡಿಸುತ್ತೇನೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆ ಮತ್ತು ಲೋಕಸಭೆಯ ಉಭಯ ಸದನಗಳಲ್ಲಿ ಇದನ್ನು ಮಂಡಿಸಲಿದ್ದಾರೆ. 2024ರ ಮಧ್ಯಂತರ ಬಜೆಟ್ ಭಾಷಣದಲ್ಲಿ, ಸೀತಾರಾಮನ್ ಕೇಂದ್ರ ಸರ್ಕಾರವು ‘ಶ್ವೇತಪತ್ರ’ವನ್ನು ಮಂಡಿಸಲಿದೆ ಎಂದು ಹೇಳಿದ್ದರು.

ಯುಪಿಎ ಅವಧಿಯ ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲಾಗಿದೆ ಮತ್ತು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಆರ್ಥಿಕತೆ ಉನ್ನತ ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿದೆ. 2014ರವರೆಗೆ ನಾವು ಎಲ್ಲಿದ್ದೇವೆ, ಈಗ ಎಲ್ಲಿದ್ದೇವೆ ಎಂದು ನೋಡುವುದು ಈಗ ಸೂಕ್ತವಾಗಿದೆ ಮತ್ತು ‘ಶ್ವೇತಪತ್ರ’ ವನ್ನು ಮಂಡಿಸಲಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕಾಂಗ್ರೆಸ್‌ನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ 2014ರ ಮೊದಲು ಮತ್ತು ನಂತರ ಭಾರತದ ಆರ್ಥಿಕ ಸ್ಥಿತಿಯನ್ನು ಹೋಲಿಸಿ ಸರ್ಕಾರ ಶ್ವೇತಪತ್ರವನ್ನು ಮಂಡಿಸಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಜನವರಿ 31ರಂದು ಆರಂಭವಾದ ಲೋಕಸಭೆ ಅಧಿವೇಶನವು ಫೆಬ್ರುವರಿ 9ರಂದು ಕೊನೆಗೊಳ್ಳಲಿದೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸರ್ಕಾರವು ಸದನಕ್ಕೆ ತರುವ ಯಾವುದೇ ಪತ್ರಗಳ ಬಗ್ಗೆ ಉತ್ತರಿಸಲು ತಮ್ಮ ಪಕ್ಷ ಸಿದ್ಧವಾಗಿದೆ. ನರೇಂದ್ರ ಮೋದಿಗೆ ಕಾಂಗ್ರೆಸ್ ಫೋಬಿಯಾ ಇದೆ. ನಾವು ಹೋರಾಟಕ್ಕೆ ಸಿದ್ಧರಿದ್ದೇವೆ. ಸರ್ಕಾರವು ಶ್ವೇತಪತ್ರ, ಕೆಂಪು ಪತ್ರ, ಕಪ್ಪು ಪತ್ರವನ್ನು ತರಬಹುದು, ನಮಗೆ ಯಾವುದೇ ತೊಂದರೆ ಇಲ್ಲ. ಆದರೆ ಮೆಹುಲ್ ಚೋಕ್ಸಿ ಅವರ ಪತ್ರಗಳನ್ನು ಕೂಡ ಸದನದಲ್ಲಿ ಮಂಡಿಸಬೇಕು ಎಂದು ಚೌಧರಿ ಹೇಳಿದ್ದಾರೆ.
#NarendraModi #PMofIndia #BJPindia #Congrss #UPA #NDA