ಹಿರಿಯ ಪತ್ರಕರ್ತ ಮತ್ತು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಎನ್ ರಂಗನಾಥ್ ರಾವ್ (83) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಎನ್. ರಂಗನಾಥ್ ರಾವ್ (81) ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಮೃತರಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಸಕಲ ಸಿದ್ಧತೆಗಳ ಮುಖಾಂತರ ನೇರವೇರಿದೆ.
ಜಿ.ಎನ್.ರಂಗನಾಥ್ ರಾವ್ ಹುಟ್ಟಿದ್ದು 1942ರಲ್ಲಿ. ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧಗಳನ್ನು ರಚಿಸಿದ್ದಾರೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪೂರಕವಾಗುವ ಕೃತಿಗಳನ್ನೂ ರಚಿಸಿದ್ದಾರೆ. ಹೊಸ ತಿರುವು, ಮಾಸ್ತಿಯವರ ನಾಟಕಗಳು, ಒಳನೋಟ, ಹಿಂದಣ್ಣ ಹೆಜ್ಜೆ, ಅನ್ಯೋನ್ಯ, ಗುಣ- ದೋಷ ಮುಖ್ಯ (ವಿಮರ್ಶಾ ಕೃತಿಗಳು). ಶೇಕ್ಸ್ ಪಿಯರ್ನ ರೋಮಿಯೋ ಜೂಲಿಯಟ್ ಮತ್ತು ಆಂಟನಿ ಕ್ಲಿಯಾಪಾಟ್ರ, ಬ್ರೆಕ್ಟಮ ಕಕೇಷಿಯನ್ ಚಾಕ್ ಸರ್ಕಲ್, ಅನ್ವಿಯ ಅಂತಿಗೊನೆ, ಜೀನ್ ಜೆನೆಯ ದಿ ಬ್ಲ್ಯಾಕ್ಷ್, ಟಾಲ್ ಸ್ಟಾಯ್ನ ಡೆತ್ ಆಫ್ ಇವಾನ್ ಇಲಿಚ್, ಸೋಲ್ಜೆನಿತ್ಸಿನ್ನ ಇವಾನ್ ದೆನಿಸೊವಿಚ್, ಕಾಫ್ಕ ಕತೆಗಳು, ಓ ಹೆನ್ರಿ ಕತೆಗಳು, ಜೆ.ಡಿ ಬರ್ನಾಲ್ನ ಸೋಶಿಯಲ್ ಸೈನ್ಸ್ ಇನ್ ಹಿಸ್ಟರಿ, ರಾಮಚಂದ್ರ ಗುಹ ಅವರ ಇಂಡಿಯಾ ಆಫ್ಟರ್ ಗಾಂಧಿ(ಬಾಪೂ ನಂತರದ ಭಾರತ), ಮೇಕರ್ಸ್ ಆಫ್ ಮಾಡರ್ನ್ ಇಂಡಿಯಾ(ನವಭಾರತದ ನಿರ್ಮಾಪಕರು), ಪೇಟ್ರಿಯೆಟ್ಸ್ ಅಂಡ್ ಪಾರ್ಟಿಸಾನ್ಸ್( ದೇಶಪ್ರೇಮಿಗಳು ಮತ್ತು ಪಕ್ಷಪಾತಕರು. ಗಾಂಧಿ ಬಿಫೋರ್ ಇಂಡಿಯಾ( ಗಾಂಧಿ ಮಹಾತ್ಮರಾದುದು) ಮತ್ತು ಖಲೀಲ್ ಗಿಬ್ರಾನ್ರ ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್( ಅನುವಾದಿತ ಕೃತಿಗಳು).
ರಂಗನಾಥರಾವ್ ಅವರ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. 2009ನೇ ಸಾಲಿನ ಖಾದ್ರಿ ಶಾಮಣ್ಣ ಪ್ರಶಸ್ತಿ ಹಾಗೂ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಕುವೆಂಪು ಭಾಷಾಭಾರತಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ಟೀಎಸ್ಸಾರ್ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಸಾಹಿತ್ಯ ಪ್ರಶಸ್ತಿಗಳ ಪ್ರಮುಖವಾದವು.