ತುಮಕೂರು ಜಿಲ್ಲೆಯ ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆಯಾಗಿ 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ರಾಜ್ಯ ಸರ್ಕಾರದ ಇಂಧನ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಗುರುವಾರ (ಆಗಸ್ಟ್ 31) ವರದಿಯಾಗಿದೆ.
ಪಾವಗಡ ತಾಲ್ಲೂಕು ರಾಷ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 2,050 ಮೆಗಾ ವ್ಯಾಟ್ ಹಾಗೂ ಇಂಟೂರಾಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 500 ಮೆಗಾವಾಟ್ ಸೇರಿದಂತೆ ಒಟ್ಟು 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ (ಕೆಎಸ್‌ಪಿಡಿಸಿಎಲ್) ಮುಂದಾಗಿದೆ.
ಈಗಾಗಲೇ ಸ್ಥಾಪಿಸಿರುವ ಸೋಲಾ ಪಾರ್ಕ್ನಿಂದ 2 ಸಾವಿರ ಮೆ.ವ್ಯಾ ವಿದ್ಯುತ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಹೊಸ ಯೋಜನೆ ಕಾರ್ಯಗತಗೊಂಡರೆ ಸುಮಾರು 5 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ.
ಸೋಲಾರ್ ಪಾರ್ಕ್ ವಿಸ್ತರಣೆಗಾಗಿ ಸೌರ ನಿಗಮವು ರಾಷ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 10 ಸಾವಿರ ಎಕರೆ, ಇಂಟುರಾಯನಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ 2 ಸಾವಿರ ಎಕರೆ ಜಮೀನು ಗುತ್ತಿಗೆ ಪಡೆಯಲು ಮುಂದಾಗಿದೆ.
ಇಂಟೂರಾಯನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪ್ರದೇಶದಲ್ಲಿ ರೈತರ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ಪ್ರಕಟಣೆ ಹೊರಡಿಸಿದೆ. ಭೂಮಿ ಬಿಟ್ಟುಕೊಡುವ ಬಗ್ಗೆ ರೈತರು ಒಪ್ಪಿಗೆ ಪತ್ರಗಳನ್ನು ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಷ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹುಸೇನ್ಪುರ, ರೆಡ್ಡಿವಾರಹಳ್ಳಿ, ನಾಗೇನಹಳ್ಳಿ, ಅಪ್ಪಾಜಿಹಳ್ಳಿ, ಬುಗುಡೂರು, ಪಕ್ಕದ ಅನ್ನದಾನಪುರ ಹಾಗೂ ಇಂಟೂರಾಯನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆ ಆರಂಭವಾಗಲಿದೆ.
ಈ ಯೋಜನೆಗೆ ಒಪ್ಪಿಗೆ ನೀಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಪಿ.ಸಾಂಬಸದಾಶಿವರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ.
ಸೋಲಾರ್ ಪಾರ್ಕ್ ವಿಸ್ತರಣೆ ಮಾಡುವಂತೆ ಕೋರಿ ಸರ್ಕಾರ, ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮಕ್ಕೆ ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕ್ರೆಡಾಲ್ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ, ಕೆಎಸ್ಪಿಡಿಸಿಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರ್ನಾಥ್ ಅವರನ್ನು ಭೇಟಿಮಾಡಿ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು.
ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆಗೆ ರಾಜ್ಯ ಸರ್ಕಾರ ಚಿಂತಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೂನ್‌ನಲ್ಲಿ ಹೇಳಿದ್ದರು.