ಕರ್ನಾಟಕದಲ್ಲಿ ಕಾವೇರಿ ಹೋರಾಟ ರಂಗೇರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೋರ್ಟ್ ಆದೇಶ ನೆಪದಲ್ಲಿ ತಮಿಳುನಾಡಿಗೆ ಕನ್ನಂಬಾಡಿ ಕಟ್ಟೆ (KRS)ನಿಂದ ತಮಿಳುನಾಡಿಗೆ ನೀರು ಹರಿಸುತ್ತಲೇ ಇದೆ. ಇದು ಬಿಜೆಪಿ ಹಾಗು ಜೆಡಿಎಸ್ ವಾಗ್ಬಾಣಕ್ಕೂ ಆಹಾರ ಆಗಿದೆ. I.N.D.I.A ಒಕ್ಕೂಟದಲ್ಲಿ ಕಾಂಗ್ರೆಸ್ ಜೊತೆಗೆ ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷ ಕೂಡ ಸೇರ್ಪಡೆ ಆಗಿರುವ ಕಾರಣ, ಡಿಎಂಕೆ ಪಕ್ಷವನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಪಕ್ಷ ಕಾವೇರಿ ನೀರನ್ನು ಬಳಸಿಕೊಳ್ತಿದೆ ಎನ್ನುವ ಆರೋಪ ರಾಜಕೀಯ ಪಕ್ಷದಿಂದ ಅಷ್ಟೇ ಅಲ್ಲದೆ ಹೋರಾಟ ನಿರತ ರೈತರಿಂದಲೂ ಅದೇ ಮಾತು ಕೇಳಿ ಬರುತ್ತಿದೆ. ಆದರೆ CWRC ಹಾಗು CWMA ಜೊತೆಗೆ ಸುಪ್ರೀಂಕೋರ್ಟ್ ಆದೇಶ ಕಾಂಗ್ರೆಸ್ ಸರ್ಕಾರದ ಕೈ ಕಟ್ಟಿ ಹಾಕಿದ್ದು, ಮೈತ್ರಿ ವಿರೋಧ ಪಕ್ಷಕ್ಕೆ ಹಾಲು ಅನ್ನ ಎನ್ನುವಂತಾಗಿದೆ.
ಬರವನ್ನು ಊಹಿಸುವುದರಲ್ಲಿ ಎಡವಿದ್ದ ರಾಜ್ಯ ಸರ್ಕಾರ..!
ಮೇ 20ರಂದು ರಾಜ್ಯದಲ್ಲಿ ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಕಾಂಗ್ರೆಸ್ನ ಸಿದ್ದರಾಮಯ್ಯ, ಅಷ್ಟೇ ಬೇಗ ಸಚಿವ ಸಂಪುಟವನ್ನೂ ವಿಸ್ತರಣೆ ಮಾಡಿದ್ದರು. ಸರ್ಕಾರ ಉತ್ತಮ ಆಡಳಿತ ಕೊಡುತ್ತೆ ಎನ್ನುವ ನಿರೀಕ್ಷೆ ಮೂಡಿಸುವ ಸಮಯಕ್ಕೆ ರಾಜ್ಯಕ್ಕೆ ಪ್ರವೇಶ ಪಡೆಯಬೇಕಿದ್ದ ಮುಂಗಾರು ಮಳೆ ಕೈ ಕೊಟ್ಟಿತ್ತು. ಮೇ ಕೊನೆಯ ವಾರದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಬರಬೇಕಿದ್ದ ಮುಂಗಾರು ಮಾರುತಗಳು ದಿಕ್ಕು ತಪ್ಪಿದ್ದವು. ಆಗಲೇ ಬರ ಎದುರಾಗುವ ಸಾಧ್ಯತೆ ಬಗ್ಗೆ ಅಂದಾಜು ಮಾಡಬೇಕಿದ್ದ ಸರ್ಕಾರ ಕೂಡ ದಿಕ್ಕುತಪ್ಪಿತ್ತು. ಆ ಬಳಿಕ ಜೂನ್, ಜುಲೈನಲ್ಲೂ ಬರಬೇಕಿದ್ದ ಸಾಮಾನ್ಯ ಮಳೆ ರಾಜ್ಯಕ್ಕೆ ಬರಲೇ ಇಲ್ಲ. ಆಗಲೇ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿ, ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದೆ. ದಯಮಾಡಿ ಕಾವೇರಿ ನೀರನ್ನು ಹರಿಸಲು ಸಾಧ್ಯವಿಲ್ಲ ಎಂದು ಮೊದಲೇ ಮನವಿ ಮಾಡಿಕೊಂಡಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಅನ್ನೋದು ವಿರೋಧ ಪಕ್ಷಗಳ ಆರೋಪ. ಆದರೆ ತಮಿಳುನಾಡು ನೀರು ಬಿಡುವಂತೆ ಒತ್ತಾಯಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿದ ಬಳಿಕ ನೀರಿಲ್ಲ ಎಂದು ಹೇಳಿದ್ದು ಕರ್ನಾಟಕದ ಜನರ ಪಾಲಿಗೆ ಸಂಕಷ್ಟ ತಂದಿಟ್ಟಿದೆ ಎನ್ನಲಾಗ್ತಿದೆ.
