ನವದೆಹಲಿ: ಪ್ಯಾಲಿಸ್ತೀನ್ ದೇಶದ ಭಾಗವಾಗಿರುವ ಗಾಜಾಪಟ್ಟಿಗೆ ಭಾರತ ದೇಶ ಭಾರೀ ಪ್ರಮಾಣದ ವೈದ್ಯಕೀಯ ಸಾಮಗ್ರಿಗಳನ್ನು ರವಾನಿಸಿದೆ. ಇಸ್ರೇಲ್ ವಾಯು ಪಡೆ ಫೈಟರ್ ಜೆಟ್‌ಗಳು ನಿರಂತರವಾಗಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗಾಜಾಪಟ್ಟಿಯಲ್ಲಿ ಈವರೆಗೆ ಸಾವಿರಾರು ಮಂದಿ ಮೃತಪಟ್ಟಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ರವಾನಿಸಿರುವ ಪರಿಹಾರ ಸಾಮಗ್ರಿಗಳ ಪೈಕಿ ಔಷಧ ಸಾಮಗ್ರಿಗಳಷ್ಟೇ ಅಲ್ಲ, ದುರಂತ ನಿರ್ವಹಣೆ ಸಾಮಗ್ರಿಗಳೂ ಸೇರಿವೆ.
ಈ ಕುರಿತಾಗಿ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಅವರು ಟ್ವೀಟ್ (ಎಕ್ಸ್) ಮಾಡಿದ್ದು, ಭಾರತ ಕಳಿಸಿರುವ ವೈದ್ಯಕೀಯ ಸಾಮಗ್ರಿಗಳ ವಿವರ ನೀಡಿದ್ದಾರೆ. ಜೀವ ರಕ್ಷಕ ಔಷಧಗಳು, ಶಸ್ತ್ರ ಚಿಕಿತ್ಸೆ ಸಲಕರಣೆಗಳು, ಟೆಂಟ್‌ಗಳು, ಸ್ಲೀಪಿಂಗ್ ಬ್ಯಾಗ್‌ಗಳು, ಟಾರ್ಪಲಿನ್‌ಗಳು, ನೈರ್ಮಲ್ಯ ಸಾಧನಗಳು, ನೀರು ಶುದ್ಧೀಕರಣ ಟ್ಯಾಬ್ಲೆಟ್‌ಗಳು ಹಾಗೂ ಇನ್ನಿತರ ಅತ್ಯಗತ್ಯ ಸಲಕರಣೆಗಳನ್ನೂ ರವಾನಿಸಲಾಗಿದೆ ಎಂದು ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಭಾರತೀಯ ವಾಯು ಪಡೆಯ ಸಿ – 17 ಯುದ್ಧ ವಿಮಾನವು 6.5 ಟನ್ ತೂಕದ ವೈದ್ಯಕೀಯ ಸಾಮಗ್ರಿಗಳನ್ನು ಹೊತ್ತು ಈಜಿಪ್ಟ್‌ನ ಎಲ್ – ಅರಿಷ್ ವಿಮಾನ ನಿಲ್ದಾಣ ತಲುಪಿದೆ. ಜೊತೆಯಲ್ಲೇ ಬರೋಬ್ಬರಿ 32 ಟನ್ ಮೊತ್ತದ ದುರಂತ ಪರಿಹಾರ ಸಾಮಗ್ರಿಗಳನ್ನೂ ಇದರಲ್ಲಿವೆ. ಇವೆಲ್ಲವನ್ನೂ ಪ್ಯಾಲಿಸ್ತೀನ್ ಜನತೆಗೆ ತಲುಪಿಸಲು ಭಾರತೀಯ ವಾಯು ಪಡೆ ನಿರ್ಧರಿಸಿದೆ.