• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೋವಿಡ್ ಸಂಕಟದ ಸಂದರ್ಭವನ್ನು ಮೋದಿ ಹೇಗೆ ನಿರ್ವಹಿಸಿದ್ದರು?

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
August 27, 2023
in Top Story, ಅಂಕಣ
0
ಕೋವಿಡ್ ಸಂಕಟದ ಸಂದರ್ಭವನ್ನು ಮೋದಿ ಹೇಗೆ ನಿರ್ವಹಿಸಿದ್ದರು?
Share on WhatsAppShare on FacebookShare on Telegram

ADVERTISEMENT

ಕೊರೋನ ಸಾಂಕ್ರಮಿಕ ಪ್ರಸಂಗ ಭಾರತವನ್ನು ಅಕ್ಷರಶಃ ಕಂಗಾಲಾಗಿಸಿತ್ತು. ಮೋದಿ ನೇತೃತ್ವದ ಆಡಳಿತ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿತ್ತು. ಆದರೂ ತನ್ನ ಅಸಡ್ಡೆಯ ನಿಲುವನ್ನು ಸಮರ್ಥಿಸಿಕೊಳ್ಳಲು ಇಡೀ ಮೋದಿ ಪಟಾಲಂ ಫೀಲ್ಡಿಗಿಳಿದಿತ್ತು. ಕೋವಿಡ್-ಪ್ರೇರಿತ ವೈರಲ್ ಮಯೋಕಾರ್ಡಿಟಿಸ್ ಗಳಿಂದ ಜನತೆಗೆ ಮತ್ತು ದೇಶಕ್ಕೆ ತೀವ್ರ ಹೊಡೆತ ಬಿದ್ದಿದ್ದು ನಿಜ. ಈ ಸಾಂಕ್ರಾಮಿಕ ರೋಗದಿಂದ ನಮ್ಮ ರಾಷ್ಟ್ರ ತೀವ್ರ ಆಘಾತಕ್ಕೆ ಒಳಗಾಗಿದ್ದರೂ ಆಳುವ ಸರಕಾರ ಕುಂಬಕರ್ಣ ನಿದ್ರೆಯಲ್ಲಿತ್ತು. ೨೦೨೧ ರ ಮೇ ತಿಂಗಳ ಪೂರ್ವಾರ್ಧದ ವೇಳೆಗೆ ಒಟ್ಟು ಕೊರೋನ ಸೋಂಕುಗಳು ೨ ಕೋಟಿಯ ಸಂಖ್ಯೆ ಮೀರಿ, ಸಂಚಿತ ಸಾವಿನ ಸಂಖ್ಯೆ ೩ ಲಕ್ಷ ದಾಟಿತ್ತು. ಆದರೆ ತಜ್ಞರ ಪ್ರಕಾರ ನಿಜವಾದ ಸಂಖ್ಯೆ ಇದರ ಎಂಟು ಪಟ್ಟು ಹೆಚ್ಚು ಎಂದು ಅಂದಾಜಿಸಲಾಗುತ್ತಿದೆ.

ಇಡೀ ದೇಶದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ತೀವ್ರ ಕೊರತೆ, ಕ್ಷೀಣಗೊಂಡ ಆಮ್ಲಜನಕದ ಸರಬರಾಜು, ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆಗಳ ಅಭಾವ, ಔಷಧ ಅಂಗಡಿಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಅಭಾವ. ಕೋವಿಡ್ ಪಿಡುಗನ್ನು ನಿಭಾಯಿಸುವಲ್ಲಿ ಭಾರತದ ಆಡಳಿತ ಸಂಪೂರ್ಣ ವಿಫಲವಾಗಿತ್ತು. ನಾಯಕತ್ವದ ದುರಂತಮಯ ಅಸಮರ್ಥತೆ ಮತ್ತು ಬೃಹತ್ ಕಳಪೆ ನಿರ್ವಹಣೆ ಕೋವಿಡ್ ಸೋಂಕು ಉಲ್ಬಣಿಸಲು ಮುಖ್ಯ ಕಾರಣವಾಗಿತ್ತು. ೨೦೨೦ ರಲ್ಲಿನ ಮೊದಲ ಅಲೆಯಿಂದ ಚೇತರಿಸಿಕೊಂಡ ನಂತರ ಸಾಮಾನ್ಯ ಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗಿದ್ದವು. ಆದರೆ ಸರಕಾರವು ನಮ್ಮ ದೇಶದ ಜನರೇ ಸಂಪೂರ್ಣ ಲಸಿಕೆ ಪಡೆಯದಿರುವಾಗ ಯಾವ ಆಧಾರದಲ್ಲಿ ಲಸಿಕೆ ರಫ್ತು ಮಾಡುವ ನಿರ್ಧಾರ ಕೈಕೊಂಡಿತ್ತು ಎನ್ನುವುದೇ ಸೋಜಿಗ ಸಂಗತಿಯಾಗಿದೆ. ಸರಕಾರದ ಅಸಮರ್ಪಕ ನಿರ್ಧಾರಗಳ ಪಟ್ಟಿ ನಿಜಕ್ಕೂ ಉದ್ದವಾಗಿದೆ.

