ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಚಿಗುರೊಡೆಯುತ್ತಿವೆ. ಕಳೆದ ಏಪ್ರಿಲ್ – ಮೇ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಬಾಡಿಹೋಗಿದ್ದ ಕಮಲ ದಳಗಳು ಇದೀಗ ಮತ್ತೆ ನಳನಳಿಸುತ್ತಿವೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಿರ್ಗಮಿತ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ ಅಧಿಕಾರ ಹಸ್ತಾಂತರ ಆಗಿದೆ. ಈ ಮೂಲಕ ರಾಜ್ಯ ಬಿಜೆಪಿ ಕಾರ್ಯಕರ್ತರಿಗೆ ಬಲ ತುಂಬಿಸುತ್ತಿರುವ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಆಯ್ಕೆ ಬಹುತೇಕ ನಿಚ್ಚಳ ಆಗಿದೆ. ಹಲವಾರು ನಾಯಕರ ಪೈಪೋಟಿ ನಡುವೆ ವಿಪಕ್ಷ ನಾಯಕ ಯಾರು ಅನ್ನೋದು ಪ್ರತಿಧ್ವನಿಗೆ ಖಚಿತ ಮಾಹಿತಿ ಲಭ್ಯವಾಗಿದೆ.
ಶುಕ್ರವಾರ ನಡೆಯಲಿದೆ ವಿಪಕ್ಷ ನಾಯಕನ ಆಯ್ಕೆ..
ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಅಧಿಕಾರ ಸ್ವೀಕರಿಸಿರುವ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಈ ಹಿಂದೆಯೇ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಮಾಡಿದ್ದರು. ಶಾಸಕಾಂಗ ಪಕ್ಷದ ಸಭೆಗೆ ದೆಹಲಿಯಿಂದ ವೀಕ್ಷಕರು ಬರುತ್ತಾರೆ ಅನ್ನೋದನ್ನು ಈಗಾಗಲೇ ಬಹಿರಂಗ ಮಾಡಿದ್ದು, ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗುತ್ತದೆ ಎಂದಿದ್ದರು. ಹೌದು, ಶುಕ್ರವಾರ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಎಲ್ಲಾ ಆಯಾಮಗಳಿಂದಲೂ ಲೆಕ್ಕಾಚಾರ ಹಾಕಿರುವ ಬಿಜೆಪಿ ಹೈಕಮಾಂಡ್ ಅಳೆದೂ ತೂಗಿ ಪ್ರಬಲ ನಾಯಕನ ಆಯ್ಕೆ ಮಾಡುವ ಜೊತೆಗೆ ಎರಡೆರಡು ಶಕ್ತಿ ಕೇಂದ್ರಗಳು ನಿರ್ಮಾಣ ಆಗದಂತೆ ಎಚ್ಚರಿಕೆ ವಹಿಸಿ ಆಯ್ಕೆ ಮಾಡಲಾಗಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂತಿಮವಾಗಿ ಹೈಕಮಾಂಡ್ ಆಯ್ಕೆಯನ್ನು ಘೋಷಣೆ ಮಾಡಲಾಗುತ್ತೆ ಎನ್ನಲಾಗಿದೆ.
ಯಾಱರ ನಡುವೆ ವಿಪಕ್ಷ ನಾಯಕ ಸ್ಥಾನದ ಪೈಪೋಟಿ..?
