ಮೈಸೂರು ಚಾಮುಂಡಿ ಬೆಟ್ಟಕ್ಕೆ ಮಂಗಳವಾರ (ಆಗಸ್ಟ್ 29) ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆಶಿವಕುಮಾರ್ ತಾಯಿ ಚಾಮುಂಡೇಶ್ವರಿಗೆ ಹರಕೆ ತೀರಿಸಿದರು.
ತಾಯಿ ಚಾಮುಂಡೇಶ್ವರಿಗೆ ರೇಷ್ಮೇ ಸೀರೆ ಹರಕೆ. ಹಸಿರು ಮತ್ತು ಕೆಂಪು ಸೀರೆ ಹರಕೆ ಸಲ್ಲಿಕೆ. ಕನಕಾಂಬರ ಮಲ್ಲಿಗೆ ಗುಲಾಬಿ ಹೂವಿನ ಹಾರ ಸಲ್ಲಿಕೆ. ಬಾಳೆಹಣ್ಣು ದಾಳಿಂಬೆ ಸೇರಿ ಫಲ ಸಮರ್ಪಣೆ.
ಗ್ಯಾರಂಟಿ ಕಾರ್ಡ್ ಜೊತೆ ಹರಕೆ ಕಟ್ಟಿಕೊಂಡಿದ್ದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್.
ಬಿಜೆಪಿ ಸರ್ಕಾರದ ಹಗರಣ ವಿಚಾರ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸರ್ಕಾರದ ಎಲ್ಲಾ ಹಗರಣಗಳ ಬಗ್ಗೆಯೂ ತನಿಖೆ ಮಾಡುತ್ತೇವೆ. ಇದರಲ್ಲಿ ಟಾರ್ಗೆಟ್ ಎಂಬ ಪ್ರಶ್ನೆಯೇ ಇಲ್ಲ. ಪಿಎಸ್ಐ ಹಗರಣ, 40% ಹಗರಣ, ಕೋವಿಡ್ ಹಗರಣ ಎಲ್ಲದನ್ನೂ ತನಿಖೆಗೆ ಒಳಪಡಿಸಿದ್ದೇವೆ. ಹಗರಣದ ಬಗ್ಗೆ ತನಿಖೆ ಮಾಡಿಸಿದೆ ಇವರು ತಿಂದುಕೊಂಡು ಹಾಗೇ ಹೋಗಲಿ ಎಂದು ಬಿಡಬೇಕಾ ಎಂದು ಪ್ರಶ್ನಿಸಿದರು.
ಸರ್ಕಾರ 100 ದಿನ ಪೂರೈಸಿದ ವಿಚಾರ ಕುರಿತ ಪ್ರಶ್ನೆಗೆ, ನಮಗೆ ಇದೇನು ಸವಾಲು ಎನ್ನಿಸಲಿಲ್ಲ. ಗ್ಯಾರೆಂಟಿ ವಿಚಾರದಲ್ಲಿ ನಮಗೆ ಬದ್ಧತೆ ಇತ್ತು. ಹೀಗಾಗಿ ಅವುಗಳ ಜಾರಿ ಕಠಿಣ ಅನಿಸಲಿಲ್ಲ. ಮಾತು ಕೊಟ್ಟಂತೆ ಗ್ಯಾರೆಂಟಿಗಳ ಜಾರಿ ಮಾಡುತ್ತಿದ್ದೇವೆ. ಖುದ್ದು ಪಿಎಂ ಕೂಡ ಗ್ಯಾರೆಂಟಿಗಳ ಬಗ್ಗೆ ಆರೋಪ ಮಾಡುತ್ತಿದ್ದರು. ಆದರೆ ಸರ್ಕಾರ ರಾಜ್ಯ ಯಾವ ದಿವಾಳಿಯೂ ಆಗಿಲ್ಲ. ಎಲ್ಲವನ್ನೂ ವ್ಯವಸ್ಥಿತವಾಗಿ ಜಾರಿ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು,
ಗೃಹ ಲಕ್ಷ್ಮಿಗೆ ವಾರ್ಷಿಕ 32 ಸಾವಿರ ಕೋಟಿ ಖರ್ಚಾಗುತ್ತೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆ ಇಷ್ಟು ದೊಡ್ಡ ಪ್ರಮಾಣದ ಹಣ ಖರ್ಚು ಮಾಡುತ್ತಿರುವುದು ಇದೇ ಮೊದಲು ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.