ಮೋದಿಯ ನಾಟಕೀಯತೆ:

ಆಪತ್ತಿನಲ್ಲೂ ಸ್ವಯಂ ಪ್ರತಿಷ್ಠಾಪನೆಯ ಅವಕಾಶಕ್ಕಾಗಿ ಹಾತೊರೆಯುವ ಮೋದಿಯವರು ಉದ್ದಕ್ಕೂ ನಾಟಕೀಯ ಪ್ರದರ್ಶಗಳಲ್ಲೆ ಕಾಲಕಳೆದರು. ಅವರ ಒಲವು ಪೂರ್ಣ ಪ್ರಮಾಣದ ಒಣ ಪ್ರತಿಷ್ಠೆಯ ಪ್ರದರ್ಶನವಾಗಿತ್ತು. ಆಗಾಗ ವಾಹಿನಿಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದ ಮೋದಿಯವರು ಕೋವಿಡ್ ನಿರ್ವಹಣೆಗಾಗಿ ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸುವ ಬದಲಿಗೆ ಭಾವನಾತ್ಮಕ ಸಂಗತಿಗಳ ಕಡೆಗೆ ಜನರ ಗಮನ ಸೆಳೆಯುತ್ತ, ನಿರ್ಧಿಷ್ಟ ಸಮಯದಲ್ಲಿ ಜನರಿಗೆ ಚಪ್ಪಾಳೆ ತಟ್ಟಲುˌ ದೀಪ ಹಚ್ಚಲು ಪ್ರೇರೇಪಿಸುವ ಮೂರ್ಖ ಪ್ರಯೋಗಗಳನ್ನು ಮಾಡಿ ಜಗತ್ತಿನ ಎದುರಿಗೆ ಬೆತ್ತಲಾಗಿದ್ದರು.

ದೇಶಕ್ಕೆ ದೇಶವೇ ಈ ರೀತಿಯ ಮೂಢ ನಂಬಿಕೆಗಳ ಪ್ರದರ್ಶನದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿತ್ತು. ಕೋವಿಡ್ ಎದುರಿಸುವ ಕ್ರಮಗಳ ಬಗ್ಗೆ ನೀತಿ ನಿರೂಪಣಾ ಮಟ್ಟಗಳಲ್ಲಿ ಗಂಭೀರ ವೈಜ್ಞಾನಿಕ ಚಿಂತನೆಗಳು ಆಗಲೇಯಿಲ್ಲ. ಕಾಲ್ಪನಿಕ ಮಹಾಭಾರತದ ಕುರುಕ್ಷೇತ್ರ ಯುದ್ಧ ೧೮ ದಿನಗಳಲ್ಲಿ ಗೆದ್ದಂತೆಯೇ, ಭಾರತವು ೨೧ ದಿನಗಳಲ್ಲಿ ಕೋವಿಡ್ ವಿರುದ್ಧದ ಯುದ್ಧವನ್ನು ಗೆಲ್ಲುತ್ತದೆ ಎಂದು ಮೋದಿ ನಗೆಪಾಟಲಿನ ಹೇಳಿಕೆ ನೀಡಿದ್ದರು. ಇದು ಅವರಲ್ಲಿನ ಅವೈಜ್ಞಾನಿಕ ಮನೋಭಾವ ಮತ್ತು ನಕಲಿ ಹಿಂದೂ ರಾಷ್ಟ್ರೀಯತೆಯ ಪೂರ್ಣ ಪ್ರದರ್ಶನದವಾಗಿತ್ತು. ಮೋದಿಯವರ ಈ ರೀತಿಯ ನಾಟಕೀಯ ಪ್ರದರ್ಶನಗಳು ಯಾವುದೇ ರೀತಿಯಲ್ಲೂ ಕೋವಿಡ್ ನಿರ್ವಹಣೆಯಲ್ಲಿ ಕೆಲಸ ಮಾಡಲಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯು ಈ ಬಿಕ್ಕಟ್ಟಿನ ಪ್ರಾರಂಭದಿಂದ ಒಂದು ಧಾರಕ ತಂತ್ರವನ್ನು ಶಿಫಾರಸು ಮಾಡುತ್ತಲೆ ಬಂದಿತ್ತು. ರೋಗ ಪರೀಕ್ಷೆ, ಸೋಂಕಿತರ ಪ್ರಥಮ ಮತ್ತು ದ್ವಿತಿಯ ಸಂಪರ್ಕಗಳ ಗುರುತಿಸುವಿಕೆ, ಸೋಂಕಿತರನ್ನು ಪ್ರತ್ಯೇಕಿಸುವುದು ಮತ್ತು ಅಗತ್ಯ ಚಿಕಿತ್ಸೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತನ್ನ ಸಲಹೆಗಳನ್ನು ಪ್ರಕಟಿಸುತ್ತಲೆ ಬಂದಿತ್ತು. ಜನವರಿ ೩೦, ೨೦೨೦ ರಂದು ಭಾರತದ ಮೊದಲ ಕೋವಿಡ್ ಪ್ರಕರಣ ದಾಖಲಿಸಿದ ಕೇರಳದಂತಹ ಕೆಲವು ರಾಜ್ಯಗಳು ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದರೂ, ಕೇಂದ್ರ ಸರ್ಕಾರದ ಅಸಮರ್ಪಕ ಹಾಗು ನಿರಾಶಾದಾಯಕ ಪ್ರತಿಕ್ರಿಯೆಯು ಇನ್ನೂ ಹಲವಾರು ರಾಜ್ಯಗಳಲ್ಲಿ ಇಂತಹ ಕ್ರಮಗಳು ಅನುಷ್ಠಾನಗೊಳಿಸಲು ಅಡ್ಡಿಯಾಯಿತು.

ಮೋದಿ ಕೇಂದ್ರೀತ ನೀತಿಗಳು:

ಮೋದಿಯವರು ತಮ್ಮ ಪ್ರತಿಷ್ಠೆಗಾಗಿ ೨೦೨೦ ರ ಆರಂಭದಲ್ಲಿ ಸೋಂಕನ್ನು ಲೆಕ್ಕಿಸದೆ ನಮಸ್ತೆ ಟ್ರಂಪ್ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣರಾದರು. ಮಾರ್ಚ್ ೨೦೨೦ ರಲ್ಲಿ ಪ್ರಧಾನಿ ಮೋದಿ ಜನರಿಗೆ ಕೇವಲ ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯ ಸೂಚನೆ ನೀಡಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಘೋಷಿಸಿದ್ದರು. ಕೋವಿಡ್ ಬಿಕ್ಕಟ್ಟನ್ನು ಕೇಂದ್ರ ಸರ್ಕಾರವು ಸಾಂಕ್ರಾಮಿಕ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಅಸ್ಪಷ್ಟ ನಿಬಂಧನೆಗಳ ಅಡಿಯಲ್ಲಿ ನಿರ್ವಹಿಸಿತ್ತು. ಈ ನಿಲುವು ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ಸರಕಾರ ಮಾಡಿದ ಸವಾರಿಯಂತಿತ್ತು.

