ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತ್ತು ಮಾಡು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಅವರು ಆದೇಶ ಪತ್ರವನ್ನು ಹೊರಡಿಸಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಸಿದ್ಧವಾಗಿವೆ. ಇದಕ್ಕೆ ಜೆಡಿಎಸ್ ಸ್ವಪಕ್ಷದವರಿಂದಲೇ ವಿರೋಧ ವ್ಯಕ್ತವಾಗಿತ್ತು. ಇದನ್ನು ಸಿ.ಎಂ ಇಬ್ರಾಹಿಂ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಅವರುನ್ನು ಅಕ್ಟೋಬರ್ 19ರಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿದ್ದರು.
ರಾಷ್ಟ್ರೀಯ ಅಧ್ಯಕ್ಷ ಹಾಗೂ ಜೆಡಿಎಸ್ ಪಕ್ಷದ ಮುಖ್ಯಸ್ಥರಾದ ಹೆಚ್. ಡಿ ದೇವೇಗೌಡ ಆದೇಶ ಪತ್ರವನ್ನು ಹೊರಡಿಸಿದ್ದು ಅದರಲ್ಲಿ, ಸಿಎಂ ಇಬ್ರಾಹಿಂ ರಾಜ್ಯಾಧ್ಯಕ್ಷರಾದ ರವರು ದಿನಾಂಕ: 16-10-2023ರಂದು, ಬೆಂಗಳೂರಿನಲ್ಲಿ ಚಿಂತನ-ಮಂಥನ ಎನ್ನುವ ಹೆಸರಿನ ಪಕ್ಷದ ಸಮಾನಂತರ ಸಭೆಯನ್ನು ಕರೆದು, ಜೆಡಿಎಸ್-ಬಿಜೆಪಿ ಹೊಂದಾಣಿಕೆ ಬಗ್ಗೆ ಸಭೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಾ ಪಕ್ಷದ ರಾಷ್ಟ್ರಧ್ಯಕ್ಷರು ಮತ್ತು ರಾಜ್ಯ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಬೇಜವಾಬ್ದಾರಿಯುತ ಹೇಳಿಕೆ ಮತ್ತು ಸುಳ್ಳು ಆರೋಪಗಳನ್ನು ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಮಾಡಿರುವುದಾಗಿ ವರದಿಯಾಗಿದೆ ಎಂದು ಆರೋಪಿಸಿದ್ದಾರೆ.
ಮುಂದುವರೆದು, ದಿನಾಂಕ: 07-11-2023ರಂದು ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ರಾಜ್ಯ ಮಟ್ಟದ ವಿಭಾಗ ಮುಖ್ಯಸ್ಥರನ್ನು ಉದ್ದೇಶಿಸಿ ಶ್ರೀ ಸಿ.ಎಂ. ಇಬ್ರಾಹಿಂ ರವರು ಬರೆದಿರುವ ಪತ್ರದಲ್ಲಿ ದಿನಾಂಕ: 19-10-2023ರಂದು ರಾಜ್ಯ ಕಾರ್ಯಕಾರಿ ಸಮಿತಿಯ ರಾಜ್ಯಾಧ್ಯಕ್ಷರನ್ನು ಒಳಗೊಂಡಂತೆ ಪದಾಧಿಕಾರಿಗಳನ್ನು ವಿಸರ್ಜನ ಮಾಡಿರುವುದು ಕಾನೂನು ಬಾಹಿರ ಮತ್ತು ಏಕಪಕ್ಷೀಯ ನಿರ್ಧಾರವೆಂದು ತಿಳಿಸಿ, ತಾನು ಇನ್ನೂ ರಾಜ್ಯಾಧ್ಯಕ್ಷನಾಗಿ ಮುಂದುವರೆದು. ಕಾರ್ಯನಿರ್ವಹಿಸುತ್ತಿರುವುದಾಗಿ, ಹಾಗಾಗಿ ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ತಮ್ಮ ಹುದ್ದೆಗಳಲ್ಲಿ ಮುಂದುವರೆದಿದ್ದಾರೆಂದು ತಿಳಿಸುತ್ತಾ, ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಬಗ್ಗೆ ಒಲವು ಹೊಂದಿರುವವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಸೂಚಿಸಿರುತ್ತಾರೆ,
ಅಲ್ಲದೇ, ದಿನಾಂಕ: 15-11-2023ರಂದು, ಕೇರಳ ರಾಜ್ಯದ ತಿರುವನಂತಪುರಂದಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಸಿ.ಕೆ. ನಾನು ರವರು ಪಕ್ಷದ ಹೆಸರಿನಲ್ಲಿ ಅನಧಿಕೃತವಾಗಿ ಕರೆದಿದ್ದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ, ರಾಜ್ಯದಲ್ಲಿನ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಬಗ್ಗೆ ವಿರೋಧಬಾಸ ಹೇಳಿಕೆ ನೀಡಿ, ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ.

ಈ ಮೇಲಿನ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಪಕ್ಷದ ಹಿಂದಿನ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಂ. ಇಬ್ರಾಹಿಂ ರವರು ಸಾರ್ವಜನಿಕವಾಗಿ ಪಕ್ಷದ ರಾಷ್ಟ್ರಧ್ಯಕ್ಷರ, ರಾಜ್ಯ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಹಾಗೂ ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಬಗ್ಗೆ, ಪಕ್ಷದ ರಾಜ್ಯ ಪರಿಷತ್, ಶಾಸಕಾಂಗ ಪಕ್ಷದ ಸಭೆ, ಕೋ ಸಮಿತಿ ಮುಂತಾದ ಸಭೆಗಳಲ್ಲಿ ಒಮ್ಮತವಾದ ನಿರ್ಣಯವಾಗಿದ್ದರೂ ಸಹ ಬಹಿರಂಗವಾಗಿ ಪಕ್ಷ ವಿರೋಧಿ ಹೇಳಿಕೆ ನೀಡಿ, ಪಕ್ಷದ ಹಿತಕ್ಕೆ ಧಕ್ಕೆ ತಂದಿರುತ್ತಾರೆ. ಇಂತಹ ನಡವಳಿಕೆ ಮತ್ತು ಹೇಳಿಕೆಗಳು ಪಕ್ಷದ ವಿರೋಧಿ ಚಟುವಟಿಕೆಗಳಾಗಿರುತ್ತವೆ.
ಬಿಜೆಪಿ ಜೊತೆಗಿನ ದೋಸ್ತಿ ಬಳಿಕ ಆಪ್ತರ ಜೊತೆ ಸಭೆ ನಡೆಸಿದ್ದ ಸಿಎಂ ಇಬ್ರಾಹಿಂ ನಾವೇ ಒರಿಜಿನಲ್ ಜೆಡಿಎಸ್ ಎಂದು ಎಚ್ಚರಿಸಿದ್ದರು. ಆದ್ದರಿಂದ, ಪಕ್ಷದ ಹಿತ ದೃಷ್ಟಿಯಿಂದ ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನ ಮತ್ತು ನಿಯಮಾವಳಿಗಳ ಅಡಿಯಲ್ಲಿ Article XXII-Breach of Discipline-4 ಹಾಗೂ Punishment-6 ರನ್ವಯ ಶ್ರೀ ಸಿ.ಎಂ. ಇಬ್ರಾಹಿಂ ರವರನ್ನು ಈ ಕೂಡಲೇ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತ್ತುಗೊಳಿಸಲಾಗಿದೆ ಎಂದು ಆದೇಶಿದ್ದಾರೆ.

