Mandya ಜಿಲ್ಲೆಯ ಕೆರಗೋಡು ಗ್ರಾಮದ ಹನುಮ ಧ್ವಜ ಸ್ಥಂಭ ವಿಚಾರದಲ್ಲಿ ಹೋರಾಟದ ಕಿಚ್ಚು ಜೋರಾಗಿದೆ. ಕಳೆದ ಮೂರು ದಿನಗಳಿಂದ ನಡೆದಿರುವ ಹೋರಾಟಕ್ಕೆ ನಿನ್ನೆ JDS ಹಾಗು BJP ನಾಯಕರು ಎಂಟ್ರಿ ಕೊಟ್ಟಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಶಾಸಕ ಸಿ.ಟಿ ರವಿ, ಪ್ರೀತಂ ಗೌಡ, ಸುರೇಶ್ ಗೌಡ ಸೇರಿದಂತೆ ಸಾಕಷ್ಟು ನಾಯಕರು ಕೇಸರಿ ಶಲ್ಯ ಹೆಗಲಿಗೆ ಏರಿಸಿ ಪಾದಯಾತ್ರೆ ಸೇರಿದಂತೆ ಬೇಕಿರುವ ಎಲ್ಲಾ ಹೈಡ್ರಾಮಕ್ಕೂ ಸಾಥ್ ನೀಡಿದ್ದಾರೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಈ ರೀತಿಯ ಕೇಸರಿ ಹೋರಾಟ ರಾಜಕೀಯವಾಗಿ ಸಹಕಾರಿ ಆಗಲ್ಲ ಎನ್ನುವುದು ಬಿಜೆಪಿ – ಜೆಡಿಎಸ್ ನಾಯಕರಿಗೆ ಅರ್ಥ ಆಗಬೇಕಿತ್ತು. ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಪ್ಪು ಸುಲ್ತಾನ್ ಕೊಂದಿದ್ದು, ಒಕ್ಕಲಿಗರು. ಉರಿಗೌಡ, ನಂಜೇಗೌಡ ಎನ್ನುವ ಹೆಸರುಗಳನ್ನು ಮುಂದೆ ಬಿಟ್ಟು ರಾಜಕಾರಣ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಬಿಜೆಪಿ, ಜೆಡಿಎಸ್‌ಗೆ ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟಿದ್ದರು ಮಂಡ್ಯದ ಜನ.

ಇದೀಗ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿಚಾರದಲ್ಲಿ ರಾಜಕಾರಣ ಶುರು ಮಾಡಿದ್ದಾರೆ. ಮೊನ್ನೆ ಕೆರಗೋಡು ಗ್ರಾಮದಲ್ಲಿ ಮಧ್ಯರಾತ್ರಿ ಹನುಮನ ಧ್ವಜ ಕೆಳಗಿಳಿಸಿದ್ರಿಂದ ಊರಿನಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅನುಮತಿ ಪಡೆದಿದ್ದು ರಾಷ್ಟ್ರಧ್ವಜ ಹಾಗು ಕನ್ನಡ ಧ್ವಜಕ್ಕೆ, ಆದರೆ ಹಾರಿಸಿದ್ದು ಹನುಮ ಧ್ವಜ ಎನ್ನುವುದನ್ನು ಸರ್ಕಾರದ ಪರವಾಗಿ ಅಧಿಕಾರಿಗಳು ಅನುಮತಿ ಪತ್ರವನ್ನೂ ಬಹಿರಂಗ ಮಾಡಿದ್ದಾರೆ. ಗ್ರಾಮ ಪಂಚಾಯ್ತಿ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿರುವ ಗೌರಿಶಂಕರ ಟ್ರಸ್ಟ್, ತ್ರಿವರ್ಣ ಧ್ವಜ ಅಥವಾ ಕರ್ನಾಟಕ ಬಾವುಟ ಹಾರಿಸದೆ ಧಾರ್ಮಿಕ ಧ್ವಜ ಹಾರಿಸಿದ್ದು ಅಕ್ಷಮ್ಯ ಅಪರಾಧ. ಈ ವಿಚಾರವಾಗಿ ಕಾನೂನು ತನ್ನ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡುತ್ತದೆ. ಆದರೆ ಷರತ್ತುಗಳನ್ನ ಉಲ್ಲಂಘಿಸಿ, ಸರ್ಕಾರದ ಮೇಲೆ ಗೂಬೆ ಕೂರಿಸೋ ಪ್ರಯತ್ನ ವಿಪಕ್ಷಗಳಿಂದ ನಡೆದಿದೆ. ಇದು ರಾಜಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಕೆರಗೋಡು ರಂಗಮಂದಿರದ ಆವರಣದಲ್ಲಿ ಧ್ವಜ ಸ್ಥಂಬ ನಿರ್ಮಿಸಲು ಅವಕಾಶ ಮಾಡಿಕೊಡಬೇಕೆಂದು ಹಾಗೂ ಆ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾಗೂ ಕರ್ನಾಟಕದ ಬಾವುಟ ಹಾರಿಸಲು ಒಪ್ಪಿರುತ್ತೇವೆ ಹಾಗೂ ಗ್ರಾಮ ಪಂಚಾಯ್ತಿ ಷರತ್ತುಗಳಿಗೆ ಬದ್ಧರಾಗಿರುತ್ತೇವೆಂದು ಗೌರಿಶಂಕರ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಕೆಲ ಷರತ್ತುಗಳನ್ನ ವಿಧಿಸಿದ್ದ ಕೆರಗೋಡು ಗ್ರಾಮ ಪಂಚಾಯ್ತಿ ಅನುಮತಿ ನೀಡಿತ್ತು. ಷರತ್ತುಗಳಿಗೆ ಬದ್ಧವಾಗಿರುತ್ತೇವೆ ಎಂದು ಹೇಳಿದ್ದ ಗೌರಿಶಂಕರ ಸೇವಾ ಟ್ರಸ್ಟ್, ರಾಷ್ಟ್ರಧ್ವಜ ಅಥವಾ ಕರ್ನಾಟಕದ ಬಾವುಟದ ಜಾಗದಲ್ಲಿ ಹನುಮ ಧ್ವಜ ಹಾರಿಸಿ, ಸ್ಪಷ್ಟವಾಗಿ ಷರತ್ತು ಉಲ್ಲಂಘನೆ ಮಾಡಿದೆ. ಇಂಥಾ ಕೃತ್ಯಕ್ಕೆ ಬಿಜೆಪಿ, ಜೆಡಿಎಸ್, ಕೆಆರ್‌ಪಿಪಿಯ ಜನಾರ್ದನರೆಡ್ಡಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಬೆಂಬಲವಾಗಿ ನಿಂತಿವೆ ಎನ್ನುವುದೇ ಸೋಜಿಗ.

