ದಲಿತರ ಮೇಲಿನ ದಾಳಿಗಳಿಗೆ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಭೀಬತ್ಸ ಕೃತ್ಯ ವರದಿಯಾಗಿದೆ. ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ 17 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ತಡೆಯಲು ಬಂದ ಆಕೆಯ ತಂದೆಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಜೆಪಿಯ ಜಿಲ್ಲಾ ಅಲ್ಪಸಂಖ್ಯಾತ ಘಟಕದ ನಾಯಕ ಮಾಸೂಮ್ ರಾಝಾ ರಾಹಿ ಆರೋಪಿ.
ಆಗಸ್ಟ್ 28 ರಂದು ಆಡಳಿತಾರೂಢ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಮುಖ್ಯಸ್ಥ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರವನ್ನು ತಡೆಯಲು ಮಧ್ಯಪ್ರವೇಶಿಸಿದ ತನ್ನ ತಂದೆಯನ್ನು ಆರೋಪಿ ಥಳಿಸಿ ಕೊಂದಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಸಂತ್ರಸ್ತ ಬಾಲಕಿ ತನ್ನ ತಂದೆ, ಮೂವರು ಸಹೋದರಿಯರು ಮತ್ತು ಕಿರಿಯ ಸಹೋದರನೊಂದಿಗೆ ಆರೋಪಿ ಒಡೆತನದ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಅತ್ಯಾಚಾರದ ಆರೋಪ ಸೇರಿದಂತೆ, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 354, 452, 323, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯನ್ನೂ ಸೇರಿಸಲಾಗಿದೆ ಎಂದು ಸದರ್ ಕೊತ್ವಾಲಿ ಪೊಲೀಸ್ ಠಾಣೆಯ ಸರ್ಕಲ್ ಅಧಿಕಾರಿ ಅಜಯ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಘಟನೆಯ ಕುರಿತು ಬಿಜೆಪಿಯ ಜಿಲ್ಲಾ ಸಂಚಾಲಕ ಸಂಜಯ್ ಪಾಂಡೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಪಕ್ಷದ ಹಿರಿಯ ನಾಯಕತ್ವಕ್ಕೆ ತಿಳಿಸಲಾಗಿದೆ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.