• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕ್ರೀಡೆ

ಕ್ರಿಕೆಟ್‌ ಉದ್ಯಮದ ಗೆಲುವೂ ಭಾರತ ತಂಡದ ಸೋಲೂ – ನಾ ದಿವಾಕರ ಅವರ ಬರಹ

ನಾ ದಿವಾಕರ by ನಾ ದಿವಾಕರ
November 20, 2023
in ಕ್ರೀಡೆ
0
ಕ್ರಿಕೆಟ್‌ ಉದ್ಯಮದ ಗೆಲುವೂ ಭಾರತ ತಂಡದ ಸೋಲೂ –  ನಾ ದಿವಾಕರ ಅವರ ಬರಹ
Share on WhatsAppShare on FacebookShare on Telegram


ಅನಿಶ್ಚಿತತೆಯ ಕ್ರೀಡೆ ಎಂದೇ ಹೆಸರಾಗಿರುವ ಕ್ರಿಕೆಟ್‌ನಲ್ಲಿ ಭಾರತ ಎಡವಿದ್ದರೂ ತಲೆಎತ್ತಿ ನಿಲ್ಲುತ್ತದೆ.

ADVERTISEMENT

ಐಸಿಸಿ ವಿಶ್ವಕಪ್‌ ಗೆಲ್ಲುವಲ್ಲಿ ಭಾರತ ಮತ್ತೊಮ್ಮೆ ಎಡವಿದೆ. ಗೆಲುವಿನ ಹೊಸ್ತಿಲಲ್ಲಿ ಎಡವುವುದು ಯಾವುದೇ ಕ್ರೀಡೆಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾದ ವಿದ್ಯಮಾನ. ಅತಿಯಾದ ಆತ್ಮವಿಶ್ವಾಸ, ತೀವ್ರ ಮಾನಸಿಕ ಒತ್ತಡ ಹಾಗೂ ಕೆಲವೊಮ್ಮೆ ಅಂತಿಮ ಕ್ಷಣದಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳು ಆಟಗಾರರ ಮೇಲಿನ ಒತ್ತಡವನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತದೆ. ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಉಳಿದೆಲ್ಲಾ ತಂಡಗಳಿಗಿಂತಲೂ ಅತ್ಯುತ್ತಮವಾದ ಆಲ್‌ರೌಂಡ್‌ ಸಾಮರ್ಥ್ಯವನ್ನು ಪ್ರದರ್ಶಿಸಿದ ರೋಹಿತ್‌ ಶರ್ಮ ನಾಯಕತ್ವದ ಭಾರತ ತಂಡಕ್ಕೆ ಸ್ವದೇಶಿ ನೆಲದಿಂದ ಉದ್ಭವಿಸುವ ಒತ್ತಡಗಳೂ ಸಹ ಹೆಚ್ಚಾಗಿಯೇ ಇತ್ತು. ಮಾಧ್ಯಮ ಪರಿಭಾಷೆಯಂತೆ ಭಾರತದ 140 ಕೋಟಿ ಜನರ ಆಶಯ ರೋಹಿತ್‌ ಪಡೆಯ ಹಿಂದಿತ್ತು ಎನ್ನುವುದು ಅತಿರೇಕದ ಉನ್ಮಾದವಷ್ಟೇ. ಆದರೆ ಕ್ರಿಕೆಟ್‌ ಒಂದು ಜನಪ್ರಿಯ ಕ್ರೀಡೆಯಾಗಿ ಭಾರತದ ತಳಮಟ್ಟದ ಸಮಾಜವನ್ನೂ ತಲುಪಿದ್ದು ಹೆಚ್ಚು ಜನರ ಅಪೇಕ್ಷೆ ಭಾರತ ಕಪ್‌ ಗೆಲ್ಲುವುದಾಗಿತ್ತು.