ವಿರೋಧ ಪಕ್ಷದ ನಾಯಕ ಎಂದರೆ ಮುಖ್ಯಮಂತ್ರಿ ಅಷ್ಟೇ ಅಧಿಕಾರ ಚಲಾಯಿಸುವ ಶಕ್ತಿ ಇರುತ್ತದೆ. ಆದರೆ ಆದೇಶ ಅಧಿಕಾರ ಇರುವುದಿಲ್ಲ ಅಷ್ಟೆ. ಈ ಹುದ್ದೆ ಮೇಲೆ ಪ್ರಮುಖ ನಾಯಕರು ಕಣ್ಣಿಟ್ಟಿದ್ದಾರೆ. ಪ್ರಮುಖವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್, ಮಲ್ಲೇಶ್ವರ ಶಾಸಕ ಅಶ್ವತ್ಥ ನಾರಾಯಣ, ಪದ್ಮನಾಭ ನಗರ ಶಾಸಕ ಆರ್ ಅಶೋಕ್, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮುಂಚೂಣಿಯಲ್ಲಿದ್ದಾರೆ. ಆದರೆ ರಾಜ್ಯಾಧ್ಯಕ್ಷರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಮಾತ್ರವಲ್ಲದೆ, ರಾಜ್ಯದಲ್ಲಿ ಬಿಜೆಪಿ ಅಂಗಪಕ್ಷವಾಗಿ ಎನ್ಡಿಎ ಮೈತ್ರಿಕೂಟದಲ್ಲಿ ಸೇರ್ಪಡೆ ಆಗಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಜೊತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡು ಹೋಗುವಂತಹ ನಾಯಕನನ್ನು ಆಯ್ಕೆ ಮಾಡಲು ನಿರ್ಧಾರ ಮಾಡಿದೆ. ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮುದಾಯಕ್ಕೆ ಕೊಟ್ಟಿದ್ದು, ವಿಪಕ್ಷ ನಾಯಕನ ಸ್ಥಾನವನ್ನು ಒಕ್ಕಲಿಗರಿಗೆ ಕೊಡಲಿದ್ದಾರೆ ಎನ್ನುವುದು ಖಚಿತ ಮಾಹಿತಿ.

ಆರ್. ಅಶೋಕ್ಗೆ ವಿಪಕ್ಷ ನಾಯಕನ ಸ್ಥಾನ ಫಿಕ್ಸ್.. ಕಾರಣ ಇಷ್ಟೆ..
ಪದ್ಮನಾಭ ನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಆರ್. ಅಶೋಕ್ ವಿರೋಧ ಪಕ್ಷದ ನಾಯಕರಾಗುವುದು ಬಹುತೇಕ ಫಿಕ್ಸ್ ಎನ್ನಲಾಗ್ತಿದೆ. ಆರ್ ಅಶೋಕ್, ರಾಜ್ಯದ ಉಪಮುಖ್ಯಮಂತ್ರಿ ಆಗಿ, ಕಂದಾಯ ಸಚಿವ, ಗೃಹ ಸಚಿವ, ಆರೋಗ್ಯ, ಸಾರಿಗೆ, ಪೌರಾಡಳಿತ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಇದೆ. ಇನ್ನು ರಾಜಕೀಯ ಅನುಭವ ಚೆನ್ನಾಗಿದ್ದು, ಹೊಂದಾಣಿಕೆ ಮಾಡಿಕೊಂಡು ಹೋಗುವ ಕಲೆಯೂ ಇದೆ. ಇಷ್ಟುವರ್ಷಗಳ ಕಾಲ ವಿಧಾನಸಭೆಯಲ್ಲಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಉತ್ತಮ ಸಂಸದೀಯ ಪಟು ಎಂದು ಹೇಳಬಹುದು. ಪ್ರಮುಖವಾಗಿ ಜೆಡಿಎಸ್ ಜೊತೆಗೆ ಹೋಂದಾಣಿಕೆ ಮಾಡಿಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಕುಮಾರಸ್ವಾಮಿ ಅಧಿಕೃತ ವಿರೋಧ ಪಕ್ಷದ ನಾಯಕ ಅಲ್ಲದಿದ್ದರೂ ಅಧಿಕೃತ ವಿರೋಧ ಪಕ್ಷವಾಗಿಯೇ ಕೆಲಸ ಮಾಡುತ್ತಾರೆ. ಕುಮಾರಸ್ವಾಮಿ ಹೋರಾಟಕ್ಕೆ ಆರ್ ಅಶೋಕ್ ಸಾಥ್ ಕೊಟ್ಟರೆ ಸಾಕು ಅನ್ನೋದು ಲೆಕ್ಕಾಚಾರ. ಇನ್ನು ರಾಜ್ಯದಲ್ಲಿ ಒಕ್ಕಲಿಗರು ಹಾಗು ಲಿಂಗಾಯರ ಸಮುದಾಯವೇ ರಾಜಕೀಯದ ಎರಡು ಶಕ್ತಿಗಳು ಅನ್ನೋದನ್ನು ಎಲ್ಲರೂ ಒಪ್ಪಿಕೊಂಡಿದ್ದು, ಅದರ ಭಾಗವಾಗಿಯೇ ಲಿಂಗಾಯರು ಹಾಗು ಒಕ್ಕಲಿಗರಿಗೆ ಅಧಿಕಾರ ಹಂಚುವ ಕೆಲಸ ಮಾಡ್ತಿದೆ ಬಿಜೆಪಿ.