ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿಷ್ಠಾವಂತರು ಆಗಿರುವ ಇಬ್ಬರು ಸಂಸದರು ಮರಾಠ ಮೀಸಲಾತಿ ಬೇಡಿಕೆಯನ್ನು ಬೆಂಬಲಿಸಿ ರಾಜೀನಾಮೆ ನೀಡಿದ್ದಾರೆ.
ಹಿಂಗೋಲಿ ಸಂಸದ ಹೇಮಂತ್ ಪಾಟೀಲ್ ಸೋಮವಾರ ನವದೆಹಲಿಯ ಲೋಕಸಭೆಯ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದರೆ, ನಾಸಿಕ್ ಸಂಸದ ಹೇಮಂತ್ ಗೋಡ್ಸೆ ಸಿಎಂ ಶಿಂಧೆ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.
“ಲೋಕಸಭಾ ಸ್ಪೀಕರ್ ತಮ್ಮ ಕಚೇರಿಯಲ್ಲಿ ಇಲ್ಲದ ಕಾರಣ ನನ್ನ ರಾಜೀನಾಮೆ ಪತ್ರವನ್ನು ಕಚೇರಿ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ನನಗೂ ಸ್ವೀಕೃತಿ ಸಿಕ್ಕಿದೆ’ ಎಂದು ಹೊಸದಿಲ್ಲಿಯಲ್ಲಿ ಮರಾಠಿ ಸುದ್ದಿವಾಹಿನಿಯೊಂದಕ್ಕೆ ಪಾಟೀಲ್ ಹೇಳಿದ್ದಾರೆ.
ಮೀಸಲಾತಿ ಬೇಡಿಕೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಳಿಕೊಂಡ ಯವತ್ಮಾಲ್‌ನಲ್ಲಿ ಹೋರಾಟಗಾರರು ಅವರನ್ನು ತಡೆದಾಗ ಅವರು ರಾಜಿನಾಮೆ ನಿರ್ಧರಿಸಿದರು. ಪಾಟೀಲ ಅವರು ಸ್ಥಳದಲ್ಲೇ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿ ಪ್ರತಿಭಟನಾಕಾರರಿಗೆ ಹಸ್ತಾಂತರಿಸಿದರು.
ಎನ್‌ಸಿಪಿ (ಶರದ್ ಪವಾರ್ ಬಣ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಂಸದರ ರಾಜೀನಾಮೆ ಒಂದು ಸ್ಟಂಟ್ ಎಂದು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ್, ‘ನಾನು ನೆಹರು-ಗಾಂಧಿ ಕುಟುಂಬದಲ್ಲಿ ಹುಟ್ಟಿಲ್ಲ. ಅಲ್ಲಿ ಎರಡು-ಮೂರು ತಲೆಮಾರು ಅಧಿಕಾರದಲ್ಲಿದೆ. ಯಾವೆಲ್ಲಾ ನಾಯಕರಿಗೆ ಮರಾಠರ ಬಗ್ಗೆ ಕಾಳಜಿ ಇದ್ದರೆ, ಅವರು ರಾಜೀನಾಮೆ ನೀಡಬೇಕುʼ ಎಂದು ತಿಳಿಸಿದ್ದಾರೆ.
“ಮರಾಠ ಸಮುದಾಯದ ಹಲವಾರು ನಾಯಕರು ಮುಖ್ಯಮಂತ್ರಿಯಾಗಲು ಹೋದರು ಆದರೆ ಸಮುದಾಯಕ್ಕೆ ಏನೂ ಸಿಗಲಿಲ್ಲ” ಎಂದು ಅವರು ಹೇಳಿದರು.
ನಾಸಿಕ್‌ನಲ್ಲಿ, ಉಪವಾಸ ಸತ್ಯಾಗ್ರಹ ಮರಾಠ ಪ್ರತಿಭಟನಾಕಾರರು ಈ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಳಿದಾಗ ಮತ್ತೋರ್ವ ಸಂಸದ ಗೋಡ್ಸೆ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದರು.
ರಾಜೀನಾಮೆ ಪತ್ರವನ್ನು ಸಿಎಂ ಶಿಂಧೆ ಅವರಿಗೆ ಕಳುಹಿಸಿ, ಆದಷ್ಟು ಬೇಗ ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿದರು.
ಕಳೆದ ಹಲವು ವರ್ಷಗಳಿಂದ ಮರಾಠ ಸಮುದಾಯ ಮೀಸಲಾತಿಗಾಗಿ ಶ್ರಮಿಸುತ್ತಿದೆ. ಈ ಹಿಂದೆ ಸಮುದಾಯದ ಮೀಸಲಾತಿ ನ್ಯಾಯಾಲಯದಲ್ಲಿ ಉಳಿಯಲಿಲ್ಲ. ಮುಖ್ಯಮಂತ್ರಿಯಾದ ನಂತರ ನೀವು (ಶಿಂಧೆ) ಮೀಸಲಾತಿ ವಿಚಾರದತ್ತ ಗಮನ ಹರಿಸಿದ್ದೀರಿ ಎಂದು ಅವರು ಹೇಳಿದ್ದಾರೆ.
“ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ದಸರಾ ರ್ಯಾಲಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಮುಂದೆ ನೀವು ಪ್ರಮಾಣ ವಚನ ಸ್ವೀಕರಿಸಿದ ನಂತರ, ಮರಾಠ ಸಮುದಾಯದ ಸದಸ್ಯರು ಭರವಸೆ ಹೊಂದಿದ್ದಾರೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮೀಸಲಾತಿಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸೋಮವಾರ ಆರನೇ ದಿನಕ್ಕೆ ಕಾಲಿಟ್ಟಿದೆ.
“ಹೋರಾಟಗಾರ ಮನೋಜ್ ಜಾರಂಜ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮರಾಠಾ ಸಮುದಾಯದ ಭಾವನೆಗಳನ್ನು ಪರಿಗಣಿಸಿ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಗೋಡ್ಸೆ ಹೇಳಿದ್ದಾರೆ.