ಫಲಿತಾಂಶದ ನಂತರ ಡ್ರಾಯಿಂಗ್‌ ರೂಮ್‌ಗಳಲ್ಲಿ, ಟಿವಿ ಸ್ಟುಡಿಯೋಗಳಲ್ಲಿ ನಡೆಯುವ ಪೋಸ್ಟ್‌ ಮಾರ್ಟಮ್‌ನಲ್ಲಿ ಸಹಜವಾಗಿ ರೋಹಿತ್‌ ಪಡೆಯನ್ನು ಅಡ್ಡಡ್ಡಲಾಗಿ ಸೀಳಿ ವೈಫಲ್ಯದ ಕಾರಣಗಳನ್ನು ತಿಳಿದುಕೊಳ್ಳುವ ಪ್ರಯತ್ನಗಳು ನಡೆಯುತ್ತವೆ. ಒಂದು ಉದ್ಯಮ ಕೇಂದ್ರಿತ ಕ್ರೀಡೆಯಾಗಿ ರೂಪುಗೊಂಡಿರುವ ಆಧುನಿಕ ಕ್ರಿಕೆಟ್‌ ಬಗ್ಗೆ ಕ್ರಿಕೆಟ್‌ ಬಲ್ಲವರಿಗಿಂತಲೂ, ಕ್ರೀಡೆಯ ಗಂಧಗಾಳಿ ತಿಳಿಯದವರೇ ಹೆಚ್ಚಿನ ಚರ್ಚೆಗಳಲ್ಲಿ ತೊಡಗುವುದರಿಂದ, ಒಂದು ಪಂದ್ಯದ ಸೋಲು ಗೆಲುವಿನ ಹಿಂದೆ ಅಡಗಿರಬಹುದಾದ ಸೂಕ್ಷ್ಮಗಳಾಗಲೀ, ನೈಜ ಕಾರಣಗಳಾಗಲೀ ಮುನ್ನೆಲೆಗೆ ಬರುವುದಿಲ್ಲ. ಕೆಲವೇ ತಜ್ಞರು ಈ ಬಗ್ಗೆ ವಸ್ಥುನಿಷ್ಠವಾಗಿ ವಿಷಯ ಮಂಡನೆ ಮಾಡಲು ಸಾಧ್ಯ. ಆದರೂ ಭಾರತ ತಂಡದ ಸೋಲನ್ನು ಪರಾಮರ್ಶಿಸುವಾಗಿ, ರೋಹಿತ್‌ ಪಡೆ ಸೋತಿರುವುದು, ನಿರ್ಣಾಯಕ ದಿನದಂದು ಉತ್ತಮ ಪ್ರದರ್ಶನ ತೋರಿದ, ವೃತ್ತಿಪರ ಕ್ರಿಕೆಟ್‌ ಆಡಿದ ಒಂದು ಉತ್ತಮ ತಂಡಕ್ಕೆ ಎನ್ನುವುದು ನಿರ್ವಿವಾದ.

ಅಂತಿಮ ಕ್ಷಣದ ಪಲ್ಲಟಗಳು

ಸಾಮಾನ್ಯವಾಗಿ ಫಲಿತಾಂಶದ ನಂತರದಲ್ಲಿ ಮಾಡಲಾಗುವ ವಿಶ್ಲೇಷಣೆಗಳಲ್ಲಿ “ ಹೀಗೆ ಮಾಡಬಾರದಿತ್ತು ಅಥವಾ ಹೀಗೆ ಮಾಡಬಹುದಿತ್ತು ” ಎಂಬ ಅಭಿಪ್ರಾಯಗಳನ್ನು ಹೊರತುಪಡಿಸಿ ಹೆಚ್ಚಿನ ಸೂಕ್ಷ್ಮಗಳನ್ನು ಚರ್ಚಿಸಲಾಗುವುದಿಲ್ಲ. ಸೋತ ಭಾರತ ತಂಡದ ಬಗ್ಗೆಯೂ ಇದೇ ಮಾತುಗಳು ಸಹಜ. ಹೊಸ ಚೆಂಡಿನೊಂದಿಗೆ ಅತ್ಯುತ್ತಮ ಸ್ವಿಂಗ್‌ ಬೌಲಿಂಗ್‌ ಮಾಡುವ ಸಿರಾಜ್‌ಗೆ ತಡವಾಗಿ ಅವಕಾಶ ನೀಡಿದ್ದು, ಸತತ ವಿಫಲವಾಗುದ್ದ ಸೂರ್ಯಕುಮಾರ್‌ ಯಾದವ್‌ ಸ್ಥಾನದಲ್ಲಿ ಇಶಾನ್‌ ಕಿಷನ್‌ಗೆ ಅವಕಾಶ ನೀಡದಿದ್ದುದು, ಎಲ್ಲೋ ಒಂದು ಕಡೆ ಅಶ್ವಿನ್‌ ಅವರಿಗೆ ಅವಕಾಶ ನೀಡದಿದ್ದುದು ಮಹಾಪ್ರಮಾದವಾಗಿಯೇ ಕಾಣಬಹುದು. ಮತ್ತೊಂದೆಡೆ ರೋಹಿತ್‌ ಶರ್ಮ ಅವಸರದಿಂದ ನಿರ್ಗಮಿಸಿದ್ದು, ಮಧ್ಯಮ ವರ್ಗದ ಬ್ಯಾಟರ್‌ಗಳು ವಿಫಲವಾಗಿದ್ದು ಸಹ ಸಕಾರಣವಾಗಿ ಕಾಣಬಹುದು.