ಸ್ಥಳೀಯ ಮಟ್ಟದಲ್ಲಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಸೂಕ್ತ ಕಾರ್ಯತಂತ್ರಗಳು ಮತ್ತು ಆಡಳಿತಾತ್ಮಕ ಕ್ರಮಗಳನ್ನು ವಿನ್ಯಾಸಗೊಳಿಸುವ ಅಧಿಕಾರವನ್ನು ಭಾರತದ ಮುವತ್ತು ರಾಜ್ಯ ಸರ್ಕಾರಗಳಿಗೆ ನೀಡುವ ಬದಲು, ಕೇಂದ್ರ ಸರ್ಕಾರವು ದೆಹಲಿಯಿಂದ ಸುಗ್ರೀವಾಜ್ಞೆಯ ಮೂಲಕ ಕೋವಿಡ್ ಅನ್ನು ನಿರ್ವಹಿಸಲು ಪ್ರಯತ್ನಿಸಿತ್ತು. ಮೋದಿಯವರು ಒಕ್ಕೂಟ ವ್ಯವಸ್ಥೆಯ ವ್ಯಾಖ್ಯಾನವನ್ನು ಅಧಿಕಾರವಿಲ್ಲದ ಜವಾಬ್ದಾರಿಯಂತೆ ಪರಿವರ್ತಿಸಿದ್ದರು. ಅದಕ್ಕೆ ಪುರಾವೆಯಾಗಿ ೨೦೨೧ ರಲ್ಲಿ ದೆಹಲಿ ಸರ್ಕಾರವು ನೂರಾರು ರೋಗಿಗಳ ಜೀವ ಉಳಿಸುವ ಸಲುವಾಗಿ ಆಮ್ಲಜನಕವನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ನಿಂದ ಆದೇಶ ಪಡೆಯಬೇಕಾಯ್ತು. ಅಷ್ಟೆ ಅಲ್ಲದೆ ತಮ್ಮದೆ ಪಕ್ಷದ ಆಡಳಿತವಿರುವ ಕರ್ನಾಟಕಕ್ಕೆ ಅಗತ್ಯ ಆಕ್ಸಿಜನ್ ಪೂರೈಸಲು ಕರ್ನಾಟಕ ಹೈಕೋರ್ಟಿನ ಆದೇಶವನ್ನು ಸುಪ್ರಿಮ್ ಕೋರ್ಟ್ ಎತ್ತಿ ಹಿಡಿದಿತ್ತು.

ಅಸಮರ್ಪಕ ಲಾಕ್‌ಡೌನ್ ನಿರ್ವಹಣೆ:

೨೦೨೦ ರ ಮಾರ್ಚ್‌ನಲ್ಲಿ ಯಾವುದೇ ಬಗೆಯ ಪೂರ್ವಸಿದ್ಧತೆ ಇಲ್ಲದೆ, ರಾಜ್ಯ ಸರ್ಕಾರಗಳಿಗೆ, ಸಾರ್ವಜನಿಕರಿಗೆ ಅಥವಾ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಮೋದಿ ಆಡಳಿತ ಹಠಾತ್ ಲಾಕ್‌ಡೌನ್ ಘೋಷಿಸಿತ್ತು. ಇದರ ಪರಿಣಾಮವಾಗಿ ಸುಮಾರು ಮೂರು ಕೋಟಿ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಮನೆ ಸೇರಬೇಕಾಯಿತು. ದೇಶದಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡವು. ಸುಮಾರು ನೂರಾರು ವಲಸೆ ಕಾರ್ಮಿಕರು ಸಾವನ್ನಪ್ಪಿದರು. ಸುಮಾರು ಐವತ್ತು ಲಕ್ಷ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳು ಮುಚ್ಚಲ್ಪಟ್ಟವು. ಹಲವು ಉದ್ಯಮಗಳು ಇಂದಿಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೋದಿಯವರ ಈ ಅಸಮರ್ಪಕ ನಿರ್ಧಾರಗಳಿಂದ ಭಾರತದ ನಿರುದ್ಯೋಗ ಇದುವರೆಗಿನ ಗರಿಷ್ಠ ದಾಖಲೆಯನ್ನು ತಲುಪಿದೆ.

ಅನುದಾನದ ಕೊರತೆ:

ಕೊರೋನ ಬಿಕ್ಕಟ್ಟು ತನ್ನ ನಿಯಂತ್ರಣ ತಪ್ಪುತ್ತಿದ್ದಂತೆ ಕೇಂದ್ರ ಸರ್ಕಾರವು ಯಾವುದೇ ಅನುದಾನ ನೀಡದೆ ಕೊರೋನ ನಿರ್ವಹಣೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳ ಹೆಗಲೇರಿಸಿ ಕೈತೊಳೆದುಕೊಂಡಿತು. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಪರೀಕ್ಷಾ ಕಿಟ್‌ಗಳು, ವೈಯಕ್ತಿಕ ರಕ್ಷಣಾ ಸಾಧನಗಳು, ಆಸ್ಪತ್ರೆ ಹಾಸಿಗೆಗಳು, ವೆಂಟಿಲೇಟರ್‌ಗಳು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಔಷಧಿಗಳನ್ನು ಸಜ್ಜುಗೊಳಿಸಲು ರಾಜ್ಯ ಸರ್ಕಾರಗಳು ಹೆಣಗಾಡಿದವು. ಅಷ್ಟರಲ್ಲೇ ಕೇಂದ್ರ ಸರಕಾರವು ‘ಪಿಎಂ-ಕೇರ್ಸ್’ ಎಂಬ ಹೊಸ ಪರಿಹಾರ ನಿಧಿ ಸಂಗ್ರಹದ ಘಟಕ ಸ್ಥಾಪಿಸಿ ಸಾರ್ವಜನಿಕರಿಂದ ಮತ್ತು ಉದ್ಯಮಿಗಳಿಂದ ಭಾರಿ ಪ್ರಮಾಣದ ಹಣವನ್ನು ಸಂಗ್ರಹಿಸಿತು. ಆದರೆ ಅಪಾರದರ್ಶಕ ಪಿಎಂ-ಕೇರ್ಸ್ ನಿಧಿಯಲ್ಲಿ ಎಷ್ಟು ಹಣವಿದೆ ಮತ್ತು ಅದರ ಸಂಪನ್ಮೂಲಗಳು ಯಾವುವು ಎಂಬುದರ ಬಗ್ಗೆ ಸಾರ್ವಜನಿಕ ಲೆಕ್ಕಪತ್ರವೂ ಇಡಲಿಲ್ಲ ಹಾಗು ಸಾರ್ವಜನಿಕರಿಗೆ ಮಾಹಿತಿಯನ್ನೂ ನೀಡಲಿಲ್ಲ.

