ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಅವೈಜ್ಞಾನಿಕವಾಗಿ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹಾಗೂ ರಾಜ್ಯ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯವನ್ನು ಮಾಡಿದರು.
ವಿಧಾನಸಭೆ ವಿಶೇಷ ಅಧಿವೇಶನ ಕರೆದು, ಸಂಕಷ್ಟ ಸೂತ್ರ ಜಾರಿಯಾಗುವ ತನಕ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ತಿಳಿಸಬೇಕು ಎಂದು ಸಿದ್ದರಾಮಯ್ಯ ಅವರನ್ನು ಮು.ಚಂದ್ರು ಹಾಗೂ ಕುರುಬೂರು ಶಾಂತಕುಮಾರ್ ಜಂಟಿಯಾಗಿ ಒತ್ತಾಯಿಸಿದರು.
ಕಾವೇರಿ ವ್ಯಾಪ್ತಿಗೆ ಸೇರಿದ 4 ರಾಜ್ಯಗಳ ಪರಿಣಿತರು, ನೀರಾವರಿ ತಜ್ಞರು, ರೈತ ಪ್ರತಿನಿಧಿಗಳು, ಹವಮಾನ ತಜ್ಞರು, ನೀರಾವರಿ ಇಲಾಖೆಯ ಅಧಿಕಾರಿಗಳಿರುವ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು. ಕುಡಿಯುವ ನೀರಿಗಾಗಿ ಹೆಚ್ಚು ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳಲು ಮೇಕೆದಾಟು ಯೋಜನೆ ನಿರ್ಮಾಣ ಕಾರ್ಯ ಆರಂಭಿಸಬೇಕು, ಅಗತ್ಯ ಹಣ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಸಿಎಂ ಮುಂದಿಟ್ಟರು.
ಇದೇ ವೇಳೆ ಕರ್ನಾಟಕ ನೆಲ, ಜಲ, ಭಾಷೆ ಹಾಗೂ ರೈತರಿಗಾಗಿ ಹೋರಾಟ ಮಾಡಿದ ಸಂಘಟನೆಗಳ ಮುಖಂಡರುಗಳ, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮುಖಂಡರ ಮೇಲಿರುವ ಹೋರಾಟದ ಮೊಕ್ಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಮೊನ್ನೆ ಸೆ.26ರಂದು ನಾವು ನಡೆಸಿದ ಬೆಂಗಳೂರು ಬಂದ್ ಸಂದರ್ಭ ಕರೆ ಮಾಡಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆಗೆ ಆಹ್ವಾನಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ರಾಮಲಿಂಗಾರೆಡ್ಡಿ ಅವರು 3 ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಸಿದ್ದರಾಮಯ್ಯ ಅವರು ಶುಕ್ರವಾರ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪೂರ್ವ ಯೋಜನೆಯನ್ನು ಕೈಬಿಡಲಾಯ್ತು ಎಂದು ಮು.ಚಂದ್ರು ವಿವರಿಸಿದರು.
ಕರ್ನಾಟಕ ಬಂದ್ಗೆ ಬೆಂಬಲ ನೀಡಿದ ಆಮ್ ಆದ್ಮಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಕಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ, ಬೆಂಗಳೂರಲ್ಲಿ ಬೇಸಿಗೆಯ ದಿನಗಳು ಹೇಗಿರಬಹುದು ಎಂಬುದನ್ನು ಈಗಲೇ ಊಹಿಸಬಹುದು. ಕುಡಿಯುವ ನೀರಿಗೆ ಹಾಹಾಕಾರ ಸಂಭವಿಸುವ ಸಾಧ್ಯತೆಗಳೇ ಕಣ್ಮುಂದೆ ಕಾಣಿಸುತ್ತಿವೆ. ಬೆಂಗಳೂರಲ್ಲಿರುವ ಪ್ರತಿಯೊಬ್ಬರು ದಿನಕ್ಕೆ ಕನಿಷ್ಠ 150 ಲೀಟರ್ ನೀರನ್ನು ಖರ್ಚು ಮಾಡುತ್ತಿದ್ದಾರೆ. ಜನರು ಈಗಲೇ ಎಚ್ಚೆತ್ತುಕೊಳ್ಳಬೇಕು. ನೀರನ್ನು ಬೇಕಾಬಿಟ್ಟಿ ಖರ್ಚು ಮಾಡಬಾರದು. ಮಳೆಗಾಲವು ಅಂತಿಮ ದಿನಗಳನ್ನು ಪ್ರವೇಶಿಸದರೂ ನಿರೀಕ್ಷಿತ ಮಳೆ ಬಿದ್ದಿಲ್ಲ. ಕುಡಿಯುವ ನೀರಿಗೆ ಮೊದಲ ಆಧ್ಯತೆ ಕೊಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಿದ್ದೂ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಲಾಗುತ್ತಿದೆ ಎಂದರು ಹೇಳಿದರು.