ಕೆರಗೋಡು ಹನುಮ ಧ್ವಜ ದಂಗಲ್ ವಿಚಾರವಾಗಿ ಕೆರಗೋಡು ಗ್ರಾಮ ಪಂಚಾಯ್ತಿ ಪಿಡಿಓ ಜೀವನ್ ಬಿ.ಎಂ ಅವರನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಹಾಗು ಸರ್ಕಾರಿ ನಿಯಮಗಳ ಉಲ್ಲಂಘನೆ ವಿಚಾರವಾಗಿ ಅಮಾನತು ಆದೇಶ ಮಾಡಿ ಮಂಡ್ಯ ಜಿಲ್ಲಾ ಪಂಚಾಯ್ತಿ ಸಿಇಒ ಶೇಕ್ ಆಸೀಫ್ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಜಾಗದಲ್ಲಿ ಸರ್ಕಾರದ ಅನುಮತಿ ಪಡೆಯದ ಧ್ವಜಸ್ತಂಭ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದು ಹಾಗು ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆ ಒಪ್ಪಿಗೆ ಪಡೆಯದೆ ಅನುಮತಿ ನೀಡಲಾಗಿದೆ. ಇನ್ನು ಈ ವಿಚಾರವನನ್ನು ಮೇಲಾಧಿಕಾರಿಗಳ ಗಮನಕ್ಕೆ ತರದೆ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅಮಾನತು ಶಿಕ್ಷೆ ವಿಧಿಸಲಾಗಿದೆ.
ರಾಜ್ಯದಲ್ಲಿ ಬರ ಆವರಿಸಿದೆ, ಸರ್ಕಾರದ ಬರ ಪರಿಹಾರ ಎಕರೆಗೆ ಕೇವಲ 2 ಸಾವಿರ ಕೊಡಲಾಗ್ತಿದೆ ಎನ್ನುವ ಕಾರಣಕ್ಕೆ ರೈತರು ಹೋರಾಟ ಮಾಡುತ್ತಿದ್ದಾರೆ. ಸರ್ಕಾರವನ್ನು ವಿರೋಧ ಪಕ್ಷಗಳು ಕಟ್ಟಿ ಹಾಕುವ ಕೆಲಸ ಮಾಡಬೇಕು ಸತ್ಯ. ಆದರೆ ಧರ್ಮ ರಾಜಕಾರಣ ಮಾಡಿಕೊಂಡು ಕೂರುವ ಬದಲು ರಾಜ್ಯ ಸರ್ಕಾರ ನೀಡುತ್ತಿರುವ 2 ಸಾವಿರ ಪರಿಹಾರ ರೈತರಿಗೆ ಸಾಲುವುದಿಲ್ಲ ಎಂದು ಹೋರಾಟ ಮಾಡಬಹುದಿತ್ತು. ಇದರಲ್ಲಿ ಅನ್ನದಾತರ ಆದ್ಯತೆ ಅಡಗಿದೆ. ಆದರೂ ಬಿಜೆಪಿ, ಜೆಡಿಎಸ್ ನಾಯಕರಿಗೆ ಆ ವಿಚಾರ ಬೇಕಿಲ್ಲ. ಒಂದು ವೇಳೆ ಬರ ಪರಿಹಾರ ವಿಚಾರದಲ್ಲಿ ಪ್ರತಿಭಟನೆ ಮಾಡಲು ಹೊರಟರೆ, ಕೇಂದ್ರ ಸರ್ಕಾರ ಬಿಡಿಗಾಸನ್ನೂ ಕೊಟ್ಟಿಲ್ಲ ಎನ್ನುವುದು ರಾಜ್ಯದ ಜನರ ಎದುರಲ್ಲಿ ಬಟಾಬಯಲಾಗುತ್ತದೆ. ಅದೇ ಕಾರಣಕ್ಕೆ ಧರ್ಮವನ್ನು ತೋರಿಸಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡ್ತಿದ್ದಾರೆ ಎನಿಸುತ್ತದೆ. ಆದರೆ ಮಂಡ್ಯದಲ್ಲಿ ಯಾವುದೇ ರಾಜಕೀಯ ಲಾಭ ಸಿಗಲ್ಲ ಅನ್ನೋದು ನಾಯಕರಿಗೆ ಮತ್ತೊಮ್ಮೆ ಅರ್ಥ ಆಗಬೇಕಿದೆ.
ಕೃಷ್ಣಮಣಿ