ಮೊದಲ ಅಲೆಯ ಸಮಯ ಮುಗಿದು ಸಾಂಕ್ರಾಮಿಕ ರೋಗವು ಕ್ಷೀಣಿಸಿದಂತೆ ಕಂಡುಬಂದಾಗ, ಅಧಿಕಾರಿಗಳು ನೆಮ್ಮದಿಯಾಗಿ ವಿರಮಿಸಿದರು. ಸಂಭವನೀಯ ಎರಡನೇ ಅಲೆಯ ವಿರುದ್ಧ ಯಾವುದೇ ಮುನ್ನೆಚ್ಚರಿಕೆಗಳು ಅಥವಾ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಅನೇಕ ತಜ್ಞರು ಎಚ್ಚರಿಸಿದರೂ ಕೂಡ ಸರಕಾರ ಮತ್ತು ಆಡಳಿತ ಯಂತ್ರ ಕಿವಿಗೊಡಲಿಲ್ಲ. ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ವಿನಾಶಕಾರಿ ಎನ್ನುವ ತಜ್ಞರ ಸಲಹೆಗೆ ಸರಕಾರ ಕಿವಿಗೊಡಲಿಲ್ಲ. ಸೋಂಕಿತ ವ್ಯಕ್ತಿಗಳು ಮತ್ತು ಅವರ ಪ್ರಾಥಮಿಕ ಸಂಪರ್ಕಗಳನ್ನು ಗುರುತಿಸುವುದು, ಪ್ರತ್ಯೇಕಿಸುವುದು ನಿಗದಿತ ವೇಗದಲ್ಲಿ ನಡೆಯಲಿಲ್ಲ. ಜನರು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದು ನಿಲ್ಲಿಸಿದ ಬಳಿಕ ವೈರಸ್ ರೂಪಾಂತರಗೊಂಡು ಅತ್ಯಂತ ಸಾಂಕ್ರಾಮಿಕವಾಗಿ ವಿಕಸಿಸಿ, ಮತ್ತಷ್ಟು ಹೆಚ್ಚು ವೇಗವಾಗಿ ಹರಡಲಾರಂಭಿಸಿತು.

ಅತಿ ವೇಗದಲ್ಲಿ ಸೋಂಕು ಹರಡುವ ಹಲವಾರು ಸೂಪರ್-ಸ್ಪ್ರೆಡರ್ ಘಟನೆಗಳು ದೇಶಾದ್ಯಂತ ಘಟಿಸಿದವು. ಅವುಗಳಲ್ಲಿ ಕಿಕ್ಕಿರಿದ ಚುನಾವಣಾ ಪ್ರಚಾರಗಳು, ಸಾರ್ವಜನಿಕ ಚುನಾವಣಾ ಸಭೆಗಳು ಮತ್ತು ಜನಜಾತ್ರೆಯ ಧಾರ್ಮಿಕ ಉತ್ಸವಗಳು ಬೃಹತ್ ಪ್ರಮಾಣದಲ್ಲಿ ನಡೆಸಲ್ಪಟ್ಟವು. ಇದರಿಂದ ಸಾಂಕ್ರಾಮಿಕ ರೋಗ ಕಾಡ್ಗಿಚ್ಚಿನಂತೆ ಹರಡಲಾರಂಭಿಸಿತು.

ಸಮರ್ಪಕ ಯೋಜನೆಯ ಕೊರತೆ:

ಕೋವಿಡ್‌ನ ಎರಡು ಅಲೆಗಳ ನಡುವಿನ ಅವಧಿಯಲ್ಲಿ ನಮ್ಮ ವೈದ್ಯಕೀಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ, ವೆಂಟಿಲೇಟರ್‌ಗಳು ಹಾಗು ಅಗತ್ಯ ಔಷಧಿಗಳಂತಹ ನಿರ್ಣಾಯಕ ಸಂಪನ್ಮೂಲಗಳ ಪೂರೈಕೆಯನ್ನು ಹೆಚ್ಚಿಸಲು ಮತ್ತು ಸುವ್ಯವಸ್ಥಿತಗೊಳಿಸಲು ಸರ್ಕಾರಕ್ಕೆ ಸಾಕಷ್ಟು ಸಮಯವಿತ್ತು. ದೇಶಾದ್ಯಂತ ಲಸಿಕೆಗಳ ಸಂಗ್ರಹಣೆ ಮತ್ತು ವಿತರಣೆಯನ್ನು ವಿಸ್ತರಿಸುವತ್ತ ಗಮನಹರಿಸಲು ಅಪಾರವಾದ ಅವಕಾಶವಿತ್ತು. ಸರಕಾರ ಇದೆಲ್ಲವನ್ನು ಮಾಡಿದ್ದಾಗಿದ್ದರೆ ಎರಡನೇ ಅಲೆಯಿಂದ ಹೆಚ್ಚಿನ ಸಂಖ್ಯೆಯ ನಾಗರಿಕರನ್ನು ಸುರಕ್ಷಿತವಾಗಿರಿಸಬಹುದಾಗಿತ್ತು. ಈ ಅವಕಾಶ, ಮತ್ತು ಲಭ್ಯವಿರುವ ಸಮಯ ಮೋದಿ ಸರಕಾರ ಸುಮ್ಮನೆ ವ್ಯರ್ಥಮಾಡಿತು. ಕೋವಿಡ್ ನಿರ್ವಹಣೆಯ ಮಾರ್ಗದಲ್ಲಿ ಮೋದಿ ಆಡಳಿತ ಎಲ್ಲಾ ಕ್ಷೇತ್ರಗಳಲ್ಲಿ ಭಾರಿ ವೈಫಲ್ಯ ಕಂಡಿತು.