ಆದರೆ ಭಾರತದ ಸೋಲಿಗೆ ನಮ್ಮ ಆಟಗಾರರ ಕಳಪೆ ಪ್ರದರ್ಶನವೊಂದೇ ಕಾರಣ ಎನ್ನುವುದು ಅರ್ಧಸತ್ಯ. ಏಕೆಂದರೆ ಮತ್ತೊಂದು ಬದಿಯಲ್ಲಿ ಆಸ್ಟ್ರೇಲಿಯಾದ ಶ್ರೇಷ್ಠ ಗುಣಮಟ್ಟದ ಕ್ಷೇತ್ರ ರಕ್ಷಣೆ, ಬೌಂಡರಿ-ಸಿಕ್ಸರ್‌ಗೆ ಅವಕಾಶ ನೀಡದಂತೆ ಮಾಡಿದ ಕರಾರುವಾಕ್‌ ಬೌಲಿಂಗ್‌ ಹಾಗೂ ಸಣ್ಣ ಮೊತ್ತವನ್ನು ಬೆನ್ನತ್ತಿದರೂ ಟ್ರೆವಿಸ್‌ ಹೆಡ್‌ ಮತ್ತು ಲಬುಷೇನ್‌ ಅವರ ವೃತ್ತಿಪರ ಧೋರಣೆಯ ಬ್ಯಾಟಿಂಗ್‌ ಸಹ ಭಾರತದ ಸೋಲಿಗೆ ಕಾರಣ. ಆಸ್ಟ್ರೇಲಿಯಾದ ಬೌಲರ್‌ಗಳು ರನ್‌ ಗಳಿಸಲು ಅವಕಾಶ ಕಲ್ಪಿಸುವ ಷಾರ್ಟ್‌ಪಿಚ್‌, ಓವರ್‌ಪಿಚ್‌, ಷಾರ್ಟ್‌ ಆಫ್‌ ಲೆಂಗ್ತ್‌ ಬೌಲಿಂಗ್‌ ಮಾಡದಿರುವುದು ಭಾರತದ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದು ವಾಸ್ತವ. ಇದಕ್ಕೆ ಪ್ರತಿಯಾಗಿ ಭಾರತದ ಬೌಲರ್‌ಗಳು ಇದೇ ಮಾದರಿ ಅನುಸರಿಸಲಿಲ್ಲ. ಮೇಲಾಗಿ ಆರಂಭದಲ್ಲಿ ನಿರೀಕ್ಷಿಸಿದ್ದಂತೆ ಸಮಯ ಕಳೆದಂತೆ ಸಂಜೆಯ ಮಂಜು ದಟ್ಟವಾಗುತ್ತದೆ, ಪಿಚ್‌ನಲ್ಲಿ ಸ್ಪಿನ್‌ ಬೌಲರ್‌ಗಳಿಗೆ ತಿರುವು, ವೇಗದ ಬೌಲರ್‌ಗಳಿಗೆ ಸ್ವಿಂಗ್‌ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಗಳು ಹುಸಿಯಾದವು. ಇದು ಪ್ರಕೃತಿ ವೈಪರೀತ್ಯ.

ಆಸ್ಟ್ರೇಲಿಯಾದ ಆಟಗಾರರು ಸಮಯೋಚಿತವಾಗಿ ಆಡಿದ್ದೇ ಅಲ್ಲದೆ, ಭಾರತದ ಆಟಗಾರರ ನ್ಯೂನ್ಯತೆಗಳನ್ನು ಪೂರ್ವಭಾವಿಯಾಗಿ ಗ್ರಹಿಸಿದ್ದರು ಎನ್ನುವುದು ಫಲಿತಾಂಶದಿಂದ ತಿಳಿಯುತ್ತದೆ. ಇಡೀ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕುಲದೀಪ್‌ ಯಾದವ್‌ ಅವರು ಚೆಂಡನ್ನು ಟರ್ನ್‌ ಮಾಡುವುದರಲ್ಲಿ ಸೋತಿದ್ದು, ರವೀಂದ್ರ ಜಡೇಜಾ ಬ್ಯಾಟರ್‌ಗಳನ್ನು ಕಟ್ಟಿಹಾಕಲು ವಿಫಲವಾಗಿದ್ದು, ಸಿರಾಜ್‌ ತಮ್ಮ ಸ್ವಿಂಗ್‌ ಚಳಕವನ್ನು ತೋರಲು ವಿಫಲವಾಗಿದ್ದು ಪ್ರಮುಖ ವೈಫಲ್ಯಗಳಾಗಿ ಕಾಣುತ್ತವೆ. ಹಾಗೆಯೇ ಆಸ್ಟ್ರೇಲಿಯಾದ ಶ್ರೇಷ್ಠ ಕ್ಷೇತ್ರ ರಕ್ಷಣೆ ಮತ್ತು ಬೌಲಿಂಗ್‌ ಹೊರತಾಗಿಯೂ ಮೊದಲ ವಿಶ್ವಕಪ್‌ ಆಡುತ್ತಿರುವ ಶುಭಮನ್‌ ಗಿಲ್‌, ಶ್ರೇಯಸ್‌ ಐಯ್ಯರ್‌, ಸೂರ್ಯಕುಮಾರ್‌ ಯಾದವ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡದೆ ಹೋಗಿದ್ದೂ ಸಹ ಸೋಲಿಗೆ ಕಾರಣವಾಗಿದೆ. ಪ್ರತಿಯೊಂದು ಸೋಲು ಭವಿಷ್ಯದ ಗೆಲುವಿನ ಮೆಟ್ಟಿಲು ಎನ್ನುವ ಪಾರಂಪರಿಕ ಗ್ರಹಿಕೆಯೊಂದಿಗೆ ಭಾರತದ ಕ್ರಿಕೆಟ್‌ ತಂಡ ತನ್ನ ಮುಂದಿನ ಗುರಿಯತ್ತ ಸಾಗಬೇಕಿದೆ.

