ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟ ಶೇಕಡಾ 400ರಷ್ಟು ಹೆಚ್ಚಳ ಆಗಿತ್ತು ಮತ್ತು ಈ ಅವಧಿಯಲ್ಲಿ 1,006 ಕೋಟಿ ರೂಪಾಯಿ ಮೊತ್ತದ ಚುನಾವಣಾ ಬಾಂಡ್ ಮಾರಾಟವಾಗಿದೆ ಎಂದು ಪ್ರಮುಖ ಇಂಗ್ಲೀಷ್ ದೈನಿಕ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಚುನಾವಣಾ ಬಾಂಡ್ ಮಾರಾಟ ಮಾಡುವ ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದಿರುವ ಮಾಹಿತಿಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದೆ.
ಡಿಸೆಂಬರ್ 3ರಂದು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು.
ಮಾಹಿತಿ ಹಕ್ಕು ಕಾಯ್ದೆಯಡಿ ಇಂಡಿಯನ್ ಎಕ್ಸ್‌ಪ್ರೆಸ್ ಪಡೆದಿರುವ ಮಾಹಿತಿ ಪ್ರಕಾರ 29ನೇ ಕಂತಿನ ಚುನಾವಣಾ ಬಾಂಡ್ ಮಾರಾಟ ಆಗಿದ್ದು ನವೆಂಬರ್ 6ರಿಂದ ನವೆಂಬರ್ 20ರವರೆಗೆ. 1,006 ಕೋಟಿ ರೂಪಾಯಿ ಮೊತ್ತದ ಬಾಂಡ್‌ಗಳಲ್ಲಿ ಶೇಕಡಾ 99ರಷ್ಟು ಬಾಂಡ್‌ಗಳ ಮೌಲ್ಯ 1 ಕೋಟಿ ರೂಪಾಯಿ ಆಗಿತ್ತು.
ಈ ಬಾಂಡ್‌ಗಳ ಪೈಕಿ ತೆಲಂಗಾಣ ರಾಜಧಾನಿ ಹೈದರ್‌ಬಾದ್‌ನಲ್ಲಿ ಅತೀ ಹೆಚ್ಚು ಅಂದರೆ 359 ಕೋಟಿ ರೂ., ಮುಂಬೈನಲ್ಲಿ 259 ಕೋಟಿ ರೂ. ಮತ್ತು ದೆಹಲಿಯಲ್ಲಿ 187 ಕೋಟಿ ರೂ., ರಾಜಸ್ಥಾನ ರಾಜಧಾನಿ ಜೈಪುರದಲ್ಲಿ 31.5 ಕೋಟಿ ರೂ., ಛತ್ತೀಸ್‌ಗಢ ರಾಜಧಾನಿ ರಾಯ್ಪುರದಲ್ಲಿ 5.75 ಕೋಟಿ ರೂ., ಮತ್ತು ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಅತೀ ಕಡಿಮೆ ಅಂದರೆ 1 ಕೋಟಿ ರೂ., ಮೊತ್ತದ ಚುನಾವಣಾ ಬಾಂಡ್ ಮಾರಾಟವಾಗಿದೆ.
ಡಿಸೆಂಬರ್ 4ರಂದು ಫಲಿತಾಂಶ ಪ್ರಕಟವಾದ ಮಿಜೋರಾಂನಲ್ಲಿ ಚುನಾವಣಾ ಬಾಂಡ್ ಮಾರಾಟವಾಗಿಲ್ಲ.