ಕೇಪ್ಟೌನ್: ಅತಿಥೇಯ ಸೌತ್ ಆಫ್ರಿಕಾ ಹಾಗೂ ಪ್ರವಾಸಿ ಭಾರತ ನಡುವಿನ ಎರಡನೇ ಹಾಗೂ ಅಂತಿಮ ಇಂದಿನಿಂದ ಆರಂಭವಾಗುತ್ತಿದ್ದು, ಕೇಪ್ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡು ಸಜ್ಜಾಗಿವೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಭಾರತ ಈ ಪಂದ್ಯದಲ್ಲಿ ಬಲಿಷ್ಠ ಕಮ್ಬ್ಯಾಕ್ ಮಾಡುವ ನಿರೀಕ್ಷೆಯೊಂದಿಗೆ ಮೈದಾನಕ್ಕಿಳಿಯಲು ಸಜ್ಜಾಗಿದೆ.
ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ಸೆಂಚುರಿಯನ್ನ ಸೂಪರ್ ಸ್ಪೋರ್ಟ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ, ಇನ್ನಿಂಗ್ಸ್ ಹಾಗೂ 32 ರನ್ಗಳ ಸೋಲಿನ ಆಘಾತ ಕಂಡಿತ್ತು. ಆ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮ ನೇತೃತ್ವದ ಭಾರತ 0-1ರ ಹಿನ್ನಡೆ ಅನುಭವಿಸಿದೆ. ಹೀಗಾಗಿ ಸರಣಿಯ ಅಂತಿಮ ಪಂದ್ಯದಲ್ಲಿ ಬಲಿಷ್ಠ ಕಮ್ಬ್ಯಾಕ್ ಮಾಡುವ ನಿರೀಕ್ಷೆ ಹೊಂದಿರುವ ಭಾರತ ತಂಡ, ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಪ್ರಮುಖವಾಗಿ ತಂಡದ ಬ್ಯಾಟಿಂಗ್ ವಿಭಾಗದ ವೈಫಲ್ಯ ಮೊದಲ ಟೆಸ್ಟ್ ಸೋಲಿಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು ಸೌತ್ ಆಫ್ರಿಕಾ ತಂಡದ ಸವಾಲು ಎದುರಿಸಬೇಕಾದ ಅನಿವಾರ್ಯತೆ ಟೀಂ ಇಂಡಿಯಾಕ್ಕಿದೆ.
ಸೌತ್ ಆಫ್ರಿಕಾ ನೆಲದಲ್ಲಿ ಈವರೆಗೂ ಟೆಸ್ಟ್ ಸರಣಿಯನ್ನೇ ಗೆಲ್ಲದ ಭಾರತ, ಈ ಬಾರಿ ಪ್ರವಾಸದ ವೇಳೆ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿತ್ತು. ಆದರೆ ಮೊದಲ ಪಂದ್ಯದಲ್ಲಿನ ಸೋಲು ಟೀಂ ಇಂಡಿಯಾ ನಿರೀಕ್ಷೆಯನ್ನು ಹುಸಿಗೊಳಿಸಿತು. ಆದರೆ ಇದೀಗ 2ನೇ ಟೆಸ್ಟ್ನಲ್ಲಿ ಗೆದ್ದು ಸರಣಿ ಸಮಬಲ ಸಾಧಿಸುವ ಲೆಕ್ಕಾಚಾರ ಭಾರತ ತಂಡದ್ದಾಗಿದೆ. ನಿರೀಕ್ಷೆಯಂತೆ ಈ ಪಂದ್ಯದಲ್ಲಿ ಭಾರತ ಬಲಿಷ್ಠ ಪ್ರದರ್ಶನ ನೀಡಿ ಪಂದ್ಯವನ್ನು ಗೆದ್ದಲ್ಲಿ, ಸೌತ್ ಆಫ್ರಿಕಾ ನೆಲದಲ್ಲಿ ಎಂ.ಎಸ್. ಧೋನಿ ನಂತರದಲ್ಲಿ ಟೆಸ್ಟ್ ಸರಣಿ ಸೋಲಿನಿಂದ ಪಾರಾದ ಭಾರತ ತಂಡದ 2ನೇ ಕ್ಯಾಪ್ಟನ್ ಆಗಿ ರೋಹಿತ್ ಶರ್ಮ ಗುರುತಿಸಿಕೊಳ್ಳಲಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಭಾರತ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಪ್ರಮುಖವಾಗಿ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ರೋಹಿತ್ ಶರ್ಮ ಸೇರಿದಂತೆ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಯಾರೊಬ್ಬರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಮೊದಲ ಇನ್ನಿಂಗ್ಸ್ನಲ್ಲಿ 245 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 131 ರನ್ಗಳಿಸಿದ ಭಾರತ ಇನ್ನಿಂಗ್ಸ್ ಹಾಗೂ 32 ರನ್ಗಳ ಸೋಲು ಕಂಡಿತು. ಬ್ಯಾಟಿಂಗ್ ವಿಭಾಗದಲ್ಲಿನ ಈ ವೈಫಲ್ಯ ತಂಡಕ್ಕೆ ದೊಡ್ಡ ಹಿನ್ನಡೆ ಮೂಡಿಸಿದರೆ, ಬೌಲರ್ಗಳು ಕೂಡ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಲು ವಿಫಲವಾದರು. ಹೀಗಾಗಿ ವಿಶ್ವದ ನಂ.1 ಟೆಸ್ಟ್ ತಂಡವಾಗಿರುವ ಭಾರತ ಇಂದಿನಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ನಲ್ಲಿ ಕಮ್ಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದೆ.
ಸಂಭವನೀಯ ತಂಡಗಳು:
ಭಾರತ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಥಾಕೂರ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮುಖೇಶ್ ಕುಮಾರ್.
ಸೌತ್ ಆಫ್ರಿಕಾ: ಡೀನ್ ಎಲ್ಗರ್, ಜುಬೇರ್ ಹಮ್ಜಾ, ಟೋನಿ ಡಿ ಜೊರ್ಜಿ, ಐಡೆನ್ ಮರ್ಕ್ರಾಮ್, ಕೀಗನ್ ಪೀಟರ್ಸನ್, ಡೇವಿಡ್ ಬೆಡಿಂಗ್ಹ್ಯಾಮ್, ಕೈಲ್ ವೆರ್ರಿಯೆನ್ನೆ, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ನಾಂದ್ರೆ ಬರ್ಗರ್.
ಪಂದ್ಯದ ಸಮಯ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್