ಭಾರತ ತಂಡದ ಸೋಲು ಭಾರತದ ʼ ಕ್ರಿಕೆಟ್‌ ಪ್ರಿಯರಿಗೆ ʼ ಮತ್ತೊಂದು ಪಾಠವನ್ನೂ ಕಲಿಸಬೇಕಿದೆ. ಕ್ರಿಕೆಟ್‌ ಒಂದು ಅನಿಶ್ಚಿತ ಕ್ರೀಡೆ ಎಂದು ಏಕೆ ಹೇಳಲಾಗುತ್ತದೆ ? ಏಕೆಂದರೆ ತಂಡಗಳು, ಆಟಗಾರರು ಎಷ್ಟೇ ಬಲಿಷ್ಟವಾಗಿದ್ದರೂ, ದಾಖಲೆಶೂರರ ಗುಂಪೇ ಆಗಿದ್ದರೂ, ಅಂತಿಮವಾಗಿ ಒಂದು ಪಂದ್ಯದಲ್ಲಿ ನಿರ್ಣಾಯಕವಾಗುವುದು 22 ಯಾರ್ಡ್‌ ಉದ್ದದ “ ಆಟ ಆಡುವ ಪಿಚ್‌ ”. ಆ ದಿನದ ಹವಾಮಾನ ಹಾಗೂ ವಾತಾವರಣದಿಂದಲೂ ಪ್ರಭಾವಿತವಾಗುವ ಈ ಪಿಚ್‌ ಹೇಗೆ ವರ್ತಿಸುತ್ತದೆ ಎನ್ನುವುದರ ಮೇಲೆ ಪಂದ್ಯಗಳ ಫಲಿತಾಂಶವೂ ನಿರ್ಧಾರವಾಗುತ್ತದೆ. Exploiting the prevailing conditions and the pitch ಎಂಬ ಮಾತುಗಳನ್ನು ಸಾಮಾನ್ಯವಾಗಿ ವೀಕ್ಷಕ ವಿವರಣೆ ನೀಡುವವರು ಹೇಳುತ್ತಿರುತ್ತಾರೆ. ಅಂದರೆ ಪಿಚ್‌ ಬದಲಿಸಲಾಗದಿದ್ದರೂ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಯಾವುದೇ ತಂಡದ ಆಂತರಿಕ ಸಾಮರ್ಥ್ಯ ಮತ್ತು ವೃತ್ತಿಪರತೆಯನ್ನು ತೋರುತ್ತದೆ. ಆಸ್ಟ್ರೇಲಿಯಾ ಇಲ್ಲಿ ಗೆದ್ದಿದೆ.

ಅಭಿಮಾನದ ಅತಿರೇಕ ಮತ್ತು ಮಾರುಕಟ್ಟೆ

ಆದರೆ ಭಾರತದಲ್ಲಿ ಕ್ರಿಕೆಟ್‌ ಎನ್ನುವುದು ಒಂದು ರಾಷ್ಟ್ರೀಯತೆಯ ಸಂಕೇತವಾಗಿ, ದೇಶಾಭಿಮಾನದ ಸೂಚಕವಾಗಿ, ಅಧಿಕಾರ ರಾಜಕಾರಣದ ಮೇಲರಿಮೆಯಾಗಿ ಔದ್ಯಮಿಕ ಸ್ವರೂಪ ಪಡೆದಿರುವುದರಿಂದ ದೇಶಾದ್ಯಂತ “ ಕ್ರಿಕೆಟ್‌ ಅಭಿಮಾನಿ ವೃಂದ ” ಹಾಗೂ ದೃಶ್ಯ ಮಾಧ್ಯಮಗಳು ಭಾರತದ ಗೆಲುವಿಗೆ ಹಲವು ಬಣ್ಣಗಳ ರೆಕ್ಕೆಪುಕ್ಕಗಳನ್ನು ತೊಡಿಸಿಬಿಡುತ್ತವೆ. ಭಾರತದ ಗೆಲುವಿನ ಶ್ರೇಯವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಿಸುವ ಉನ್ಮತ್ತರು ಒಂದೆಡೆಯಾದರೆ, ಆಸಕ್ತಿಯಿಂದ ಪಂದ್ಯ ವೀಕ್ಷಿಸಲು ಬಂದ ಪ್ರಧಾನಿ, ಗೃಹಮಂತ್ರಿ ಮತ್ತಿತರರ ಉಪಸ್ಥಿತಿಯೇ ಸೋಲಿಗೆ ಕಾರಣ ಎನ್ನುವ ಪ್ರತಿ-ಉನ್ಮತ್ತರು ಒಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಭಾವಾತಿರೇಕದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದು ಇದನ್ನೇ ಸೂಚಿಸುತ್ತದೆ. ಪಂದ್ಯದ ಸೋಲು ಗೆಲುವು ನಿರ್ಧಾರವಾಗುವುದು ಪ್ರೇಕ್ಷಕರ ಗ್ಯಾಲರಿಯಿಂದಲ್ಲ ಅಥವಾ ರಾಜಕೀಯ ನಾಯಕರ ಕೃಪೆಯಿಂದಲ್ಲ ಎನ್ನುವ ಕನಿಷ್ಠ ಪ್ರಜ್ಞೆಯನ್ನೂ ಕಳೆದುಕೊಂಡ ಸಂದೇಶ ಶೂರರು ರಾತ್ರೋರಾತ್ರಿ ತಜ್ಞ ವಿಶ್ಲೇಷಕರೂ ಆಗಿಬಿಡುವುದು ಈ ಕಾಲದ ದುರಂತ.

