ಕೋಲಾರ: ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜ ವರದಿ ಸ್ವೀಕಾರ ಮಾಡುವುದು ಕೇವಲ ಲೋಕಸಭೆ ಚುನಾವಣೆಯ ಸ್ಟಂಟ್ ಆಗಿದ್ದು, ಹಿಂದುಳಿದವರಲ್ಲಿ ಬಲಾಢ್ಯರು ಮಾತ್ರ ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಅತಿ ಹಿಂದುಳಿದವರಿಗೆ ನ್ಯಾಯಕೊಡಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಕೋಲಾರದಲ್ಲಿ (Kolar) ಇಂದು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ (BJP) ವತಿಯಿಂದ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದಲ್ಲಿ ಎ.ಬಿ.ಸಿ ಎಂದು ವರ್ಗೀಕರಣ ಮಾಡಲಾಗಿದೆ. ಪ್ರವರ್ಗ ೧ರಲ್ಲಿ ಇರುವವರು ಅತ್ಯಂತ ಹಿಂದುಳಿದಿದ್ದಾರೆ. ಅವರಿಗೆ ನಿರಂತರ ಅನ್ಯಾಯವಾಗಿದೆ. ಅವರಿಗೆ ಏನೂ ಸಿಕ್ಕಿಲ್ಲ. ಬಲಿಷ್ಠ ಸಮುದಾಯದವರೇ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿದೆ ಎಂದರು.

ಕಾಂತರಾಜ ವರದಿ ಸ್ವೀಕಾರ ಮಾಡುವುದು ಲೋಕಸಭೆ ಚುನಾವಣೆಯ ಸ್ಟಂಟ್ ಆಗಿದ್ದು, ಇವರು ವರದಿ ಪಡೆಯುವಷ್ಟರಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಬರುತ್ತದೆ. ಅದರ ನೆಪ ಹೇಳಿಕೊಂಡು ಮತ್ತೆ ವರದಿಯನ್ನು ಹಾಗೇ ಇಟ್ಟುಕೊಳ್ಳುತ್ತಾರೆ ಎಂದು ಆರೋಪಿಸಿದರು.
ಇನ್ನು ರಾಷ್ಟçಪತಿ ದ್ರೌಪದಿ ಮುರ್ಮು ಅವರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಏಕ ವಚನದಲ್ಲಿ ಮಾತನಾಡಿದುರುವುದನ್ನು ಖಂಡಿಸಿದ ಅವರು, ರಾಷ್ಟಪತಿ ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಶೋಷಿತರಲ್ಲಿ ಅತ್ಯಂತ ಶೋಷಿತರಾಗಿದ್ದಾರೆ. ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡಿರುವುದು ಖಂಡನೀಯ ಎಂದರು.