ಉತ್ತರ ದೆಹಲಿಯ ಬುರಾರಿಯಲ್ಲಿ 12ನೇ ತರಗತಿ ವಿದ್ಯಾರ್ಥಿಯನ್ನು ಅತ್ಯಾಚಾರಗೈದ ಆರೋಪದಲ್ಲಿ ಅಮಾನತುಗೊಂಡಿದ್ದ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕನನ್ನು ಪೊಲೀಸರು ಸೋಮವಾರ (ಆಗಸ್ಟ್ 21) ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು ಬಂಧನದ ವಿಡಿಯೊವನ್ನು ಎಕ್ಸ್‌ನಲ್ಲಿ (ಟ್ವಿಟರ್)ನ ಹಂಚಿಕೊಂಡಿದೆ.
2020 ಹಾಗೂ 2021ರ ನಡುವಿನ ತಿಂಗಳುಗಳಲ್ಲಿ ಆರೋಪಿ ತನ್ನ ಗೆಳೆಯನ ಅಪ್ರಾಪ್ತ ಪುತ್ರಿಯನ್ನು ನಿರಂತರ ಅತ್ಯಾಚಾರ ಎಸಗಿದ ಆರೋಪದಲ್ಲಿ ಈತನ ವಿರುದ್ಧ ಪೊಲೀಸರು ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
“ಈ ಕೃತ್ಯದಲ್ಲಿ ಆರೋಪಿಗೆ ಆತನ ಪತ್ನಿ ನೆರವು ನೀಡಿರುವುದರಿಂದ ಹಾಗೂ ಈ ವಿಷಯದ ಕುರಿತು ಪೊಲೀಸರಿಗೆ ಮಾಹಿತಿ ನೀಡದೇ ಇರುವುದರಿಂದ ಅವರ ವಿರುದ್ಧ ಸೆಕ್ಷನ್ 120-ಬಿಯನ್ನು ಎಫ್ಐಆರ್ನಲ್ಲಿ ಸೇರ್ಪಡೆಗೊಳಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸಂತ್ರಸ್ತೆ 12ನೇ ತರಗತಿ ವಿದ್ಯಾರ್ಥಿನಿ. ಆರೋಪಿ ಆಕೆಯನ್ನು ಆರೋಪಿ ದೆಹಲಿ ಚರ್ಚ್ನಲ್ಲಿ ಭೇಟಿಯಾಗಿದ್ದ. 2020ರಲ್ಲಿ ತಂದೆ ಮೃತಪಟ್ಟ ಬಳಿಕ ಬಾಲಕಿ ಖಿನ್ನತೆಗೆ ಒಳಗಾಗಿದ್ದಳು. ಆರೋಪಿ ಆಕೆಯ ಗೆಳೆತನ ಸಂಪಾದಿಸಿ ನೆರವು ನೀಡುವ ನೆಪದಲ್ಲಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿ ಗರ್ಭವತಿಯಾದಾಗ ಈ ವಿಚಾರ ತಿಳಿಸದಂತೆ ಆರೋಪಿ ಬೆದರಿಕೆ ಒಡಿದ್ದ. ಈ ಸಂದರ್ಭ ಆರೋಪಿಯ ಪತ್ನಿ ಬಾಲಕಿಗೆ ನೆರವು ನೀಡುವ ಬದಲು ಆಕೆಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಲು ದೆಹಲಿ ಪೊಲೀಸರು ಬಾಲಕಿಯನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.