ಬಿಜೆಪಿಯು ಸಂಘಟನೆ ದೃಷ್ಟಿಯಿಂದ ಅತ್ಯಂತ ಬಲಿಷ್ಟವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಮಾತನಾಡಿದ ಅವರು, “ಪ್ರತಿಪಕ್ಷ ನಾಯಕ ಯಾರಾಗ್ತಾರೆ? ರಾಜ್ಯಾಧ್ಯಕ್ಷ ಯಾರಾಗ್ತಾರೆ? ಅನ್ನೋದನ್ನು ಯೋಚನೆ ಮಾಡದೇ ಲಕ್ಷಾಂತರ ಕಾರ್ಯಕರ್ತರು ಈ ದೇಶಕ್ಕೆ ಒಳ್ಳೆಯದಾಗಬೇಕು. ನಮೋ ಪ್ರಧಾನಿ ಆಗಬೇಕು ಅನ್ನೋ ದೃಷ್ಟಿಯಿಂದ ಕಾಯ್ತಾ ಇದ್ದಾರೆ. ಇಡೀ ರಾಜ್ಯದಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. 28ಕ್ಕೆ 28 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾವೇರಿ ನೀರು ತಮಿಳುನಾಡಿಗೆ ಹರಿಸೋ ಬಗ್ಗೆ.”ರಾಜ್ಯದ ರೈತರಿಗೆ ಕುಡಿಯೋಕೆ ನೀರಿಲ್ಲ. ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡೋದ್ರಲ್ಲಿ ಅರ್ಥವೇ ಇಲ್ಲ. ರಾಜ್ಯದ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ನಡೆಸಿದ್ದಾರೆ. ಸರ್ವಪಕ್ಷ ನಿಯೋಗ ದೆಹಲಿಗೆ ಕರೆದೊಯ್ಯೋದಾಗಿ ಹೇಳಿದ್ದಾರೆ. ಆದರೆ ಅಲ್ಲಿ ಎಷ್ಟರ ಮಟ್ಟಿಗೆ ಪರಿಹಾರ ಸಿಗುತ್ತೆ, ಇಲ್ಲವೋ ಪ್ರಶ್ನೆ ಬೇರೆ. ಆದರೆ ರಾಜ್ಯ ಸರ್ಕಾರ ನಮ್ಮ ರೈತರಿಗೆ ನೀರು ಸಿಗೋವರೆಗೆ ತಮಿಳುನಾಡಿಗೆ ನೀರು ಬಿಡಲ್ಲ ಅಂತ ತೀರ್ಮಾನ ಮಾಡಬೇಕು. ಈ ತೀರ್ಮಾನ ತಗೊದುಕೊಳ್ಳಲಿಲ್ಲವೆಂದರೆ, ರಾಜ್ಯದ ರೈತರಿಗೆ ದ್ರೋಹ ಮಾಡಿದ ಹಾಗೆ” ಎಂದು ಅಭಿಪ್ರಾಯಪಟ್ಟರು.