ರಾಜ್ಯದಲ್ಲಿ ಎಮ್ಮೆ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಹಿನ್ನಲೆ ಡಿಸೆಂಬರ್ 21 ಮತ್ತು 22 ರಿಂದ ರಾಜ್ಯಾದ್ಯಂತ ಮಾರುಕಟ್ಟೆಗಳಲ್ಲಿ ನಂದಿನಿ ಎಮ್ಮೆ ಹಾಲು ಸಿಗಲಿದೆ ಎಂದು KMF ತಿಳಿಸಿದೆ.
ಎರಡು ವರ್ಷಗಳ ಹಿಂದೆ, ಕೆಎಂಎಫ್ ಸುಮಾರು 4,000-5,000 ಲೀಟರ್ ಎಮ್ಮೆ ಹಾಲನ್ನು ಮಾರಾಟ ಮಾಡುತ್ತಿತ್ತು, ಆದರೆ ಪೂರೈಕೆ ಕೊರತೆಯಿಂದಾಗಿ ಸ್ಥಗಿತಗೊಂಡಿತು. ಈಗ ಮತ್ತೆ ಆರಂಭಿಸುವ ನಿರ್ಧಾರ ಮಾಡಿದ್ದು, ಆರಂಭದಲ್ಲಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್ ತಿಳಿಸಿರುವುದಾಗಿ ನ್ಯೂ ಸಂಡೆ ಎಕ್ಸ್ಪ್ರೆಸ್ ವರದಿ ಮಾಡಿದೆ.
ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಎಮ್ಮೆಗಳಿದ್ದು, ಅಲ್ಲಿಂದಲೇ ಹಾಲು ಸಂಗ್ರಹಿಸಲಾಗುವುದು. ಮಾರುಕಟ್ಟೆ ಮತ್ತು ಬೇಡಿಕೆಗೆ ಅನುಗುಣವಾಗಿ ಸಂಗ್ರಹಣೆ ಹೆಚ್ಚಾಗಲಿದೆ ಎಂದು ಜಗದೀಶ್ ತಿಳಿಸಿದರು.
ನಂದಿನಿ ಎಮ್ಮೆ ಹಾಲಿನ ದರ ಒಂದು ಲೀಟರ್ ಗೆ ಸುಮಾರು 70-75 ರೂಪಾಯಿ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿದ್ದು ಇನ್ನೂ ಅಂತಿಮ ಬೆಲೆ ನಿರ್ಧಾರವಾಗಿಲ್ಲ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.