ಸರ್ವೋಚ್ಛ ನ್ಯಾಯಾಲಯದ ಮಧ್ಯ ಪ್ರವೇಶ:

ಕೋವಿಡ್ ನಿವಾರಣೆಗೆ ಪ್ರಯತ್ನಿಸುತ್ತಿದ್ದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ “ವೈಜ್ಞಾನಿಕ, ತರ್ಕಬದ್ಧ ಮತ್ತು ಸರಿಸಮ ಆಧಾರದ ಮೇಲೆ” ದ್ರವ ವೈದ್ಯಕೀಯ ಆಮ್ಲಜನಕದ ಪರಿಣಾಮಕಾರಿ ಮತ್ತು ಪಾರದರ್ಶಕ ಹಂಚಿಕೆಯನ್ನು ಸುಗಮಗೊಳಿಸಲು ಹಾಗು ಖಚಿತಪಡಿಸಿಕೊಳ್ಳಲು ೧೨ ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸುವಂತೆ ಸುಪ್ರೀಂ ಕೋರ್ಟ್‌ ಸರಕಾರಕ್ಕೆ ಸಲಹೆ ನೀಡಬೇಕಾಯಿತು. ಇದು ಆಡಳಿತ ನಡೆಸುವ ಸರಕಾರದ ಸಂಪೂರ್ಣ ವಿಫಲತೆಗೆ ಒಂದು ಸಾಕ್ಷಿ ಎಂದು ಪರಿಗಣಿಸಬಹುದಾಗಿದೆ.

ವಿಳಂಬಗೊಂಡ ಲಸಿಕಾ ಅಭಿಯಾನ ಮತ್ತು ಅವರ ಕಳಪೆ ನಿರ್ವಹಣೆ:

ಭಾರತವು ವಿಶ್ವದ ಶೇಕಡಾ ೬೦ ರಷ್ಟು ಕೋವಿಡ್ ಲಸಿಕೆಯನ್ನು ಉತ್ಪಾದಿಸಿತ್ತು ಎಂಬುದು ಹೆಮ್ಮೆಯ ಸಂಗತಿ. ಕೇಂದ್ರ ಸರ್ಕಾರವು ದೇಶದಲ್ಲಿ ಲಭ್ಯವಿರುವ ಎರಡು ಬಗೆಯ ಲಸಿಕೆ ಉತ್ಪಾದನೆಯನ್ನು ಅಗತ್ಯಕ್ಕೆ ತಕ್ಕಂತೆ ದ್ವಿಗುಣಗೊಳಿಸುವ ಮತ್ತು ಅವುಗಳ ಪೂರೈಕೆಯನ್ನು ಹೆಚ್ಚಿಸುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ವಿದೇಶಿ ಲಸಿಕೆಯನ್ನು ತ್ವರಿತಗತಿಯಲ್ಲಿ ಆಮದು ಮಾಡಿಕೊಳ್ಳುವ, ಲಭ್ಯವಿರುವ ಉತ್ಪಾದನಾ ಸೌಲಭ್ಯಗಳನ್ನು ವಿಸ್ತರಿಸುವ ಅಥವಾ ಇತರ ಭಾರತೀಯ ಔಷಧಿ ಉತ್ಪಾದನಾ ಸಂಸ್ಥೆಗಳಿಗೆ ತುರ್ತು ಪರಿಸ್ಥಿತಿ ಅಡಿಯಲ್ಲಿ ಲಸಿಕೆ ಉತ್ಪಾದನಾ ಪರವಾನಗಿ ವಿಸ್ತರಿಸಲು ಕ್ರಮ ಕೈಕೊಳ್ಳಲಿಲ್ಲ. ಬ್ರಿಟನ್ ಲಸಿಕೆ ಅಭಿಯಾನ ಆರಂಭಿಸಿದ ಸುಮಾರು ಎರಡು ತಿಂಗಳ ನಂತರ ಭಾರತವು ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿತ್ತು. ಆರಂಭದಲ್ಲಿ ಅದೂ ಕೂಡ ಆರೋಗ್ಯ ಕಾರ್ಯಕರ್ತರು, ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕೆಲಸಗಾರರಿಗೆ ಮಾತ್ರ ಲಸಿಕೆ ಹಾಕಲಾಯಿತು. ೨೦೨೧ˌ ಏಪ್ರಿಲ್ ಕೊನೆಯ ವೇಳೆಗೆ, ಕೇವಲ ೩೭ ಪ್ರತಿಶತದಷ್ಟು ಆರೋಗ್ಯ ಕಾರ್ಯಕರ್ತರು ಮತ್ತು ಭಾರತದ ಜನಸಂಖ್ಯೆಯಲ್ಲಿ ಕೇವಲ ೧.೩ ಪ್ರತಿಶತದಷ್ಟು ಜನರಿಗೆ ಮಾತ್ರ ಎರಡು ಡೋಜ್ ಸಂಪೂರ್ಣ ಲಸಿಕೆ ಹಾಕಲಾಯಿತು. ಕೇವಲ ೮ ಪ್ರತಿಶತದಷ್ಟು ಜನರು ಮಾತ್ರ ಒಂದು ಡೋಜ್ ಲಸಿಕೆ ಪಡೆದರು.