ವಿರೋಧ ಪಕ್ಷಗಳ ದೋಸ್ತಿಗೆ ಲೋಕಸಭಾ ಅಸ್ತ್ರ..!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಷ್ಟೇ ಉತ್ತಮ ಕೆಲಸ ಮಾಡಿದರೂ ಕಾವೇರಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೀಗ ಇದನ್ನೇ ಅಸ್ತ್ರವಾಗಿ ಮಾಡಿಕೊಂಡಿರುವ ವಿರೋಧ ಪಕ್ಷಗಳ ದೋಸ್ತಿ ನಾಯಕರು ಕಾಂಗ್ರೆಸ್ ಮಣಿಸಲು ಸಕಲ ತಯಾರಿ ಮಾಡಿಕೊಳ್ತಿದ್ದಾರೆ. ಇಲ್ಲೀವರೆಗೂ ಕಾಂಗ್ರೆಸ್ ಹಾಗು ಸರ್ಕಾರದ ಮುಖ್ಯಸ್ಥರು ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದರು. ಆದರೆ ಯಾರೊಬ್ಬರೂ ಪ್ರಧಾನಿಯನ್ನು ಭೇಟಿ ಮಾಡಿ ಮನವಿ ಮಾಡಿರಲಿಲ್ಲ. ಆದರೆ ಇದೀಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ತಮಿಳುನಾಡು ಹಾಗು ಕರ್ನಾಟಕ ನಡುವೆ ಸೃಷ್ಟಿಯಾಗಿರುವ ಕಾವೇರಿ ಬಿಕ್ಕಟ್ಟು ಶಮನ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಈ ಹಿಂದೆಯೂ ರಾಜ್ಯಸಭೆಯಲ್ಲೂ ಕೈಮುಗಿದು ಬೇಡಿಕೊಂಡಿದ್ದರು. ಮತ್ತೊಮ್ಮೆ ಪ್ರಧಾನಿಗೆ ಪತ್ರ ಬರೆಯುವ ಮೂಲಕ ಕಾವೇರಿ ರಕ್ಷಣೆಗೆ ಕಂಕಣ ಕಟ್ಟಿದ್ದಾರೆ.
ಮೋದಿ ಮಧ್ಯಪ್ರವೇಶ ಬಿಜೆಪಿ-ಜೆಡಿಎಸ್ಗೆ ಲಾಭ..!
ಮಳೆ ಬಂದರೆ ತಮಿಳುನಾಡಿನ ಕಿರಿಕಿರಿ ತಪ್ಪಲಿದೆ. ಕಾವೇರಿ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಹೋಗುವುದರಿಂದ ನೀರಿನ ಸಮಸ್ಯೆಗೆ ಇತಿಶ್ರೀ ಸಿಗಲಿದೆ. ಒಂದು ವೇಳೆ ಮಳೆ ಅಬ್ಬರ ಇರದೆ ಪ್ರಸಕ್ತ ವರ್ಷ ಕಳೆಯುವುದಾದರೆ ಕಾಂಗ್ರೆಸ್ ಪಾಲಿಕೆ ಲೋಕಸಭಾ ಚುನಾವಣೆ ಕಬ್ಬಿಣದ ಕಡಲೆ ಆಗುವುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ದೇವೇಗೌಡರ ಪತ್ರಕ್ಕೆ ಬೆಲೆ ಕೊಟ್ಟು ಪ್ರಧಾನಿ ಮಧ್ಯಪ್ರವೇಶ ಮಾಡಿ ಎರಡೂ ರಾಜ್ಯಗಳಲ್ಲಿ ಮಳೆ ಪ್ರಮಾಣ ಹಾಗು ನೀರಿನ ಸಂಗ್ರಹದ ಬಗ್ಗೆ ಪರಿಶೀಲನೆಗೆ ಕೇಂದ್ರದಿಂದ ತಂಡ ಕಳುಹಿಸಿ, ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರೆ ಬಿಜೆಪಿ – ಜೆಡಿಎಸ್ ಮೈತ್ರಿ ಪಕ್ಷಕ್ಕೆ ಬಹುದೊಡ್ಡ ಲಾಭ ಆಗಲಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತೆ ಪುಟಿದು ನಿಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ರಾಜಕಾರಣ ಏನೇ ಇರಲಿ, ಕಾವೇರಿ ಸಮಸ್ಯೆ ಬಗೆಹರಿಯಲಿ ಎನ್ನುತ್ತಿದ್ದಾರೆ ಅನ್ನದಾತರು.