ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ 15 ರವರೆಗೆ ಚಳಿಗಾಲದ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡು ಈ ತೀರ್ಮಾನಕ್ಕೆ ಬಂದಿದೆ. ಈ ಬಾರಿ ಬೆಳಗಾವಿಯಲ್ಲೇ ಹತ್ತು ದಿನ ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಹಿಂದೆ ನವೆಂಬರ್ ಕೊನೇ ವಾರದಲ್ಲಿ ಅಧಿವೇಶನ ಆರಂಭಿಸಿ, ಬೆಂಗಳೂರಿನಲ್ಲಿ 10 ದಿನ ಹಾಗೂ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನ ಕಲಾಪ ನಡೆಸುವ ಬಗ್ಗೆ ಚಿಂತನೆ ನಡೆದಿತ್ತು ಎನ್ನಲಾಗಿತ್ತು.
ಡಿಸೆಂಬರ್ 3 ರಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬೀಳಲಿದೆ. ಈ ಬೆನ್ನಲ್ಲೇ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 15ರ ನಂತರ ಶೂನ್ಯ ಮಾಸ ಕಾರಣ ಈ ದಿನಗಳಲ್ಲಿ ಸರ್ಕಾರ ಅಧಿವೇಶನ ನಡೆಸಲ್ಲ. ಇನ್ನು ನವೆಂಬರ್ ನಲ್ಲಿ ದೀಪಾವಳಿ ರಜೆ, ಕನಕ ಜಯಂತಿ ಇರುವುದರಿಂದ ಅಧಿವೇಶನ ನಡೆಸಲು 10 ದಿನಗಳು ಸಿಗಲ್ಲ. ಈ ಎಲ್ಲಾ ಕಾರಣಗಳಿಂದ ಡಿಸೆಂಬರ್ 4 ರಿಂದ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.