ನಿರೀಕ್ಷಿತ ಎರಡನೇ ಅಲೆಯನ್ನು ನಿರ್ವಹಿಸಲು ಪೂರ್ವ ತಯ್ಯಾರಿಯಾಗಿ ಅಗತ್ಯ ಪ್ರಮಾಣದ ಲಸಿಕೆಗಳ ಉತ್ಪಾದನೆಗೆ ಆದೇಶ ನೀಡಲು ಸರ್ಕಾರ ವಿಫಲವಾಗಿತ್ತು. ೨೦೨೧ˌ ಏಪ್ರಿಲ್ ಮೂರನೇ ವಾರದಲ್ಲಿ ಮಾತ್ರ ಸರ್ಕಾರವು ಲಸಿಕೆ ಅಭಿಯಾನವನ್ನು ಆರಂಭಿಸಲು ರಾಜ್ಯ ಸರ್ಕಾರಗಳು, ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಿಗೆ ವಹಿಸಿತು. ಸರಕಾರವು “ಲಸಿಕೆ ರಾಷ್ಟ್ರೀಯತೆ” ಎಂಬ ಒಣ ರಾಜಕೀಯ ಪ್ರತಿಷ್ಠೆಯಿಂದ ವಿದೇಶದಿಂದ ಬಂದ ಲಸಿಕೆಗಳಿಗೆ ತುರ್ತು-ಬಳಕೆಯ ಅನುಮೋದನೆಯನ್ನು ನೀಡಲು ಸಹ ನಿರಾಕರಿಸಿತು. ಇದು ೨೦೨೧ ರ ಏಪ್ರಿಲ್ ಮಧ್ಯಭಾಗದಲ್ಲಿ ರಾಷ್ಟ್ರಾದ್ಯಂತ ಲಸಿಕೆಗಳ ತೀವ್ರ ಅಭಾವಕ್ಕೆ ಕಾರಣವಾಯಿತು. ಮಾನವ ನಿರ್ಮಿತ ಕೃತಕ ಲಸಿಕೆ ಅಭಾವದಿಂದ ಹಾಗು ವಿವಿಧ ರಾಜ್ಯಗಳಿಗೆ ಲಸಿಕೆಗಳನ್ನು ನ್ಯಾಯಯುತ ಮತ್ತು ಸರಿಸಮನಾಗಿ ವಿತರಿಸದೇ ಇರುವ ಕೇಂದ್ರ ಸರಕಾರದ ಬೇಜವಾಬ್ದಾರಿಯ ಪರಿಣಾಮವಾಗಿ ಮಹಾರಾಷ್ಟ್ರ ಮತ್ತು ಕೇರಳದಂತ ಪ್ರತಿಪಕ್ಷಗಳ ಸರಕಾರವಿರುವ ರಾಜ್ಯಗಳು ಕೊರೋನದಿಂದ ಬಳಲಿ ಬೆಂಡಾದವು. ಲಸಿಕೆ ಕೊರತೆಯಿಂದ ಕೊರೋನ ಸೋಂಕು ಪ್ರಕರಣಗಳು ಈ ರಾಜ್ಯಗಳಲ್ಲಿ ಉಲ್ಬಣಿಸಿದವು.

ಮೋದಿ ಆಡಳಿತದ ತಪ್ಪು ಆದ್ಯತೆಗಳು:

ರಾಷ್ಟ್ರದ ರಾಜಧಾನಿ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಹೀನಾಯ ಲಾಕ್ಡೌನ್ ಪರಿಸ್ಥಿತಿಯ ಮಧ್ಯೆ, ಪ್ರಧಾನಿ ವಾಸಕ್ಕೆಂದು ಭವ್ಯವಾದ ಹೊಸ ಬಂಗ್ಲೆ ಒಳಗೊಂಡಂತೆ ಅತಿರಂಜಿತ ಮತ್ತು ಅನಗತ್ಯವಾದ ೨೦,೦೦೦ ಕೋಟಿ ರೂಪಾಯಿ ವೆಚ್ಛದ ಸೆಂಟ್ರಲ್ ವಿಸ್ಟಾ ಯೋಜನೆಯ ನಿರ್ಮಾಣಕ್ಕೆ ಸರ್ಕಾರ ಚಾಲನೆ ನೀಡಿತು. ಈ ನಿರ್ಮಾಣ ಕಾರ್ಯವು “ಅಗತ್ಯ ಸೇವೆ” ಎಂದು ಕೂಡ ಸರಕಾರ ಘೋಷಿಸಲು ನಾಚಿಕೆ ಪಡಲಿಲ್ಲ. ಆದರೆ ಸೂಕ್ತ ಪ್ರಮಾಣದ ಆಮ್ಲಜನಕದ ಪೂರೈಕೆಯಂತಹ ಅಗತ್ಯ ಸೇವೆಗಳು ಜನರಿಗೆ ಲಭ್ಯವಾಗಲಿಲ್ಲ. ಏತನ್ಮಧ್ಯೆ, ಇದು ಭಾರತದ ಬಹುಪಾಲು ರಾಜ್ಯಗಳಿಗೆ ಲಸಿಕೆ ಹಾಕುವ ಆರ್ಥಿಕ ಹೊರೆಯನ್ನು ಹೇರಿ ಕೇಂದ್ರ ಸರಕಾರ ತಾನು ನುಣುಚಿಕೊಂಡಿತು. ಕೇಂದ್ರದ ಈ ಸಮಯಸಾಧಕ ನೀತಿಯಿಂದ ರಾಜ್ಯ ಸರಕಾರಗಳು ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಬೆಲೆ ತೆತ್ತು ಲಸಿಕೆ ಖರಿಧಿಸುವ ಪರಿಸ್ಥಿತಿ ಉದ್ಭವವಾಯಿತು.

