ಕಾರವಾರ: ಕಳೆದಮೂರು ತಿಂಗಳಿಂದ ಸಂಚಾರ ನಿಷೇಧಕ್ಕೆ ಒಳಪಟ್ಟು ವಿವಾದದಲ್ಲಿ ಸಿಲುಕಿದ್ದ ರಾಷ್ಟ್ರೀಯ ಹೆದ್ದಾರಿ 66ರ ಕಾರವಾರದ ಎರಡು ಸುರಂಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೋಮವಾರ ಆದೇಶ ಮಾಡಿದ್ದಾರೆ.
”ಈ ಅನುಮತಿಗೂ ಷರತ್ತು ವಿಧಿಸಲಾಗಿದೆ. ಜಿಲ್ಲಾಡಳಿತ ನಿಯೋಜಿಸುವ ತಾಂತ್ರಿಕ ಅಧಿಕಾರಿಗಳ ಸಮ್ಮುಖದಲ್ಲಿ ಅ.8ರೊಳಗೆ ಮತ್ತೊಮ್ಮೆ ಸುರಂಗದ ತಪಾಸಣೆ ನಡೆಸದೇ ಇದ್ದಲ್ಲಿ ಈ ಆದೇಶವನ್ನು ಹಿಂಪಡೆಯುವುದಾಗಿ ತಿಳಿಸಲಾಗಿದೆ. ಅಲ್ಲದೆ, ಈ ಅವಧಿಯಲ್ಲಿ ಸುರಂಗದಲ್ಲಿ ಉಂಟಾಗುವ ಅನಾಹುತಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೇ ಜವಾಬ್ದಾರರು.” ಎಂದು ಕರಾರು ಹಾಕಲಾಗಿದೆ.
ಸುರಂಗದ ಸುರಕ್ಷತೆ ಬಗ್ಗೆ ಪುಣಾದ ಎಂಜಿನಿಯರಿಂಗ್ ಕಾಲೇಜಿನ ತಜ್ಞರು ಕೊಟ್ಟಿರುವ ವರದಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದೆ. ತಾಂತ್ರಿಕ ಅಧಿಕಾರಿಗಳ ಸಮ್ಮುಖದಲ್ಲಿ ಅ.2ರಂದು ತಪಾಸಣೆ ನಡೆಸುವಂತೆ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಿತ್ತು. ಕಾರ್ಯದೊತ್ತಡದಿಂದ ತಜ್ಞರು ಬರಲು ಸಾಧ್ಯವಾಗಿಲ್ಲ, ಅ.8ರಂದು ತಪಾಸಣೆಯನ್ನು ನಿಗದಿ ಮಾಡುವಂತೆ ಎನ್‌ಎಚ್‌ಐ ಕೋರಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.