ಏನೇ ಆದರೂ ಒಂದು ಉದ್ಯಮವಾಗಿ ರೂಪುಗೊಂಡಿರುವ ಕ್ರಿಕೆಟ್‌ ಬಿಸಿಸಿಐ ಸಂಸ್ಥೆಯನ್ನು ಮತ್ತು ಭಾರತದ ಔದ್ಯಮಿಕ ಮಾರುಕಟ್ಟೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲು ಈ ವಿಶ್ವಕಪ್‌ ನೆರವಾಗಿರುವುದು ವಾಸ್ತವ. ಗುಜರಾತ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ತುಂಬಿದ್ದ 1 ಲಕ್ಷ 30 ಸಾವಿರ ಜನರು ಕ್ರಿಕೆಟಿಗರ ದೃಷ್ಟಿಯಲ್ಲಿ ಕ್ರೀಡಾಭಿಮಾನಿಗಳಾಗಿ ಕಂಡರೆ, ಬಿಸಿಸಿಐ ದೃಷ್ಟಿಯಲ್ಲಿ ಕೇವಲ ಗ್ರಾಹಕರಾಗಿ ಮಾತ್ರವೇ ಕಾಣುತ್ತಾರೆ. ಅಷ್ಟೂ ಜನರು ಧರಿಸಿದ್ದ ನೀಲಿ ಧಿರಿಸು, ಕನಿಷ್ಠ 50 ಪ್ರತಿಶತ ಜನರ ಕೈಯ್ಯಲ್ಲಿ ಹಾರಾಡುತ್ತಿದ್ದ ಭಾರತದ ತ್ರಿವರ್ಣ ಧ್ವಜ, ಲಕ್ಷಾಂತರ ಜನರು ಖರೀದಿಸಿದ ಟಿಕೆಟ್‌ ಹಣ̤. ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸುವ “ಕ್ರೀಡಾಭಿಮಾನಿಗಳು” ಕನಿಷ್ಠ 32,000 ರೂಗಳಿಂದ ಗರಿಷ್ಠ 1,87,000ರೂಗಳವರೆಗೂ ಟಿಕೆಟ್‌ ಖರೀದಿಸಿದ್ದಾರೆ. ಅಹಮದಾಬಾದ್‌ಗೆ ಹೋಗುವ ವಿಮಾನಗಳ ಪ್ರಯಾಣ ದರಗಳೂ ಕಳೆದ ಒಂದು ವಾರದಲ್ಲಿ ಹತ್ತು ಪಟ್ಟು ಹೆಚ್ಚಾಗಿವೆ. ಅಹಮದಾಬಾದ್‌ನ ಹೋಟೆಲ್‌ಗಳ ದರವೂ ಹೆಚ್ಚಾಗಿದ್ದು ಗರಿಷ್ಠ 2 ಲಕ್ಷ ರೂ ತಲುಪಿದ್ದವು. ಇವೆಲ್ಲವೂ ಮಾರುಕಟ್ಟೆಯನ್ನು ಪೋಷಿಸುವ ಗ್ರಾಹಕ ಸಾಧನಗಳಲ್ಲವೇ ?

ಒಂದು ಬಂಡವಾಳಶಾಹಿ ಔದ್ಯಮಿಕ ಸಂಸ್ಥೆಯಾಗಿ ಬಿಸಿಸಿಐ ದೃಷ್ಟಿಯಲ್ಲಿ ಈ ಮಾರುಕಟ್ಟೆ ವಹಿವಾಟು ಹಾಗೂ ಸಾಂಸ್ಥಿಕ ಆದಾಯವೇ ಮುಖ್ಯವಾಗುತ್ತದೆ. ಈ ಆದಾಯ ಹೆಚ್ಚಿಸುವ ಉದ್ದೇಶದಿಂದಲೂ ದೇಶಾದ್ಯಂತ ದೃಶ್ಯ ಮಾಧ್ಯಮಗಳ ಮೂಲಕ, ಕಾರ್ಪೋರೇಟ್‌ ಮಾರುಕಟ್ಟೆ ಉದ್ಯಮಗಳ ಜಾಹೀರಾತುಗಳ ಮೂಲಕ, ಬ್ರ್ಯಾಂಡ್‌ ರಾಯಭಾರಿಗಳ ಮೂಲಕ ಪ್ರಚಾರವನ್ನು ಹಿಗ್ಗಿಸಲಾಗುತ್ತದೆ. ಸಾಧಾರಣ ಉಪ್ಪಿನಿಂದ ಅತ್ಯಾಧುನಿಕ ಮೊಬೈಲ್‌ವರೆಗೂ ಜಾಹೀರಾತುಗಳನ್ನು ಗಮನಿಸುವಾಗ ಪ್ರತಿಯೊಂದು ಪದಾರ್ಥವನ್ನೂ ಕ್ರಿಕೆಟ್‌ನೊಂದಿಗೆ ಬೆಸೆಯುವ ಮಾರುಕಟ್ಟೆ ತಂತ್ರಗಾರಿಕೆ ಕಂಡುಬರುತ್ತದೆ. ಈ ಔದ್ಯಮಿಕ ಹಿತಾಸಕ್ತಿಯ ಹಿಂದೆ ಅಡಗಿರುವ ಲಾಭದಾಹ ಮತ್ತು ಮಾರುಕಟ್ಟೆಯ ನಿರೀಕ್ಷೆಗಳ ನಡುವೆ ಕ್ರಿಕೆಟ್‌ ಕೇವಲ ಒಂದು ನೆಪಮಾತ್ರದ ವಾಹಕಶಕ್ತಿಯಾಗಿ ಪರಿಣಮಿಸುತ್ತದೆ. ಐಸಿಸಿ ವಿಶ್ವಕಪ್‌ ಪಂದ್ಯಾವಳಿಯಿಂದ ಬಿಸಿಸಿಐ 22 ಸಾವಿರ ಕೋಟಿ ರೂ ಆದಾಯ ಗಳಿಸಿರುವುದು ಮಾರುಕಟ್ಟೆಯ ದೈತ್ಯಶಕ್ತಿಯ ಒಂದು ನಿದರ್ಶನ.