ಈ ಎಲ್ಲ ಚಟುವಟಿಕೆಗಳು ನಮ್ಮ ಅನಾರೋಗ್ಯ ಪೀಡಿತ ಆರ್ಥಿಕ ಸ್ಥಿತಿಗೆ ಸಮಗ್ರ ಹಣಕಾಸಿನ ಪ್ರಚೋದನೆಯನ್ನು ಒದಗಿಸಲಿಲ್ಲ ಅಥವಾ ನಮ್ಮ ಸಮಾಜದ ದುರ್ಬಲ ಆರ್ಥಿಕ ರಂಗಗಳನ್ನು ಬೆಂಬಲಿಸಲು ನೇರ ನಗದು ವರ್ಗಾವಣೆಯನ್ನು ಸಹ ಒದಗಿಸಲಿಲ್ಲ. ಸರ್ಕಾರವು ತನ್ನ ವಿಫಲತೆಯನ್ನು ಮುಚ್ಚಿಕೊಳ್ಳಲು ನಾಗರಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳಲಿ ಎನ್ನುವ ಬೇಜವಾಬ್ದಾರಿತನ ಪ್ರದರ್ಶಿಸಿತು. ಇಂಥ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರಕಾರ ತೋರಿದ ಸಂಪೂರ್ಣ ಹೃದಯಹೀನತೆಯ ಪ್ರದರ್ಶನ ಜಗತ್ತಿನ ಬೇರಾವುದೇ ನಾಗರಿಕ ರಾಷ್ಟ್ರಗಳಲ್ಲಿ ಕಾಣಸಿಗುವುದಿಲ್ಲ. ಮೋದಿ ಸರ್ಕಾರದ ಈ ಅಸಮರ್ಥತೆ ಮತ್ತು ಅಜಾಗರೂಕತೆ ಜಾಗತಿಕವಾಗಿ ವ್ಯಾಪಕ ಖಂಡನೆಗೊಳಗಾಯಿತು. ವಿದೇಶಿ ಮಾಧ್ಯಮಗಳಲ್ಲಿ ಮೋದಿಯ ಕಪಟತನ, ಅಸಾಮರ್ಥ್ಯಗಳು ರಾರಾಜಿಸಿದವು.

ಸರ್ವಾಧಿಕಾರ ಮತ್ತು ಧರ್ಮಾಂಧತೆಗಳ ಪರಾಕಾಷ್ಟೆ :

ಈ ಘಟನಾವಳಿಯಿಂದ ಮೋದಿಯ ಇಮೇಜು ಕೊಚ್ಚಿ ಹೋಗುವ ಆತಂಕ ಮೋದಿ, ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಸುರುವಾಯಿತು. ಈ ಡ್ಯಾಮೇಜ್ ನ್ನು ಕಂಟ್ರೋಲ್ ಮಾಡುವ ಕೆಲಸ ಮೋದಿ ಮಾಧ್ಯಮಗಳು, ಬಿಜೆಪಿಯ ಐಟಿ ಸೆಲ್ ಮತ್ತು ಸಂಘ ಪರಿವಾರ ಆರಂಭಿಸಿದವು. ಮೋದಿ ಸ್ವತಃ ಸುದ್ದಿ ವಾಹಿನಿಗಳಲ್ಲಿ ಬಂದು ಕಣ್ಣೀರು ಸುರಿಸುವ ನಾಟಕವಾಡಿದರು. ಗಂಗಾ ನದಿಯಲ್ಲಿ ತೇಲುತ್ತಿರುವ ಶವಗಳ ರಾಶಿ ೨೦೧೫ ಕ್ಕೂ ಮೊದಲಿನವು ಎನ್ನುವ ಸುಳ್ಳು ಸುದ್ದಿ ಹರಡುವ ಕೆಲಸ ಮಾಮೂಲಿನಂತೆ ಬಿಜೆಪಿ ಐಟಿ ಸೆಲ್ ಆರಂಭಿಸಿತು. ಅನುವಂಶಿಯವಾಗಿ ನಕಾರಾತ್ಮಕ ಧೋರಣೆ ಹೊಂದಿರುವ ಸಂಘ ಪರಿವಾರದ ಜನ ಸಕಾರಾತ್ಮಕ ಧೋರಣೆಯ ಕುರಿತು ಬಡಬಡಿಸಲಾರಂಭಿಸಿದರು. ಅಷ್ಟರಲ್ಲಿ ಅಪಾರ ಸಂಖ್ಯೆಯ ಜನರು ಕೊರೋನ ಮಹಾಮಾರಿಗೆ ಬಲಿಯಾಗಿದ್ದರು. ಮೋದಿ ಸರ್ಕಾರದ ವಿರುದ್ಧ ಸಾರ್ವಜನಿಕರ ಕೋಪ ಹೆಚ್ಚಾಗುತ್ತಿದ್ದಂತೆˌ ಹಲವಾರು ರಾಜ್ಯಗಳಲ್ಲಿನ ಬಿಜೆಪಿ ಆಡಳಿತದ ಸರ್ಕಾರಗಳು ಅದನ್ನು ನಿಗ್ರಹಿಸಲು ಅಥವಾ ಜನರ ಗಮನ ಬೇರೆಡೆಗೆ ತಿರುಗಿಸಲು ಹೆಚ್ಚು ಹೆಚ್ಚು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ತೆಗೆದುಕೊಂಡವು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಮ್ಲಜನಕದ ಕೊರತೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೋರಿಕೆ ವ್ಯಕ್ತಪಡಿಸಿದರೆ ಅಂತವರ ವಿರುದ್ಧ ದೇಶದ್ರೋಹದ ಮೊಕದ್ದಮೆ ದಾಖಲಿಸಲು ಆದೇಶ ನೀಡಿದರು. ಸರ್ಕಾರದ ವೈಫಲ್ಯಗಳನ್ನು ಟೀಕಿಸುವವರಿಗೆ ಸವಾಲು ಹಾಕುವ ಮೂಲಕ ಮತ್ತು ಸರ್ಕಾರದ ಕಾರ್ಯಕ್ಷಮತೆಯನ್ನು ಟೀಕಿಸುವ ಪೋಸ್ಟ್‌ಗಳನ್ನು ಅಳಿಸಲು ಸಾಮಾಜಿಕ ಮಾಧ್ಯಮ ತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ಗಳ ಮೇಲೆ ಒತ್ತಡ ಹಾಕಲಾಯಿತು. ಕರ್ನಾಟಕದ ಬಿಜೆಪಿ ಸಂಸದನೊಬ್ಬ ಕೋವಿಡ್ ನಿರ್ವಹಣೆಯ ವಿಫಲತೆಯನ್ನು ಧರ್ಮಾಂಧತೆಯ ಆಧಾರದಲ್ಲಿ ವಿಶ್ಲೇಷಿಸಿ ಮುಖಭಂಗಕ್ಕೀಡಾದ. ಈ ಕೋವಿಡ್ ಬಿಕ್ಕಟ್ಟು ನಮ್ಮ ಅಧಿಕಾರಶಾಹಿ ಮತ್ತು ಶಾಸಕಾಂಗದ ಕೊಳಕು ಮುಖಗಳನ್ನು ಜನರೆದುರಿಗೆ ತೆರೆದಿಟ್ಟಿತು.

