ಶಿವಮೊಗ್ಗ: ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಕುರಿತು ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ಸ್ಪೀಕರ್ ಯು ಟಿ ಖಾದರ್ ತಿಳಿಸಿದ್ದಾರೆ.
ಶಿವಮೊಗ್ಗ ಪ್ರವಾಸದಲ್ಲಿರುವ ಅವರು ಜಿಲ್ಲೆಯ ಮಹಾನಗರ ಪಾಲಿಕೆಯ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ನಡೆದ ಯೋಗ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಖಾದರ್, “ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಕುರಿತು ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮಾಡಬಾರದೆಂಬ ತೀರ್ಮಾನ ಇನ್ನೂ ಮಾಡಿಲ್ಲ. ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
“ಬೆಳಗಾವಿಯಲ್ಲಿ ಎಷ್ಟು ದಿನ ಅಧಿವೇಶನ ನಡೆಯಲಿದೆ ಎಂಬುದನ್ನು ಸರ್ಕಾರ ತೀರ್ಮಾನಿಸಲಿದೆ. ನಾನು ಹಾಗೂ ಪರಿಷತ್ ಸಭಾಪತಿಗಳು ತೆರಳಿ ಅಧಿವೇಶನದ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಬಳಿ ಮಾತನಾಡಿದ್ದೇನೆ” ಎಂದು ತಿಳಿಸಿದರು.
ಶಿವಮೊಗ್ಗದ ಯೋಗ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಪೀಕರ್, ಕೇವಲ ಪ್ರೇಕ್ಷಕರಾಗಿರದೇ ತಾವು ಕೂಡ ಯೋಗಾಭ್ಯಾಸ ನಡೆಸಿ ವಿವಿಧ ಯೋಗಾಸನವನ್ನು ಮಾಡಿದರು. ಬಳಿಕ, “ನಾನು 6ನೇ ತರಗತಿಯಿಂದ ಯೋಗಾಸನ ಮಾಡಿಕೊಂಡು ಬಂದಿದ್ದೇನೆ. ಆಗಿನಿಂದಲೂ ನನಗೆ ಯೋಗದ ಪರಿಚಯವಿದೆ. ನನ್ನ ತಾಯಿಯವರ ತಂದೆ, ನನ್ನ ಅಜ್ಜ ಯೋಗ ಗುರುವಿನಲ್ಲಿಗೆ ಕರೆ ತರುತ್ತಿದ್ದರು. ಎಲ್ಲರೂ ಯೋಗಾಸನ ಮಾಡಬೇಕು. ಇದು ಆರೋಗ್ಯಕ್ಕೆ ಒಳ್ಳೆಯದು. ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ” ಎಂದು ಯೋಗಾಭ್ಯಾಸದ ಕುರಿತು ಮಾತನಾಡಿದರು.