ಕ್ರೀಡೆ ಮೌಢ್ಯ ಮತ್ತು ಬಂಡವಾಳ

ಈ ಮಾರುಕಟ್ಟೆ ಲೆಕ್ಕಾಚಾರಗಳ ನಡುವೆಯೇ ಪ್ರಜ್ಞಾವಂತ ಸಮಾಜ ಗಮನಿಸಬೇಕಾದ ಅಂಶವೆಂದರೆ ಕ್ರಿಕೆಟ್‌ ಎಂಬ ಕ್ರೀಡೆಯನ್ನು ಬೆಂಬತ್ತಿರುವ ಮೌಢ್ಯಾಚರಣೆಯ ಪರಂಪರೆ. ದೇಶಾದ್ಯಂತ ಭಾರತದ ಗೆಲುವಿಗಾಗಿ ನಡೆದ ಪೂಜೆ, ಪುನಸ್ಕಾರ, ಯಜ್ಞ, ಹೋಮ , ವಿಶೇಷ ಪೂಜೆಗಳು ಇದನ್ನೇ ಸೂಚಿಸುತ್ತವೆ. ದೇಶದಲ್ಲಿ ಮೌಢ್ಯ ಪ್ರಸರಣದ ಪೇಟೆಂಟ್ ಪಡೆದಿರುವ ಜ್ಯೋತಿಷಿಗಳೂ ಸಹ ಈ ನಿಟ್ಟಿನಲ್ಲಿ ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ಇವುಗಳಿಂದಲೇ ವಿಶ್ವಕಪ್‌ ಗೆಲ್ಲುವುದಾಗಿದ್ದರೆ ರೋಹಿತ್‌ ಪಡೆಯೇ ಬೇಕಿರಲಿಲ್ಲ ಅಲ್ಲವೇ ? ಆದರೂ ಇದು ಜನಾಕರ್ಷಣೆ ಪಡೆಯುತ್ತವೆ. ಮತ್ತೊಂದೆಡೆ “ಬಾಡು ತಿಂದು ಗಟ್ಟಿಮುಟ್ಟಾಗಿರೋ ಮೂಲನಿವಾಸಿಗಳು ಇದ್ದಿದ್ರೆ ಕ್ರಿಕೆಟ್‌ ಸೋಲು ಅನ್ನೊ ಮಾತೇ ಇರ್ತಾ ಇರ್ಲಿಲ್ಲ” ಎಂಬ ಮತ್ತೊಂದು ರೀತಿಯ ಸಾಂಸ್ಕೃತಿಕ ಮೌಢ್ಯವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಬಹುದು.

ದೈಹಿಕವಾಗಿ ಬಲಿಷ್ಠರೆಂದೇ ಹೆಸರಾದ ವೆಸ್ಟ್‌ ಇಂಡೀಸ್‌ ಪಡೆ ಈ ಬಾರಿ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸಿರುವುದನ್ನು ಇಲ್ಲಿ ಗಮನಿಸಬೇಕಲ್ಲವೇ ? ಹಾಗೆಯೇ 1976ರ ಪೋರ್ಟ್‌ ಆಫ್‌ ಸ್ಪೇನ್‌ ಟೆಸ್ಟ್‌ನಲ್ಲಿ ವೆಸ್ಟ್‌ ಇಂಡೀಸ್‌ನ ದೈತ್ಯಪಡೆಯನ್ನು ಸೋಲಿಸಲು ನಾಲ್ಕನೆ ಇನ್ನಿಂಗ್ಸ್‌ನಲ್ಲಿ 400 ರನ್‌ ಗಳಿಸಿ ದಾಖಲೆ ಸ್ಥಾಪಿಸಿದ ಅಂದಿನ ಭಾರತ ತಂಡದಲ್ಲಿ ಪುಳಿಚಾರು-ಬಾಡುಗಳನ್ನು ಶೋಧಿಸಲು ಸಾಧ್ಯವೇ ? ಅಥವಾ ಬಾಡು ನಿತ್ಯಾಹಾರವಾಗಿರುವ ಪಾಕಿಸ್ತಾನ ತಂಡದ ವೈಫಲ್ಯವನ್ನು ಹೇಗೆ ಅರ್ಥೈಸಬಹುದು ? ಒಂದು ಕ್ರೀಡೆಯನ್ನು ಅತಿಯಾಗಿ ಸಾಂಸ್ಕೃತಿಕ ಬದುಕಿನೊಂದಿಗೆ ಸಮೀಕರಿಸುತ್ತಾ ಹೋದಂತೆಲ್ಲಾ ಈ ವಿಕೃತಿಗಳು ಹೊರಬರುತ್ತಾ ಹೋಗುತ್ತವೆ. ಈ ವಿಕೃತಿಗೆ ಪೂರಕವಾಗಿಯೇ ಆಟಗಾರರನ್ನು ಕ್ರೀಡಾಪಟುವಾಗಿ ನೋಡದೆ, ಧರ್ಮ, ಜಾತಿ, ಪ್ರಾದೇಶಿಕ ಅಸ್ಮಿತೆಗಳ ಮಸೂರ ತೊಟ್ಟು ನೋಡುವ ಮಹಾ ವಿಕೃತಿಯೂ ಸೃಷ್ಟಿಯಾಗುತ್ತದೆ. ಹಾಗಾಗಿಯೇ ಭಾರತದ ಮೇರು ಸಾಧನೆಗೆ ಕಾರಣವಾಗುವ ಶಮ್ಮಿ-ಸಿರಾಜ್‌ ಕೆಲವರ ಕಣ್ಣಿಗೆ ಮುಸಲ್ಮಾನರಾಗಿ ಕಾಣುತ್ತಾರೆ.