ಸಮಗ್ರ ಭಾರತೀಯರ ರಕ್ಷಣೆಗೆ ಸಂಪೂರ್ಣ ಪ್ರಮಾಣದಲ್ಲಿ ಅಲಭ್ಯವಿದ್ದ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡುವ ಭಾರತದ ‘ಲಸಿಕೆ ಮೈತ್ರಿ’ ರಫ್ತು ಕಾರ್ಯಕ್ರಮವು ಒಂದು ಮದೋನ್ಮಥತೆಯ ಕಾರ್ಯವಾಗಿತ್ತು. ಎರಡನೇ ಅಲೆಗೆ ಆಮ್ಲಜನಕ ಪೂರೈಕೆ, ಲಸಿಕೆಗಳು ಉತ್ಪಾದನೆ ಮತ್ತು ಲಭ್ಯತೆ, ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಅಗತ್ಯ ಸಂಪನ್ಮೂಲಗಳನ್ನು ನಿರ್ಮಿಸುವ ಪೂರ್ವ ಸಿದ್ಧತೆಯ ಯಾವ ಕೆಲಸವೂ ಮಾಡದೆ ಪ್ರಧಾನಿ ಮೋದಿಯವರು ೨೦೨೧ ರ ಜನೆವರಿಯಲ್ಲಿ ದಾವೋಸ್ನ ಸಮಾರಂಭವೊಂದರಲ್ಲಿ ಭಾರತವು ಕೋವಿಡ್ ವಿರುದ್ಧ ವಿಜಯ ಸಾಧಿಸಿದೆ ಎಂದು ಘೋಷಿಸುವ ಮೂಲಕ ಜಾಗತಿಕವಾಗಿ ಭಾರತಕ್ಕೆ ಅಪಖ್ಯಾತಿಯನ್ನು ತಂದಿತ್ತರು. ಚುನಾವಣಾ ಭಾಷಣಗಳಲ್ಲಿ ಸಕ್ರೀಯವಾಗುವ ಮೋದಿ ಮತ್ತು ಗ್ರಹ ಮಂತ್ರಿ ಅಮಿತ್ ಶಾ ಆನಂತರ ಭೂಗತರಾದರು. ಅಂದು ಶವಾಗಾರಗಳು, ಸ್ಮಶಾನಗಳು ಮತ್ತು ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ಸಲಕರಣೆಗಳ ಅಭಾವ ಎಲ್ಲೂಲ್ಲು ಕಾಡುತ್ತಿತ್ತು. ಪ್ರಧಾನಿ ಮೋದಿಯವರು ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ರೀತಿಯನ್ನು ಇಡೀ ಜಗತ್ತು ಶ್ಲಾಘಿಸಿದೆ ಎಂದು ಬಡಬಡಿಸಿದ್ದ ಮೋದಿ ಸಂಪುಟದ ಮಂತ್ರಿಗಳು ಭಾರತೀಯರ ಕ್ಷಮೆಗೆ ಕೂಡ ಅರ್ಹರಲ್ಲ ಎನ್ನಬೇಕಿದೆ.

~ ಡಾ. ಜೆ ಎಸ್ ಪಾಟೀಲ.

Tags: Congress PartyCOvid crisisನರೇಂದ್ರ ಮೋದಿಬಿಜೆಪಿ
Previous Post

’ದಿ ವೆಕೆಂಟ್ ಹೌಸ್‌’‌ ಮೂಲಕ ಹೊಸ ಹೆಜ್ಜೆ ಇಟ್ಟ ಎಸ್ತರ್ ನರೋನ

Next Post

ಹೊಸ ರಾಜ್ಯ ಶಿಕ್ಷಣ ನೀತಿ ಸಿಕ್ಕುಗಳು-ಸವಾಲುಗಳು

Related Posts

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!
Top Story

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

by ಪ್ರತಿಧ್ವನಿ
April 14, 2026
0

ಬೆಂಗಳೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. https://youtu.be/jc4uNwRML78?si=OFDsWjRgGzT4buqt ಇಂದು...

Read moreDetails
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಕೋವಿಡ್‌ ಪರಿಣಾಮ; ಎರಡನೇ ವರ್ಷವೂ ಸರ್ಕಾರಿ ಶಾಲಾ ದಾಖಲಾತಿಯಲ್ಲಿ ಏರಿಕೆ

ಹೊಸ ರಾಜ್ಯ ಶಿಕ್ಷಣ ನೀತಿ ಸಿಕ್ಕುಗಳು-ಸವಾಲುಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada