ಬೆಂಗಳೂರು: ರಾಜ್ಯ ಸರ್ಕಾರ ಮಹಾರಾಷ್ಟ್ರ ರೀತಿಯಲ್ಲಿ ತಾನೇ ಪತನವಾಗಲಿದೆ. ಸದ್ಯದಲ್ಲೇ ಡಿ.ಕೆ.ಶಿವಕುಮಾರ್ ಮಾಜಿ ಡಿಸಿಎಂ ಆಗಲಿದ್ದಾರೆ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್ ಪಾಳಯ ಸ್ಪಷ್ಟ ತಿರುಗೇಟು ನೀಡಿದೆ. ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹಮದ್, ಎಸ್.ಎಸ್.ಮಲ್ಲಿಕಾರ್ಜುನ, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ರಾಜು ಕಾಗೆ ಹಾಗೂ ಶಿವಗಂಗಾ ಬಸವರಾಜ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವದ್ವಯರಾದ ಜಮೀರ್ ಅಹಮದ್ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ ಜಾರಕಿಹೊಳಿ ಹೇಳಿಕೆ ಯನ್ನು ತಳ್ಳಿಹಾಕಿದ್ದಾರೆ. ಆಪರೇಷನ್ ಕಮಲ ಮಾಡುವುದು ಅಸಾಧ್ಯ, ಅದರೂ ಸರ್ಕಾರವನ್ನು ಬೀಳಿಸುವ ಹಗಲುಗನಸನ್ನು ರಮೇಶ್ ಕಾಣುತ್ತಿದ್ದಾರೆ ಏಂದು ವ್ಯಂಗ್ಯ ವಾಡಿದರೆ, ಸರ್ಕಾರ ಬೀಳಿಸುವುದು ಬಿಜೆಪಿಗೆ ತಿರುಕನ ಕನಸು ಎಂದು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಲೇವಡಿ ಮಾಡಿದರು.