ರಾಜ್ಯ ಬೆಂಗಳೂರಿರು ನಗರದಲ್ಲೂ ಕಳೆದೆರಡು ದಿನಗಳಿಂದ ಮತ್ತೆ ಮಳೆ ಆರಂಭವಾಗಿದೆ. ಇಂದು ಸಂಜೆಯಿಂದ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿದಿದೆ. ಮಳೆಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಶಿವಾಜಿನಗರ, ವಸಂತನಗರ, ಶಾಂತಿನಗರ, ಜಯನಗರ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ಎಂ.ಜಿ.ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಬಹುತೇಕ ಕಡೆ ಉತ್ತಮ ಮಳೆ ಆಗಿದೆ. ಇನ್ನೂ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ವಾರ ಉಷ್ಣಾಂಶ ಹೆಚ್ಚಳವಾಗಿ ರಾಜಧಾನಿಯಲ್ಲಿ ಸೆಖೆಯ ವಾತಾವರಣವಿತ್ತು. ಆದರೆ ನಿನ್ನೆ ಸಂಜೆ ಕೂಡ ಮಳೆಯಾಗಿ ವಾತಾವರಣ ತಂಪಾಗಿತ್ತು. ಸೋಮವಾರ ಮುಂಜಾನೆಯಿಂದ ಮಳೆ ಸುರಿಯಿತು. ನಂತರ ಇಡೀ ದಿನ ಮೋಡದ ವಾತಾವರಣವಿದ್ದರೂ ಬಿಸಿಲು ಕೂಡ ಬಿದ್ದಿತ್ತು. ಸಂಜೆ 4 ಗಂಟೆಯ ನಂತರ ನಗರದ ಕೆಲವೆಡೆ ಆರಂಭವಾದ ನಂತರ ಎಲ್ಲೆಡೆ ಸುರಿಯಿತು.
ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ತಿಳಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯವಾಗಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದಿದೆ.
ಕಲಬುರಗಿಯಲ್ಲಿ ಗರಿಷ್ಟ ಉಷ್ಣಾಂಶ: ಸೋಮವಾರ ರಾಜ್ಯದಲ್ಲಿ ಗರಿಷ್ಟ ಉಷ್ಣಾಂಶ ಕಲಬುರಗಿಯಲ್ಲಿ 36.2 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 15 ಡಿಗ್ರಿ ದಾಖಲಾಗಿದೆ.