ಕ್ರಿಕೆಟ್‌ ಒಂದು ಜನಪ್ರಿಯ ಕ್ರೀಡೆಯಾಗಿ ತನ್ನದೇ ಆದ ಪ್ರತ್ಯೇಕ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡಿದೆ. ಈ ಸಾಮ್ರಾಜ್ಯವನ್ನು ಆಕ್ರಮಿಸುವ ಮೂಲಕ ಬಂಡವಾಳಶಾಹಿಯು ತನ್ನ ಔದ್ಯಮಿಕ ಮಾರುಕಟ್ಟೆಯ ಮೂಲಕ ಅಲ್ಲಿ ಅಡಿಪಾಯ ನಿರ್ಮಿಸುತ್ತಿದೆ. ಬಿಸಿಸಿಐ ಈ ಅಡಿಪಾಯದ ಮೇಲೆ ನಿರ್ಮಿಸಲಾಗುತ್ತಿರುವ ಸಾಂಸ್ಥಿಕ ಕ್ರೀಡಾ ಸಂಸ್ಥೆ. ಮಾರುಕಟ್ಟೆ ಪ್ರಜ್ಞೆಯೇ ಪ್ರಧಾನವಾದಾಗ ಕೆಲವೊಮ್ಮೆ ಸಾಂಸ್ಥಿಕ ಜವಾಬ್ದಾರಿ ಮತ್ತು ನೈತಿಕತೆಯೂ ಹಿಂಬದಿಗೆ ಸರಿದುಬಿಡುತ್ತದೆ. ಇದಕ್ಕೆ ಸಾಕ್ಷಿ ಫೈನಲ್‌ ಪಂದ್ಯಕ್ಕೆ ಕಪಿಲ್‌ ದೇವ್‌ ಅವರನ್ನು ಆಹ್ವಾನಿಸದೆ ಇರುವುದು. ಭಾರತದ ಕ್ರಿಕೆಟ್‌ಗೆ ತಳಮಟ್ಟದ ಸ್ಪರ್ಶ ನೀಡುವ ಮೂಲಕ, ಭಾರತವೂ ವಿಶ್ವದ ಕ್ರೀಡಾ ಭೂಪಟದಲ್ಲಿ ತನ್ನ ಅಸ್ಮಿತೆಯನ್ನು ಸ್ಥಾಪಿಸಬಹುದು ಎಂದು ನಿರೂಪಿಸಲು ಪ್ರಥಮ ಇಟ್ಟಿಗೆಯನ್ನು ಜೋಡಿಸಿದ ಕಪಿಲ್‌ ದೇವ್‌ ಅಲಕ್ಷಿತರಾಗಿದ್ದಾದರೂ ಹೇಗೆ ? ಇದು ಬಿಸಿಸಿಐ ಸಾಗುತ್ತಿರುವ ವಾಣಿಜ್ಯ ಪಥದ ಒಂದು ಸೂಚಕವಾಗಿ ಕಾಣುತ್ತದೆ.

