ಮಂಡ್ಯ: ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಸರ್ವಪ್ರಯತ್ನಗಳನ್ನೂ ಮಾಡುತ್ತೇನೆ. ನಮ್ಮ ರೈತರ ಹಿತ ಬಲಿ ಕೊಟ್ಟು ಬೇರೆ ರಾಜ್ಯದ ರೈತರ ಹಿತ ಕಾಪಾಡುವ ಬಗ್ಗೆ ನನ್ನಿಂದ ಯೋಚನೆ ಮಾಡಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಹೋರಾಟಗಾರರಿಗೆ ಭರವಸೆ ನೀಡಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದ ಬಳಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ಮಂಗಳವಾರ ಹಸಿರುಶಾಲು ಹಾಕಿಕೊಂಡು ಬಂದ ಸಿಎಂ, ಧರಣಿನಿರತರ ಅಹವಾಲು ಆಲಿಸಿದರು. ಈಗಿರುವ ಬೆಳೆ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಬೇಕಿದೆ.
ಜನರಿಗೆ ಕುಡಿಯುವ ನೀರೂ ಕೊಡಬೇಕಿದೆ. ಪ್ರಾಧಿಕಾರದ ಆದೇಶದಂತೆ ಉಳಿದ ನೀರನ್ನು ತಮಿಳುನಾಡಿಗೂ ಕೊಡಬೇಕು. ಜೊತೆಗೆ, ನಮ್ಮ ಬೆಳೆಗೂ ನೀರು ಕೊಡಬೇಕಿದೆ. ನಮ್ಮ ಅರ್ಜಿಯನ್ನು ಪ್ರಾಧಿಕಾರ ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ ಕೂಡ ಪ್ರಾಧಿಕಾರದ ಆದೇಶವನ್ನೇ ಎತ್ತಿಹಿಡಿದಿದೆ. ಇಂತಹ ಪರಿಸ್ಥಿತಿಯಲ್ಲಿ ಈಗಿರುವ ಮುಂಗಾರು ಬೆಳೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕಾವೇರಿ ನೀರು ಹಂಚಿಕೆ ಸೂಕ್ಷ್ಮ ವಿಚಾರ. ಎಲ್ಲವನ್ನೂ ನಿಂತ ಸ್ಥಳದಲ್ಲಿಯೇ ಹೇಳಲು ಸಾಧ್ಯವಿಲ್ಲ. ನೀರನ್ನು ಎಷ್ಟು ಬಿಟ್ಟರೆ ಏನಾಗುತ್ತೆ ಎಂದು ಹೇಳುವುದಕ್ಕೂ ಆಗುವುದಿಲ್ಲ.