ವಿಶ್ವಕಪ್‌ ಅಂತಿಮ ಪಂದ್ಯದಲ್ಲಿ ಎಡವಿ ಸೋತ ಭಾರತದ ತಂಡ ಇಂತಹ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕ್ರೀಡಾಪಟುಗಳ ಒಂದು ಕೂಟ. ಈ ತಂಡದ ಆಟಗಾರರ ಅವಿರತ ಪರಿಶ್ರಮ, ಕೌಶಲ, ಸಾಮರ್ಥ್ಯ ಮತ್ತು ಪ್ರತಿಭೆ ನಮ್ಮ ಕ್ರೀಡಾಭಿಮಾನದ ಆವರಣದಲ್ಲಿ ಆದ್ಯತೆ ಪಡೆಯಬೇಕಿದೆ. ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅತಿ ಶ್ರೇಷ್ಠ ಪ್ರದರ್ಶನ ನೀಡಿದ ಒಂದು ಚಾಂಪಿಯನ್‌ ತಂಡವಾಗಿ ರೋಹಿತ್‌ ಪಡೆ ಹೊರಹೊಮ್ಮಿದೆ. ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳನ್ನು ಕ್ರಿಕೆಟ್‌ ಲೋಕಕ್ಕೆ ಈ ವಿಶ್ವಕಪ್‌ ನೀಡಿದೆ. ವಿರಾಟ್‌ ಕೊಹ್ಲಿ ಈ ಸಾಲಿನಲ್ಲಿ ಅಗ್ರಶ್ರೇಣಿಯಲ್ಲಿ ಕಾಣುತ್ತಾರೆ. ಸೋಲು-ಗೆಲುವು ಯಾವುದೇ ಕ್ರೀಡೆಯ ಅಂಶಿಕ ಭಾಗ, ಅಲ್ಲಿ ಭಾವನೆಗಳು ಸಹಜಾಭಿವ್ಯಕ್ತಿಯಾದರೂ ಭಾವಾತಿರೇಕ-ಭಾವಾವೇಷಕ್ಕೆ ಅವಕಾಶ ನೀಡಕೂಡದು. ಆದರೆ ಮಾರುಕಟ್ಟೆ ಹಿತಾಸಕ್ತಿಗಳು ಈ ಭಾವಾತಿರೇಕವನ್ನು ಉನ್ಮಾದದ ಹಂತಕ್ಕೆ ಕೊಂಡೊಯ್ಯುವ ಮೂಲಕ, ಕ್ರಿಕೆಟ್‌ ಎಂಬ ಜೆಂಟಲ್‌ಮನ್‌ ಕ್ರೀಡೆಯನ್ನು ಮನರಂಜನೆಯ ಸಾಧನ್ನವನಾಗಿ ಮಾಡಿಬಿಟ್ಟಿವೆ .

ಕ್ರಿಕೆಟ್‌ ಆಸ್ವಾದಿಸುವ ಮನಸುಗಳಿಗೆ ಇದಾವುದೂ ಮುಖ್ಯವಾಗುವುದಿಲ್ಲ. ಅಂತಿಮ ನಿರ್ಣಾಯಕ ಕ್ಷಣದಲ್ಲಿ ಉತ್ತಮವಾಗಿ ಆಡಿದ ಆಸ್ಟ್ರೇಲಿಯಾ ಗೆದ್ದಿದೆ. ಭಾರತ ವಿಶ್ವಕಪ್‌ ಸೋತಿದೆ ಆದರೆ ಕ್ರಿಕೆಟ್‌ನಲ್ಲಿ ಪರಾಭವಗೊಂಡಿಲ್ಲ. ಕ್ರೀಡಾಪಟುಗಳಿಗೆ ನಾಳೆಗಳು ಸದಾ ತೆರೆದಿರುತ್ತವೆ. ಉತ್ಸಾಹ-ಹುರುಪು ಮತ್ತು ಕೌಶಲಗಳನ್ನು ಹೊತ್ತು ಭಾರತದ ಕ್ರಿಕೆಟ್‌ ತಂಡ ಮುನ್ನಡೆಯುತ್ತದೆ. ನಾವು ಅವರೊಂದಿಗೆ ನಿಲ್ಲೋಣ.
-೦-೦-೦-

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ವಿಶ್ವಕಪ್ ಫೈನಲ್ | ಭಾರತ ವಿರುದ್ಧ ಭರ್ಜರಿ ಜಯ : 6ನೇ ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

Next Post

ಗಾಲಿ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಕರೆತರುತ್ತೇನೆ : ಬಿವೈ ವಿಜಯೇಂದ್ರ

Related Posts

Top Story

Neeraj Chopra: ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೇಟಿ ಮಾಡಿದ ನೀರಜ್‌ ಚೋಪ್ರ..!!

by ಪ್ರತಿಧ್ವನಿ
July 3, 2025
0

ಅವಳಿ ಒಲಿಂಪಿಕ್ಸ್ ಪದಕ ವಿಜೇತ, ವಿಶ್ವದ ನಂಬರ್ ಒನ್ ಜಾವೆಲಿನ್ ಎಸೆತಗಾರರಾದ ನೀರಜ್ ಚೋಪ್ರಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಇಂದು ಸೌಹಾರ್ದ ಭೇಟಿ ಮಾಡಿದರು....

Read moreDetails
ಶಾಸಕ ಸುನೀಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಬೇಕಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು

ಜನಪರ ಚಿಂತನೆ ಹೊಂದಿರುವ ಕಾಂಗ್ರೆಸ್ ಸರ್ಕಾರ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

June 21, 2025

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

June 12, 2025

ಏಯ್ ಕೊಹ್ಲಿ ನನ್ನ ಮೊಮ್ಮಗ ಕಣಯ್ಯ…!

June 10, 2025
ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿ.ಎಂ.ಸಿದ್ದರಾಮಯ್ಯ

ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿ.ಎಂ.ಸಿದ್ದರಾಮಯ್ಯ

June 8, 2025
Next Post
ಗಾಲಿ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಕರೆತರುತ್ತೇನೆ : ಬಿವೈ ವಿಜಯೇಂದ್ರ

ಗಾಲಿ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಕರೆತರುತ್ತೇನೆ : ಬಿವೈ ವಿಜಯೇಂದ್ರ

Please login to join discussion

Recent News

Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada